716 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಐಡಿಎಫ್​ಸಿ ಫಸ್ಟ್ ಬ್ಯಾಂಕ್

author img

By ETV Bharat Karnataka Desk

Published : Jan 21, 2024, 4:38 PM IST

IDFC First Bank registers 18% increase in Q3 net profit at Rs 716 cr

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಐಡಿಎಫ್ ಸಿ ಫಸ್ಟ್ ಬ್ಯಾಂಕ್​ 716 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ.

ಮುಂಬೈ : ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಐಡಿಎಫ್ ಸಿ ಫಸ್ಟ್ ಬ್ಯಾಂಕ್​ನ ನಿವ್ವಳ ಲಾಭ ಶೇ 18ರಷ್ಟು ಏರಿಕೆಯಾಗಿ 716 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ 605 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು.

ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ (ಎನ್ಐಐ) ವರ್ಷದಿಂದ ವರ್ಷಕ್ಕೆ ಶೇಕಡಾ 30 ರಷ್ಟು ಏರಿಕೆಯಾಗಿದ್ದು, ಹಣಕಾಸು ವರ್ಷ 2023ರ ಮೂರನೇ ತ್ರೈಮಾಸಿಕದಲ್ಲಿ ಆಗಿದ್ದ 3,285 ಕೋಟಿ ರೂ.ಗಳಿಂದ 2024 ರ ಮೂರನೇ ತ್ರೈಮಾಸಿಕದಲ್ಲಿ 4,287 ಕೋಟಿ ರೂ.ಗೆ ಏರಿದೆ. ನಿವ್ವಳ ಬಡ್ಡಿಯ ಲಾಭವು ತ್ರೈಮಾಸಿಕದಲ್ಲಿ ಶೇಕಡಾ 6.42 ರಷ್ಟಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಶೇಕಡಾ 6.13 ರಷ್ಟಿತ್ತು.

ಒಟ್ಟು ಅನುತ್ಪಾದಕ ಆಸ್ತಿಗಳು (ಎನ್​ಪಿಎ) ಒಟ್ಟು ಸಾಲಗಳ ಶೇಕಡಾ 2.04 ಕ್ಕೆ ಇಳಿದಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇಕಡಾ 2.96 ರಷ್ಟಿತ್ತು. ತ್ರೈಮಾಸಿಕದಲ್ಲಿ ನಿವ್ವಳ ಎನ್​ಪಿಎ ಶೇಕಡಾ 0.68 ರಷ್ಟಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 1.74 ರಿಂದ ಸುಧಾರಿಸಿದೆ.

ಬ್ಯಾಂಕಿನ ಸಿಎಎಸ್ಎ ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 28.6 ರಷ್ಟು ಏರಿಕೆಯಾಗಿದ್ದು, ಡಿಸೆಂಬರ್ 31, 2022 ರ ವೇಳೆಗೆ ಇದ್ದ 66,498 ಕೋಟಿ ರೂ.ಗಳಿಂದ 2023 ರ ಡಿಸೆಂಬರ್ 31 ರ ವೇಳೆಗೆ 85,492 ಕೋಟಿ ರೂ.ಗೆ ಏರಿದೆ. ಸಿಎಎಸ್ಎ ಅನುಪಾತವು ಡಿಸೆಂಬರ್ 31, 2023 ರ ವೇಳೆಗೆ ಶೇಕಡಾ 46.8 ರಷ್ಟಿತ್ತು.

ಬ್ಯಾಂಕಿನ ಸಾಧನೆಯ ಬಗ್ಗೆ ಮಾತನಾಡಿದ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಸಿಇಒ ವಿ ವೈದ್ಯನಾಥನ್, "ನಮ್ಮ ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇಕಡಾ 43 ರಷ್ಟು ಬಲವಾಗಿ ಬೆಳೆಯುತ್ತಿವೆ ಮತ್ತು ನಮ್ಮ ಸಿಎಎಸ್ಎ ಅನುಪಾತವು ಶೇಕಡಾ 46.8 ರಷ್ಟಿದೆ. ನಮ್ಮ ಆಸ್ತಿಯ ಗುಣಮಟ್ಟ ಸುಧಾರಿಸುತ್ತಲೇ ಇದೆ." ಎಂದು ಹೇಳಿದರು.

"ನಮ್ಮ ವ್ಯವಹಾರದ ಮಹತ್ವದ ಭಾಗವಾಗಿರುವ ರಿಟೇಲ್, ಗ್ರಾಮೀಣ ಮತ್ತು ಎಸ್ಎಂಇ ವ್ಯವಹಾರದಲ್ಲಿ, ಒಟ್ಟು ಎನ್​ಪಿಎ ಮತ್ತು ನಿವ್ವಳ ಎನ್​ಪಿಎ ಕಡಿಮೆಯಾಗಿದೆ ಮತ್ತು ಡಿಸೆಂಬರ್ 31, 2023 ರ ವೇಳೆಗೆ ಕ್ರಮವಾಗಿ ಶೇಕಡಾ 1.45 ಮತ್ತು ಶೇಕಡಾ 0.50 ರಷ್ಟಿದೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಆರ್ಥಿಕ ಬೆಳವಣಿಗೆಯ ಪ್ರಮುಖ ಅಡಿಪಾಯ ಭಾರತೀಯ ಸ್ಟಾರ್ಟ್ಅಪ್ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.