ETV Bharat / briefs

ಚಾಮರಾಜನಗರ ದುರಂತದ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ.. ಬಿಎಸ್​ವೈ, ಸುಧಾಕರ್, ಸುರೇಶ್ ಕುಮಾರ್ ರಾಜೀನಾಮೆ ನೀಡಲಿ : ಸಿದ್ದರಾಮಯ್ಯ

author img

By

Published : May 3, 2021, 5:09 PM IST

Updated : May 3, 2021, 5:52 PM IST

ಬಹಳಷ್ಟು ಮಂದಿ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ. ಕರ್ನಾಟಕದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತೆ. ಮೊದಲು ನಮ್ಮ ರಾಜ್ಯಕ್ಕೆ ಬೇಕಾದ ಆಕ್ಸಿಜನ್ ಇಟ್ಕೋಬೇಕು. ಕೂಡಲೇ ಸರ್ಕಾರ ಈ ಕ್ರಮಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್​ಗಳ ಕೊರತೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು..

Siddaramaiah
Siddaramaiah

ಬೆಂಗಳೂರು : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಮೂಲಕ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಇದರಿಂದ ನ್ಯಾಯ ಸಿಗುವುದು ಅಸಾಧ್ಯ.

ಇದರಿಂದ ಹೈಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದರ ಜೊತೆಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಮೃತರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಅತ್ಯಂತ ಪ್ರಮುಖವಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಗ್ಯ, ಸಚಿವ ಡಾ ಕೆ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಘಟನೆಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ

ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 23 ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದಾಗಿ ಮರಣ ಹೊಂದಿದ್ದಾರೆ. ಈ ಸಾವುಗಳಿಗೆ ಸರ್ಕಾರ ನೇರ ಹೊಣೆ, ಇವು ಸಾವುಗಳಲ್ಲ. ಸರ್ಕಾರ ನಡೆಸಿದ ಕೊಲೆಗಳು.

ಇದಕ್ಕೆ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ನೇರ ಹೊಣೆ. ಆಕ್ಸಿಜನ್‌ ಸಮಸ್ಯೆಗೆ ಕಾರಣರಾದ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ ಎಂದರು.

ನನಗಿರುವ ಮಾಹಿತಿಯಂತೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 180 ಬೆಡ್‌ಗಳಿದ್ದು, ಅದರಲ್ಲಿ 120 ಆಕ್ಸಿಜನ್‌ ಬೆಡ್‌ಗಳು, 20 ವೆಂಟಿಲೇಟರ್‌ಗಳು ಇವೆ. ಈ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ನಿತ್ಯ 350 ಆಕ್ಸಿಜನ್ ಸಿಲಿಂಡರ್‌ಗಳ ಅಗತ್ಯವಿದೆ. ಈ ಆಕ್ಸಿಜನ್‌ ಸಿಲಿಂಡರ್‌ಗಳು ಮೈಸೂರಿನ ಸದರನ್ ಮತ್ತು ಟರ್ಕಿ ಎಂಬ ಆಕ್ಸಿಜನ್ ಉತ್ಪಾದಕ ಘಟಕಗಳಿಂದ ಸರಬರಾಜಾಗುತ್ತಿದೆ. ಇಲ್ಲಿಗೆ ಶುಕ್ರವಾರದಿಂದ ಆಕ್ಸಿಜನ್ ಸಮಸ್ಯೆಯಾಗಿದೆ.

ಶನಿವಾರ ಕೇವಲ 30 ಸಿಲಿಂಡರ್​ಗಳು ಸರಬರಾಜಾಗಿವೆ. ಚಾಮರಾಜನಗರದ ಅಧಿಕಾರಿಗಳು ಮೈಸೂರಿನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಮ್ಮ ಮಾಜಿ ಸಂಸದರು ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣರವರು ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರನ್ನು ಸಂಪರ್ಕಿಸಿ, ಆಕ್ಸಿಜನ್ ಕೊರತೆಯಾಗುತ್ತಿರುವುದನ್ನು ಗಮನಕ್ಕೆ ತಂದಿದ್ದಾರೆ.

ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. 30 ಸಿಲಿಂಡರ್‌ಗಳಲ್ಲಿ ಭಾನುವಾರ ರಾತ್ರಿ 9 ಗಂಟೆವರೆಗೆ ಆಸ್ಪತ್ರೆಯವರು ಆಕ್ಸಿಜನ್ ನೀಡಿದ್ದಾರೆ. ಆದರೂ ಸರ್ಕಾರ ನಿರ್ಲಕ್ಷ ತೋರಿಸಿದೆ ಎಂದು ಆರೋಪಿಸಿದರು.

ಶಾಸಕಾಂಗ ಸಭೆ ನಡೆಸಿದೆ : ಇಂದು ಶಾಸಕಾಂಗ ಪಕ್ಷದ ವಿಡಿಯೋ ಕಾನ್ಫರೆನ್ಸ್ ಮಾಡಿದೆ. ಶಾಸಕರು ಸಂಸದರೆಲ್ಲ ಸೇರಿ 70 ಮಂದಿ ಭಾಗವಹಿಸಿದ್ದರು. ಆಕ್ಸಿಜನ್ ರೆಮಿಡಿಸಿವರ್, ಐಸಿಯು ಬೆಡ್ ಸಿಗ್ತಾ ಇಲ್ಲ, ಜನ ಸಾಯುತ್ತಿದ್ದಾರೆ ಎಂಬುದೇ ಎಲ್ಲರ ಕಂಪ್ಲೇಂಟ್ ಆಗಿದೆ.

ಬಹಳಷ್ಟು ಮಂದಿ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ. ಕರ್ನಾಟಕದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತೆ. ಮೊದಲು ನಮ್ಮ ರಾಜ್ಯಕ್ಕೆ ಬೇಕಾದ ಆಕ್ಸಿಜನ್ ಇಟ್ಕೋಬೇಕು.

ಕೂಡಲೇ ಸರ್ಕಾರ ಈ ಕ್ರಮಕೈಗೊಳ್ಳಬೇಕು. ಆಕ್ಸಿಜನ್ ಟ್ಯಾಂಕರ್​ಗಳ ಕೊರತೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮಾತ್ರ ಸಾವನ್ನಪ್ಪಿದ್ದಾರೆ: ಸಚಿವ ಸುಧಾಕರ್​

Last Updated : May 3, 2021, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.