ETV Bharat / bharat

ಪೊಲೀಸ್​ ನೇಮಕಾತಿ ದೈಹಿಕ ಪರೀಕ್ಷೆ ಬಳಿಕ ಯುವಕ ಹೃದಯಾಘಾತದಿಂದ ಸಾವು

author img

By

Published : Feb 23, 2023, 12:48 PM IST

ಪೊಲೀಸ್​ ಆಗಬೇಕು ಎಂಬ ಕನಸಿನೊಂದಿಗೆ ಬಂದಿದ್ದ ಯುವಕ ಕನಸು ನನಸಾಗುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

youth died of heart attack
ಹೃದಯಾಘಾತದಿಂದ ಯುವಕ ಸಾವು

ಮುಂಬೈ(ಮಹಾರಾಷ್ಟ್ರ): ಮುಂಬೈಗೆ ಪೊಲೀಸ್​ ನೇಮಕಾತಿಗಾಗಿ ನಡೆಸಿದ ದೈಹಿಕ ಪರೀಕ್ಷೆಯ ನಂತರ ಅಸ್ವಸ್ಥಗೊಂಡ ಯುವಕನೊಬ್ಬ ಸಿಎಸ್‌ಎಂಟಿ ಪ್ರದೇಶದ ಹೋಟೆಲ್‌ನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುಂಬೈನ್ ಮರೋಲ್​ ಹಾಗೂ ನೈಗಾಂವ್​ನಲ್ಲಿರುವ ಪೊಲೀಸ್​ ಮೈದಾನದಲ್ಲಿ ಪೊಲೀಸ್​ ನೇಮಕಾತಿಗಾಗಿ ದೈಹಿಕ ಪರೀಕ್ಷೆ ಆರಂಭವಾಗಿದ್ದು, ಇದರಲ್ಲಿ ಭಾಗವಹಿಸಲು ಅಮರಾವತಿಯಿಂದ ಈ ಯುವಕ ಆಗಮಿಸಿದ್ದನು. ಸಾವನ್ನಪ್ಪಿದವನ ಹೆಸರು ಅಮರ್​ ಅಶೋಕ್​ ಸೋಲಂಕೆ(24).

ಮುಂಬೈನಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗಾಗಿ ರಾಜ್ಯದ ಮೂಲೆ ಮೂಲೆಯಿಂದ ಅನೇಕ ಯುವಕರು ಆಗಮಿಸಿದ್ದಾರೆ. ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗಾಗಿ ಮುಂಬೈಗೆ ಬಂದಿದ್ದ ಅಭ್ಯರ್ಥಿ ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದೆ. ಈ ಘಟನೆ ಬಗ್ಗೆ ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಅಮರ್ ಅಶೋಕ್ ಸೋಲ್ಕೆ ಅಮರಾವತಿಯ ನವಸಾರಿ ನಿವಾಸಿ. ಈತ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗಾಗಿ ಮುಂಬೈಗೆ ಬಂದಿದ್ದನು. ಅಮರ್ ಕೋಟೆ ಪ್ರದೇಶದ ರೆಸಿಡೆನ್ಸಿ ಹೋಟೆಲ್​ನಲ್ಲಿ ತಂಗಿದ್ದನು. ಮಂಗಳವಾರ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ ಬಳಿಕ ಅಮರ್ ತಮ್ಮ ಪರಿಚಯಸ್ಥರೊಬ್ಬರ ಬಳಿ ತನಗೆ ಆರೋಗ್ಯ ಸಮಸ್ಯೆಯಾಗಿದೆ ಎಂದು ಹೇಳಿದ್ದಾನೆ. ಇದಾದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಅಮರ್ ಸೋಲಂಕೆ ಹೋಟೆಲ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪಿದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಓಟದ ವೇಳೆ ಗಣೇಶ್ ಎಂಬಾತ ಸಾವು: ಮುಂಬೈ ವಿಶ್ವವಿದ್ಯಾಲಯದ ಮೈದಾನದಲ್ಲಿ ನೇಮಕಾತಿಗಾಗಿ ನಡೆದ 1,600 ಮೀಟರ್ ದೈಹಿಕ ಪರೀಕ್ಷೆಯ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿ ಗಣೇಶ್ ಉಗ್ಲೆ ತಲೆ ಸುತ್ತು ಬಂದು ಓಡುತ್ತಿದ್ದ ಟ್ರ್ಯಾಕ್​ನಲ್ಲಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಕರ್ತವ್ಯ ನಿರತ ವೈದ್ಯರ ತಂಡ ತಪಾಸಣೆಗೊಳಪಡಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಬಿಕೆಸಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ವಿಶ್ರಮ್ ಅಭ್ಯಂಕರ್, ಗಣೇಶ್​ ಉಗ್ಲೆ ರೈತ ಕುಟುಂಬಕ್ಕೆ ಸೇರಿದ್ದು, ಪೊಲೀಸ್​ ಆಗುವ ಕನಸಿನೊಂದಿಗೆ ಮುಂಬೈಗೆ ಬಂದಿದ್ದರು. ಗಣೇಶ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಹಿಂದಿನ ಮಧ್ಯಾಹ್ನ ವಾಶಿಮ್‌ನಿಂದ ಮುಂಬೈಗೆ ಬಂದಿದ್ದರು. ಆ ನಂತರ ದಾದರ್‌ನಲ್ಲಿ ಸಂಬಂಧಿಕರೊಂದಿಗೆ ಉಳಿದುಕೊಂಡಿದ್ದರು. ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದವರು ಮರುದಿನ ಬೆಳಗ್ಗೆ ಮುಂಬೈ ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಯ ಪ್ರಕ್ರಿಯೆಗೆ ಹಾಜರಾಗಿದ್ದರು.

ಬೆಳಗ್ಗೆ 10.45ರ ಸುಮಾರಿಗೆ ಅಭ್ಯರ್ಥಿ 1600 ಮೀಟರ್ ಓಟದಲ್ಲಿ ಭಾಗವಹಿಸಿದ್ದರು. ಗಣೇಶ 1600 ಮೀಟರ್ ದೂರ ಕ್ರಮಿಸಿದ್ದರು. ಆದರೆ, ದುರದೃಷ್ಟವಶಾತ್, ಅವರು ಅಂತಿಮ ಗೆರೆಯನ್ನು ದಾಟಿದ ತಕ್ಷಣ ರನ್ನಿಂಗ್ ಟ್ರ್ಯಾಕ್‌ನಲ್ಲಿ ಕುಸಿದು ಬಿದ್ದರು. ಗಣೇಶ್ ಉಗ್ಲೆ ಕುಸಿದು ಬಿದ್ದಾಗ ಅವರೊಂದಿಗೆ ಬಂದಿದ್ದ ಅವರ ಸಂಬಂಧಿ ಕೂಡ ಸ್ಥಳದಲ್ಲಿಯೇ ಇದ್ದರು. ಬಿಕೆಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಹಠಾತ್ ಸಾವು ಪ್ರಕರಣ ದಾಖಲಾಗಿದೆ ಎಂದು ವಿಶ್ರಮ್ ಅಭ್ಯಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ಆಡುತ್ತಿದ್ದ ವೇಳೆ ಹೃದಯಾಘಾತ: ಮೈದಾನದಲ್ಲೇ ಉಸಿರು ಬಿಟ್ಟ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.