ETV Bharat / bharat

ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ: ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ

author img

By

Published : Jul 16, 2023, 12:45 PM IST

ದೆಹಲಿಯಲ್ಲಿ ಶನಿವಾರ ಸಂಜೆ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ. ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಸ್ಪಲ್ಪಮಟ್ಟಿಗೆ ಇಳಿಕೆಯಾಗಿದೆ. ಹೀಗಿದ್ದರೂ ಪ್ರವಾಹದ ಭೀತಿ ಮುಂದುವರೆದಿದೆ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಿಳಿಸಿದ್ದಾರೆ.

heavy-rain-in-delhi-flood-in-yamuna-river
ಯಮುನಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಇಳಿಕೆ : ಮುಗಿಯದ ಪ್ರವಾಹ ಭೀತಿ

ನವದೆಹಲಿ : ಕಳೆದ ಕೆಲವು ದಿನಗಳಿಂದ ತುಂಬಿ ಹರಿಯುತ್ತಿರುವ ಯಮುನಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಸ್ವಲ್ಪ ಇಳಿದಿದೆ. ಕಳೆದ ಎರಡು ದಿನಗಳ ಹಿಂದೆ ಅಪಾಯ ಮಟ್ಟ ಮೀರಿ ಏರಿಕೆ ಕಂಡ ನೀರಿನ ಮಟ್ಟವು ಇದೀಗ 205.95 ಮೀಟರ್​ಗೆ ಇಳಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಯಮುನಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಭಾರಿ ಮಳೆಯಾಗದಿದ್ದರೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಆದರೆ ಪ್ರವಾಹದ ಭೀತಿ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.

ಶನಿವಾರ ದೆಹಲಿಯ ಹಲವೆಡೆ ಭಾರಿ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಯಮುನಾ ನದಿ ತುಂಬಿ ಹರಿಯುತ್ತಿರುವುದರಿಂದ ಇಲ್ಲಿನ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಈ ಹಿಂದೆ ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ಕಡಿಮೆಯಾಗಿತ್ತು. ಆದರೆ ಶನಿವಾರ ಸಂಜೆ ಸುರಿದ ಜಡಿ ಮಳೆಯಿಂದಾಗಿ ಮತ್ತೆ ಇಲ್ಲಿನ ಕೆಲವು ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ ಎಂದು ಸಚಿವೆ ಅತಿಶಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಗರದಲ್ಲಿನ ಪ್ರವಾಹ ಪರಿಸ್ಥಿತಿ ಕಡಿಮೆಯಾಗಲು ಇಲ್ಲಿನ ಯಮುನಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಕಡಿಮೆ ಆಗಬೇಕಿದೆ. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ನಗರದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಶನಿವಾರ ಸಂಜೆ ನಗರದಲ್ಲಿ ಮತ್ತೆ ಮಳೆಯಾಗಿದೆ. ನದಿಯಲ್ಲಿ ನೀರು ತುಂಬಿರುವುದರಿಂದ ನಗರದಲ್ಲಿರುವ ನೀರನ್ನು ಪಂಪ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಆಪ್​ ಸಚಿವ ಸೌರಭ್​ ಭಾರದ್ವಾಜ್​, ಇದಕ್ಕೆಲ್ಲ ಪ್ರಮುಖ ಕಾರಣ ಹರ್ಯಾಣ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎಂದಿದ್ದಾರೆ.

ಭಾರಿ ಮಳೆಯಿಂದಾಗಿ ಇಲ್ಲಿನ ಕಾಶ್ಮೀರಿ ಗೇಟ್​ ಪ್ರದೇಶ, ರಿಂಗ್​ ರೋಡ್​ನಲ್ಲಿರುವ ಕೆಂಪುಕೋಟೆಯ ರಸ್ತೆಗಳು ಜಲಾವೃತಗೊಂಡಿದೆ. ಪ್ರವಾಹದಿಂದಾಗಿ ನದಿ ಪಾತ್ರದ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದೆ. ಅಲ್ಲದೆ ದೆಹಲಿಯ ಐಟಿಒ ರಸ್ತೆ, ಯಮುನಾ ಬಜಾರ್​, ಅಕ್ಷರಧಾಮ್​ ಪ್ರದೇಶವೂ ಪ್ರವಾಹದಿಂದ ಮುಳುಗಡೆಯಾಗಿದೆ. ಮಯೂರ್​ ವಿಹಾರ್​ ಪ್ರದೇಶಗಳು ಜಲಾವೃತವಾಗಿದ್ದು, ಇಲ್ಲಿನ ಜನರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಮಳೆಯಿಂದಾಗಿ ಮಥುರಾ ರೋಡ್​ , ಅಪೋಲೋ ಆಸ್ಪತ್ರೆ, ಜಸೋಲಾ ಮೆಟ್ರೋ ಸ್ಟೇಷನ್​, ಸರಿತಾ ವಿಹಾರ್​ ರಸ್ತೆ ಮೇಲ್ಸೆತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ದೆಹಲಿ ಗೇಟ್​ನಿಂದ ಇಂಡಿಯಾ ಗೇಟ್​​ಗೆ ಬರುವ ರಸ್ತೆಯು ಜಲಾವೃತಗೊಂಡಿತ್ತು.

ಹವಾಮಾನ ಇಲಾಖೆಯ ವರದಿ ಪ್ರಕಾರ, ದೆಹಲಿಯಲ್ಲಿ ಮುಂದಿನ ಎರಡು ದಿನಗಳು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರಾಖಂಡ್​​, ಹಿಮಾಚಲಪ್ರದೇಶ​​, ಉತ್ತರಪ್ರದೇಶದಲ್ಲಿ ಮುಂದಿನ ಐದು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಎಂದು ಹೇಳಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ಯಮುನಾ ನದಿ ನೀರಿನ ಮಟ್ಟವು ಶನಿವಾರ ಸಂಜೆ 7 ಗಂಟೆ ಸುಮಾರಿಗೆ 206.87ಗೆ ಇಳಿಕೆಯಾಗಿತ್ತು. ಶನಿವಾರ ಬೆಳಗ್ಗೆ 7 ಗಂಟೆಗೆ ನೀರಿನ ಮಟ್ಟ 207.62 ಮೀಟರ್ ದಾಖಲಾಗಿತ್ತು. ಕಳೆದ ಗುರುವಾರ ರಾತ್ರಿ 8 ಗಂಟೆಗೆ ಸುಮಾರು 208.66 ಮೀಟರ್​ನಷ್ಟು ಇತ್ತು.

ಯಮುನಾ ನದಿಯೂ ಇನ್ನೂ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಜಲಾವೃತಗೊಂಡ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರವಾಹದಿಂದಾಗಿ ಸುಮಾರು 23000 ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಭದ್ರತಾ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಾಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಇತರ ಸಚಿವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಎಂದು ಸಚಿವೆ ಅತಿಶಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : ಯಮುನಾ ನದಿ ಪ್ರವಾಹಕ್ಕೆ ಕುಸಿದು ಬಿದ್ದ ಮೂರು ಅಂತಸ್ತಿನ ಮನೆ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.