ETV Bharat / bharat

ಇಂದು 'ವಿಶ್ವ ಜನಸಂಖ್ಯಾ ದಿನ': ಲಿಂಗ ಸಮಾನತೆ ಮತ್ತು ಸಮೃದ್ಧಿಯ ಭವಿಷ್ಯದೆಡೆಗೆ..

author img

By

Published : Jul 11, 2023, 10:10 AM IST

ಇಂದು ಜುಲೈ 11. ವಿಶ್ವ ಜನಸಂಖ್ಯಾ ದಿನ. ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತು ಅರಿವು ಮೂಡಿಸುವುದು ಈ ದಿನದ ಗುರಿ.

World Population Day
ವಿಶ್ವ ಜನಸಂಖ್ಯಾ ದಿನ

ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಪ್ರಸ್ತುತ ದೇಶದ ಜನಸಂಖ್ಯೆ ವಿಶ್ವಸಂಸ್ಥೆಯ ದತ್ತಾಂಶದ ವರ್ಲ್ಡ್‌ಮೀಟರ್ ಪ್ರಕಾರ 1.4 ಶತಕೋಟಿ. ಕೇವಲ ಒಂದು ರಾಷ್ಟ್ರ ಇಷ್ಟರಮಟ್ಟಿಗೆ ಜನಸಂಖ್ಯೆ ಹೊಂದಿದೆ ಎಂದಾದರೆ ವಿಶ್ವದ ಜನಸಂಖ್ಯೆ ಎಷ್ಟು ಗೊತ್ತೇ? ಪ್ರಪಂಚದಲ್ಲಿ ಒಟ್ಟು 195 ದೇಶಗಳು ವಿಶ್ವಸಂಸ್ಥೆಯ ಮಾನ್ಯತೆ ಪಡೆದಿವೆ. 1985ರಲ್ಲಿ ವಿಶ್ವದ ಜನಸಂಖ್ಯೆಯು ಸುಮಾರು 5 ಬಿಲಿಯನ್ (500 ಕೋಟಿ) ಇತ್ತು. 2023ರ ವೇಳೆಗೆ ಈ ಜನಸಂಖ್ಯೆ ಸುಮಾರು 8 ಶತಕೋಟಿಯಾಗಿದೆ (800 ಕೋಟಿ) ಎಂದು ವರದಿಗಳು ಹೇಳುತ್ತವೆ.

ಭಾರತದಲ್ಲಿ ಜನಸಂಖ್ಯೆ ನಿರಂತರವಾಗಿ ಏರುಗತಿಯಲ್ಲಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು (UNDP) ಜಗತ್ತಿನಲ್ಲಿ ಅಧಿಕ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ಸಂಸ್ಥೆ, ಜನಸಂಖ್ಯಾ ಸ್ಫೋಟವು ಪ್ರಪಂಚದ ಮೇಲೆ ಬೀರುವ ಪರಿಣಾಮಗಳ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 11ರಂದು 'ವಿಶ್ವ ಜನಸಂಖ್ಯಾ ದಿನ' ಆಚರಣೆ ಜಾರಿಗೆ ತಂದಿದೆ. ಹಾಗಾಗಿ ಜನಸಂಖ್ಯೆ ಹೆಚ್ಚಳದ ಪರಿಣಾಮವನ್ನು ಎತ್ತಿ ತೋರಿಸುವ, ಅರಿವು ಮೂಡಿಸುವ ವಿಶ್ವ ಜನಸಂಖ್ಯಾ ದಿನವಾಗಿದೆ.

ಮಿತಿಮೀರಿದ ಜನಸಂಖ್ಯೆ ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಲಿದೆ. ಜನಸಂಖ್ಯೆ ಜಾಸ್ತಿಯಾದಂತೆ ಪರಿಹರಿಸಲಾಗದ ಹಲವಾರು ತೊಂದರೆಗಳು ವಿಶ್ವಕ್ಕೆ ಎದುರಾಗುತ್ತವೆ. ಹೀಗಾಗಿ ಎಲ್ಲ ದೇಶಗಳು ಈಗಾಗಲೇ ಎಚ್ಚೆತ್ತುಕೊಂಡು ತಮ್ಮ ಜನಸಂಖ್ಯೆಯನ್ನು ನಿಯಂತ್ರಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಆಯಾ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಅನುಸರಿಸುವ ಮೂಲಕ ನಾಗರಿಕರು ಕೂಡ ಸಹಕರಿಸಬೇಕಿರುವುದು ಇಂದಿನ ತುರ್ತು. ಮೊದಲೇ ಹೇಳಿದಂತೆ, ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ನೆರೆಯ ಚೀನಾವನ್ನು ಹಿಂದಿಕ್ಕಿ ಅಧಿಕೃತವಾಗಿ ಮೊದಲ ಸ್ಥಾನ ಪಡೆಯುವ ಹಂತದಲ್ಲಿದೆ.

ಈಗಾಗಲೇ ಭಾರತವನ್ನು ನಿರುದ್ಯೋಗದಿಂದ ಹಿಡಿದು ನೂರಾರು ಸಮಸ್ಯೆಗಳು ಕಾಡುತ್ತಿವೆ. ಅಂಥದ್ರಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಆತಂಕಕ್ಕೊಳಗಾಗಿರುವ ಭಾರತದ ಕೇಂದ್ರ, ರಾಜ್ಯ ಸರ್ಕಾರಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳಂತಹ ಹಲವು ಉಪಕ್ರಮಗಳನ್ನು ಕೈಗೊಂಡಿವೆ. ಜನಸಂಖ್ಯೆಯಿಂದ ಭಾರತಕ್ಕೊಂದು ಧನಾತ್ಮಕ ಸಂಗತಿ ರಾಷ್ಟ್ರದ ಅಭಿವೃದ್ಧಿ. ಹೌದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 50ಕ್ಕಿಂತ ಅಧಿಕ ಯುವಕರೇ ಇದ್ದು, ಹೊಸ ಹೊಸ ಪ್ರತಿಭೆಗಳು, ಮಹತ್ವಾಕಾಂಕ್ಷೆ ಹೊಂದಿರುವ ಯುವಕರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಹಾಯವಾಗುತ್ತಿದೆ.

ಈ ಸಾಲಿನ ವಿಶ್ವ ಜನಸಂಖ್ಯಾ ದಿನ 2023ರ ಥೀಮ್ 'ಲಿಂಗ ಸಮಾನತೆಯ ಶಕ್ತಿಯ ಅನಾವರಣ'. ಲಿಂಗ ಸಮಾನತೆಯ ಶಕ್ತಿಯನ್ನು ಅನಾವರಣಗೊಳಿಸುವುದಾಗಿದೆ. ಒಂದು ರಾಷ್ಟ್ರಕ್ಕೆ ಕೇವಲ ಪುರುಷ ಶಕ್ತಿ ಇದ್ದರೆ ಸಾಲದು, ಅದೇ ಪ್ರಮಾಣದಲ್ಲಿ ಮಹಿಳೆಯರ ಅಗತ್ಯವೂ ಇದೆ. ಅವರಿಗೂ ವಿಶೇಷ ಮಹತ್ವವಿದೆ. ಆದ್ದರಿಂದ ಲಿಂಗ ಸಮಾನತೆ ಎನ್ನುವಂತದ್ದು ಎಲ್ಲ ಕ್ಷೇತ್ರದಲ್ಲೂ ಪುರುಷರಷ್ಟೇ ಮಹಿಳೆಯರಿಗೂ ಸಮಾನವಾಗಿರಬೇಕು ಎಂಬುದು ಉದ್ದೇಶ. ಇದರ ಜೊತೆಗ ಈ ಥೀಮ್​ ಮಹಿಳೆಯರಿಗೆ ಸಮಾನ ಹಕ್ಕುಗಳ ಪ್ರಾಮುಖ್ಯತೆ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ವಿಚಾರದ ಮಹತ್ವ ತಿಳಿಸುತ್ತದೆ.

ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಲು ವೇದಿಕೆ ಒದಗಿಸುವ ದಿನವೂ ಹೌದು. ಸರ್ಕಾರಗಳು ಮಹಿಳೆಯರಿಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡರೆ ಮತ್ತು ಹೆಚ್ಚಿದ ಮಾನವ ಬಂಡವಾಳಕ್ಕೆ ಅವಕಾಶಗಳನ್ನು ಒದಗಿಸಿದರೆ, ಅವರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಮಹಿಳೆ ಸ್ವತಃ ಆರ್ಥಿಕ ಬೆಳವಣಿಗೆ ಹೊಂದಿ ಮಾನವಶಕ್ತಿಯ ಲಾಭ ಪಡೆಯುವ ಮಾರ್ಗಗಳನ್ನು ಕಂಡುಹಿಡಿಯಬೇಕು. ಪ್ರತಿ ಬಾರಿ ಅಧಿಕ ಜನಸಂಖ್ಯೆಯ ಬಗ್ಗೆ ಋಣಾತ್ಮಕ ಚಿಂತನೆಗಳಿಗೆ ಬದಲು ಮಾನವ ಬುದ್ಧಿವಂತಿಕೆ ಮತ್ತು ಶ್ರಮವನ್ನು ಬಳಸಿಕೊಳ್ಳುವ ಮಾರ್ಗಗಳನ್ನು ರಾಷ್ಟ್ರಗಳು ಕಂಡುಕೊಂಡರೆ ಸುಸ್ಥಿರ ಪ್ರಪಂಚದ ಗುರಿ ಸಾಧಿಸುವುದು ಸುಲಭ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.