ETV Bharat / bharat

ಕೇಂದ್ರದ ಅಗ್ನಿಪಥ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ಹುಟ್ಟುಹಾಕಲು ಕಾರಣವೇನು?

author img

By

Published : Jun 17, 2022, 7:52 AM IST

ಕೇಂದ್ರದ ಅಗ್ನಿಪಥ ನೇಮಕಾತಿ ಯೋಜನೆ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಹುಟ್ಟುಹಾಕಿದೆ. ಭಾರತೀಯ ಸೇನೆಯ ಅಗ್ನಿಪಥ ನೇಮಕಾತಿ ಯೋಜನೆಗೆ ವಿರೋಧ ಏಕೆ?, ಈ ಹೊಸ ನೇಮಕಾತಿ ಯೋಜನೆಯಿಂದ ಯುವಕರಿಗೆ ಉದ್ಯೋಗದ ಅನುಕೂಲವಿಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

protests in states
ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ

ನವದೆಹಲಿ: ಕೇಂದ್ರದ ರಕ್ಷಣಾ ಇಲಾಖೆ ಭಾರತೀಯ ಸೇನೆಯ ಮೂರು ದಳಗಳ ನೇಮಕಾತಿಗೆ 'ಅಗ್ನಿಪಥ' ಎಂಬ ಹೊಸ ಯೋಜನೆ ಘೋಷಿಸಿತ್ತು. ಆದರೆ, ಈಗ ದೇಶದಲ್ಲಿ ಸೇನೆಗೆ ಸೇರುವ ಆಕಾಂಕ್ಷಿಗಳಿಂದ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಹಾರ, ರಾಜಸ್ಥಾನ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ.

ಅಗ್ನಿಪಥ ನೇಮಕಾತಿ ಯೋಜನೆಗೆ ವಿರೋಧ ಏಕೆ?: ಭಾರತೀಯ ಸೇನೆಯ ಅಗ್ನಿಪಥ ನೇಮಕಾತಿ ಯೋಜನೆ ಈ ಹೆಸರು ಕೇಳಿದರೆ ಈಗ ಉತ್ತರ ಭಾರತದಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಬೆಂಕಿಯಾಗುತ್ತಿದ್ದಾರೆ. ರೈಲು, ಬಸ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿ ಅಗ್ನಿಪಥ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಗ್ನಿಪಥ ನೇಮಕಾತಿ ಯೋಜನೆಗೆ ಭದ್ರತೆ ಕುರಿತು ಸಂಪುಟ ಸಮಿತಿ ಮಂಗಳವಾರ ಅನುಮತಿ ನೀಡಿದೆ. ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ 4 ವರ್ಷ ಮಾತ್ರ ಸೇವೆಗೆ ಅವಕಾಶ ಸಿಗಲಿದೆ. ಹದಿನೇಳೂವರೆ ವರ್ಷದಿಂದ 22 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ 10ನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ.

ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ 4 ವರ್ಷ ಪೂರೈಸಿದ ಬಳಿಕ ಸೇನೆ ಕೆಲಸ ಬಿಟ್ಟು ಬರಬೇಕು. ಈ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ರೆಗ್ಯುಲರ್ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ. ಯೋಜನೆಯಿಂದ ಇಷ್ಟು ವರ್ಷಗಳ ಕಾಲ ಮಾಡುತ್ತಿದ್ದ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ.

ಭಾರತದಲ್ಲಿ 2032ರ ವೇಳೆಗೆ ಸೇನೆಯಲ್ಲಿ ಶೇ. 50ರಷ್ಟು ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಕಾರ್ಯನಿರ್ವಹಣೆ ಮಾಡುವ ಲೆಕ್ಕಾಚಾರ ಇದೆ. 90 ದಿನಗಳಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವರ್ಷ 45 ಸಾವಿರ‌ ಮಂದಿ ಅಗ್ನಿಪಥ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹಾಲಿ ಇರುವ ವ್ಯವಸ್ಥೆಯಡಿ ಸೇನೆಯಲ್ಲಿ ಸೈನಿಕರಾಗಿ ನೇಮಕವಾದರೆ 12 ರಿಂದ 15 ವರ್ಷ ಸೇವೆಗೆ ಅವಕಾಶ ಇದೆ. ಆದರೆ, ಅಗ್ನಿಪಥದಲ್ಲಿ ಕೇವಲ 4 ವರ್ಷ ಮಾತ್ರ ಸೇವೆಗೆ ಅವಕಾಶ ಇದೆ. ಹೀಗಾಗಿ, ಸೇನೆಗೆ ಸೇರುವ ಆಕಾಂಕ್ಷೆ ಇರುವ ನಿರುದ್ಯೋಗಿ ಯುವಕರಿಗೆ ನಿರಾಸೆ ಆಗಿದೆ. ಈ ನಿರಾಸೆ ಈಗ ಆಕ್ರೋಶವಾಗಿ ಪರಿವರ್ತನೆಯಾಗಿದೆ.

ಸೇನೆಗೆ ಸೇರುವ ಆಕಾಂಕ್ಷಿಗಳ ಬೇಡಿಕೆ ಏನು?:

  • ಸೇನೆಯಲ್ಲಿ 15 ವರ್ಷ ಸೈನಿಕ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು.
  • 4 ವರ್ಷದ ಅಗ್ನಿಪಥ ಯೋಜನೆಯ ಘೋಷಣೆ ಸರಿಯಲ್ಲ.
  • ಕಳೆದ 2 ವರ್ಷಗಳಿಂದ ಸೇನೆಗೆ ಸೈನಿಕರ ನೇಮಕಾತಿಯೇ ನಡೆದಿಲ್ಲ.
  • ಶೀಘ್ರವಾಗಿ ಹಳೆ ಪದ್ದತಿಯಡಿ ಸೈನಿಕರ ನೇಮಕಾತಿಗೆ ಆಗ್ರಹ.
  • ಅಗ್ನಿಪಥ ಯೋಜನೆಯಿಂದ ಉಜ್ವಲ ಭವಿಷ್ಯ ಇಲ್ಲ.
  • ಅಗ್ನಿಪಥ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇಲ್ಲ.
  • ಸೇನೆಯಲ್ಲಿ 4 ‌ವರ್ಷದ ಸೇವೆ ಬಳಿಕ ಮತ್ತೆ ನಿರುದ್ಯೋಗಿಗಳಾಗಬೇಕು. ಇಲ್ಲವೇ ಸೆಕ್ಯೂರಿಟಿ ಗಾರ್ಡ್ ಆಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಹೀಗಾಗಿ ಅಗ್ನಿಪಥ ಯೋಜನೆಗೆ ಯುವಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಆಕ್ಷೇಪಗಳಿಗೆ ಉತ್ತರ ನೀಡಿದ ಕೇಂದ್ರ ಗೃಹ ಇಲಾಖೆ: ಆದರೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯ ಆಕ್ಷೇಪಗಳಿಗೆ ಉತ್ತರ ನೀಡುತ್ತಿದೆ. ಅಗ್ನಿಪಥ ಯೋಜನೆಯಡಿ ನೇಮಕಗೊಂಡವರನ್ನು 'ಅಗ್ನಿವೀರರು' ಎಂದು ಕರೆಯಲಾಗುತ್ತದೆ. ಅಗ್ನಿವೀರರಿಗೆ ಪ್ರಾರಂಭದಲ್ಲಿ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದರೇ, ಉತ್ತಮ ಕೌಶಲ್ಯದ ತರಬೇತಿ ಸಿಗಲಿದೆ. ಹೀಗಾಗಿ, ಅಗ್ನಿ ಪಥ ಯೋಜನೆಯ ಸೇವೆ ಸಲ್ಲಿಸಿ, ಸೇನೆಯಿಂದ ಹೊರ ಬಂದ ಬಳಿಕ ಬೇರೆ ಉದ್ಯೋಗಾವಕಾಶಗಳು ಸಿಗುತ್ತವೆ.

ಬೇರೆ ಉದ್ಯೋಗಾವಕಾಶಗಳಲ್ಲಿ ಸೇನೆಯಲ್ಲಿ ತರಬೇತಿ ಪಡೆದ ಅಗ್ನಿವೀರರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಸೇನೆಯಿಂದ ಹೊರ ಬಂದ ಬಳಿಕ ಕೌಶಲ್ಯಯುತ ಯುವಕರಾಗಿರುತ್ತಾರೆ. ಕೇಂದ್ರದ ಗೃಹ ಇಲಾಖೆಯ ಉದ್ಯೋಗದಲ್ಲಿ ಅಗ್ನಿ ವೀರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರದ ಗೃಹ ಇಲಾಖೆ ಹೇಳಿದೆ.

ಅಗ್ನಿವೀರರಿಗೆ ಆದ್ಯತೆ: ಕೇಂದ್ರೀಯ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಇದೇ ರೀತಿ ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯ ಸರ್ಕಾರದಿಂದಲೂ ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮೂರು ರಾಜ್ಯ ಸರ್ಕಾರಗಳು ಹೇಳಿವೆ. ಅಗ್ನಿವೀರರು ಅಗ್ನಿಪಥ ಯೋಜನೆಗೆ ಆಯ್ಕೆಯಾದ ಬಳಿಕ ಶಿಕ್ಷಣ ಮುಂದುವರಿಸಲು ಕೂಡ ಅವಕಾಶ ಮಾಡಿಕೊಡಲು ಕೇಂದ್ರದ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದಾಗ್ಯೂ, ಎರಡು ದಿನಗಳ ನಂತರ, ರಕ್ಷಣಾ ಸೇವೆಯ ಆಕಾಂಕ್ಷಿಗಳು ಬಿಹಾರದ ಹಲವಾರು ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಜೆಹನಾಬಾದ್ ಶಾಸಕ ಕುಮಾರ್ ಕೃಷ್ಣಮೋಹನ್ ಮಾತನಾಡಿ, ರಕ್ಷಣಾ ಸೇವೆಗಳಿಗೆ ಸೇರಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ 'ಆತ್ಮಹತ್ಯೆ' ಎಂದು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರ ಈಗಿನ ಮಾನದಂಡಗಳನ್ನು ಬದಲಾಯಿಸುವ ಮೂಲಕ ವಿದ್ಯಾರ್ಥಿಗಳನ್ನು ವಂಚಿಸಿದೆ ಎಂದು ದೂರಿದ್ದಾರೆ.

ಈ ಹಿಂದೆ ಮಾಡಿದಂತೆ ಪರೀಕ್ಷೆಯನ್ನು ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಕೇವಲ ನಾಲ್ಕು ವರ್ಷಗಳ ಕಾಲ ಯಾರೂ ಸಶಸ್ತ್ರ ಪಡೆಗಳಿಗೆ ಸೇರಲು ಇಷ್ಟಪಡುವುದಿಲ್ಲ ಎಂದು ಪ್ರತಿಭಟನೆ ನಿರತರು ಆಗ್ರಹಿದ್ದಾರೆ. ನಾವು ಸೈನ್ಯಕ್ಕೆ ಆಯ್ಕೆಯಾಗಲು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇವೆ. ಇದು ಕೇವಲ ನಾಲ್ಕು ವರ್ಷಗಳ ಕಾಲ ಒಪ್ಪಂದದ ಅವಧಿಯಲ್ಲಿರುತ್ತದೆ ಎಂದು ನಮಗೆ ತಿಳಿದಿದೆ. ಇದು ನಮ್ಮಂತಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಾಗಿದೆ ಎಂದು ಸೇನಾ ಆಕಾಂಕ್ಷಿಯೊಬ್ಬರು ಹೇಳಿದರು.

  • सेना भर्ती में केंद्र सरकार की नई योजना का देश में हर तरफ़ विरोध हो रहा है। युवा बहुत नाराज़ हैं। उनकी माँग एकदम सही हैं।

    सेना हमारे देश की शान है, हमारे युवा अपना पूरा जीवन देश को देना चाहते हैं, उनके सपनों को 4 साल में बांधकर मत रखिए।

    1/2

    — Arvind Kejriwal (@ArvindKejriwal) June 16, 2022 " class="align-text-top noRightClick twitterSection" data=" ">

ಕಾಂಗ್ರೆಸ್​​ ವಿರೋಧ: ಅಗ್ನಿಪಥ ಯೋಜನೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ಯೋಜನೆಯು ಬಹು ಅಪಾಯಗಳನ್ನು ಹೊಂದಿದೆ ಮತ್ತು ಸಶಸ್ತ್ರ ಪಡೆಗಳ ದೀರ್ಘಕಾಲದ ಸಂಪ್ರದಾಯಗಳು ಮತ್ತು ನೀತಿಗಳನ್ನು ಬುಡಮೇಲು ಮಾಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಈ ಯೋಜನೆಯು ವಿವಾದಾತ್ಮಕವಾಗಿದೆ ಮತ್ತು ಹಲವು ಅಪಾಯಗಳನ್ನು ಹೊಂದಿದೆ. ಸಶಸ್ತ್ರ ಪಡೆಗಳ ದೀರ್ಘಕಾಲದ ಸಂಪ್ರದಾಯಗಳು ಮತ್ತು ನೀತಿಗಳನ್ನು ಬುಡಮೇಲು ಮಾಡುತ್ತದೆ ಮತ್ತು ಯೋಜನೆಯಡಿ ನೇಮಕಗೊಂಡ ಸೈನಿಕರಿಗೆ ಯಾವುದೇ ಸೇವಾ ಭದ್ರತೆಯಿಲ್ಲ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಟ್ವೀಟ್: ಗುರುವಾರ ದೇಶದ ಹಲವು ರಾಜ್ಯಗಳಲ್ಲಿ ಆಂದೋಲನ ಮತ್ತು ಪ್ರತಿಭಟನೆಗೆ ಸಾಕ್ಷಿಯಾಗುತ್ತಿದ್ದಂತೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಸೇನಾ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ದೇಶದಲ್ಲಿ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಯುವ ಜನರು ತುಂಬಾ ಕೋಪಗೊಂಡಿದ್ದಾರೆ. ಬೇಡಿಕೆಗಳು ಸರಿಯಾಗಿವೆ. ಸೇನೆಯು ನಮ್ಮ ದೇಶದ ಹೆಮ್ಮೆ, ನಮ್ಮ ಯುವಕರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ನೀಡಲು ಬಯಸುತ್ತಾರೆ. ಅವರ ಕನಸುಗಳನ್ನು 4 ವರ್ಷಗಳಲ್ಲಿ ಕಟ್ಟಿಕೊಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್​ ಯೋಜನೆಗೆ ಭಾರೀ ವಿರೋಧ.. ಕಲ್ಲು ತೂರಾಟ, ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.