ETV Bharat / bharat

ಮಹಿಳೆಯರ ಮೇಲಿನ ದೌರ್ಜನ್ಯ.. ಅರಣ್ಯ, ಪೊಲೀಸ್ ಸಿಬ್ಬಂದಿ ಸೇರಿ 215 ಆರೋಪಿಗಳ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್​

author img

By PTI

Published : Sep 29, 2023, 3:36 PM IST

1992 Vachathi Atrocity: ತಮಿಳುನಾಡಿನ ವಚಾತಿ ಪ್ರಕರಣದಲ್ಲಿ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 215 ಆರೋಪಿಗಳನ್ನು ದೋಷಿಗಳೆಂದು ಹಾಗೂ ಅವರಿಗೆ ವಿಧಿಸಿದ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೇ, 18 ಸಂತ್ರಸ್ತ ಮಹಿಳೆಯರಿಗೆ 10 ಲಕ್ಷ ರೂಪಾಯಿಗಳ ಪರಿಹಾರಕ್ಕೆ ಆದೇಶಿಸಿದೆ.

Vachathi atrocity: HC upholds conviction of over 200 persons, directs compensation for rape victims
ಮಹಿಳೆಯರ ಮೇಲಿನ ದೌರ್ಜನ್ಯ.. ಅರಣ್ಯ, ಪೊಲೀಸ್ ಸಿಬ್ಬಂದಿ ಸೇರಿ 215 ಆರೋಪಿಗಳ ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ನಡೆದ 30 ವರ್ಷಗಳ ಹಿಂದಿನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಆದಿವಾಸಿಗಳ ಮೇಲೆ ದಬ್ಬಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 215 ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.

1992ರಲ್ಲಿ ಧರ್ಮಪುರಿ ಜಿಲ್ಲೆಯ ವಚಾತಿ ಗ್ರಾಮದಲ್ಲಿ ಶ್ರೀಗಂಧ ಮರಗಳ ಕಳ್ಳಸಾಗಣೆ ಸಂದರ್ಭದಲ್ಲಿ ನಡೆದ ದಾಳಿ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಆದಿವಾಸಿಗಳ ಮೇಲೆ ದಬ್ಬಾಳಿಕೆ ಕುರಿತಂತೆ 215 ಮಂದಿಯನ್ನು ತಪ್ಪಿತಸ್ಥರು ಎಂದು ಧರ್ಮಪುರಿಯ ಕೆಳ ನ್ಯಾಯಾಲಯ ಆದೇಶ ಹೊರಡಿಸಿತ್ತು. ಅಲ್ಲದೇ, ಅಪರಾಧಿಗಳಿಗೆ 1 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಮೇಲ್ಮನವಿಗಳನ್ನು ಉಚ್ಛ ನ್ಯಾಯಾಲಯವು ವಜಾಗೊಳಿಸಿದೆ.

ನ್ಯಾಯಮೂರ್ತಿ ಪಿ.ವೇಲ್ಮುರುಗನ್, ಈ ಘಟನೆಯ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 18 ಮಹಿಳೆಯರಿಗೆ ತಕ್ಷಣವೇ ತಲಾ 10 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದ್ದಾರೆ. ಈ ಮೊತ್ತದಲ್ಲಿ ಅತ್ಯಾಚಾರದ ಆರೋಪಿಗಳು ಐದು ಲಕ್ಷ ರೂಪಾಯಿ ವಸೂಲಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಸಂತ್ರಸ್ತರ ಪರ ವಕೀಲರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 1992ರ ಜೂನ್ 20ರಂದು ಕಾಡುಗಳ್ಳ ವೀರಪ್ಪನ್‌ಗಾಗಿ 155 ಅರಣ್ಯ ಸಿಬ್ಬಂದಿ, 108 ಪೊಲೀಸರು ಮತ್ತು ಆರು ಕಂದಾಯ ಅಧಿಕಾರಿಗಳ ತಂಡವು ಹುಡುಕಾಟ ನಡೆಸುತ್ತಿತ್ತು. ಇದೇ ನೆಪದಲ್ಲಿ ವಚಾತಿ ಎಂಬ ಬುಡಕಟ್ಟು ಗ್ರಾಮವನ್ನು ಪ್ರವೇಶಿಸಿದ್ದ ತಂಡದ ಸಿಬ್ಬಂದಿ, ಆದಿವಾಸಿಗಳ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ, ಅಲ್ಲಿನ ಆಸ್ತಿ - ಪಾಸ್ತಿ ನಾಶ ಮಾಡಿ ಸುಮಾರು 12 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ 269 ಜನರು ಹೆಸರು ಆರೋಪಿಗಳ ಪಟ್ಟಿಯಲ್ಲಿ ಸೇರಿತ್ತು. ಈ ಪೈಕಿ 54 ಮಂದಿ ವಿಚಾರಣೆಯ ಬಾಕಿ ಇರುವಾಗಲೇ ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯ ನಾಲ್ವರು ಐಎಫ್‌ಎಸ್ ಅಧಿಕಾರಿಗಳು, 84 ಮಂದಿ ಪೊಲೀಸ್ ಸಿಬ್ಭಂದಿ ಹಾಗೂ ಕಂದಾಯ ಇಲಾಖೆಯ ಐವರು ಸೇರಿದಂತೆ 126 ಸಿಬ್ಬಂದಿಯನ್ನು ದೋಷಿಗಳೆಂದು ಧರ್ಮಪುರಿ ನ್ಯಾಯಾಲಯವು ತೀರ್ಪು ನೀಡಿತ್ತು. ವಚಾತಿ ಗ್ರಾಮದಲ್ಲಿ ಈ ಕ್ರೂರ ಘಟನೆ ನಡೆದಿದ್ದರಿಂದ ಇದು ವಚಾತಿ ಪ್ರಕರಣವೆಂದೇ ಕುಖ್ಯಾತಿ ಪಡೆದಿದೆ.

ಇದನ್ನೂ ಓದಿ: ಮೇಲ್ಜಾತಿ ಯುವತಿಯ ಪ್ರೀತಿಸಿದ್ದ ವಿದ್ಯಾರ್ಥಿ ಕೊಲೆ ಕೇಸ್: 8 ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.