ETV Bharat / bharat

ಉತ್ತರ ಪ್ರದೇಶ ಚುನಾವಣೆಗೆ ಮುಹೂರ್ತ ಫಿಕ್ಸ್​: 7 ಹಂತಗಳಲ್ಲಿ ವೋಟಿಂಗ್​, ಮಾರ್ಚ್​​ 10ಕ್ಕೆ ಫಲಿತಾಂಶ

author img

By

Published : Jan 8, 2022, 5:14 PM IST

Updated : Jan 8, 2022, 5:25 PM IST

Uttar Pradesh assembly Election 2022: ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್​, ಸಮಾಜವಾದಿ ಪಕ್ಷಗಳಿಗೆ ಮಹತ್ವ ಪಡೆದುಕೊಂಡಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಇಂದು ಘೋಷಣೆಯಾಗಿದೆ. ಕೋವಿಡ್ ಕಾಲದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಇದು ಮಹತ್ವ ಪಡೆದುಕೊಂಡಿದೆ.

Uttar pradesh assembly Election date
Uttar pradesh assembly Election date

ಲಖನೌ(ಉತ್ತರ ಪ್ರದೇಶ): ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ಫೆಬ್ರವರಿ 10ರಿಂದ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್​​ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.

ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಪ್ರಮುಖವಾಗಿ ಕೋವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಿದೆ.

Uttar pradesh assembly Election date
ಪಂಚ ರಾಜ್ಯಗಳ ಮತದಾನದ ಮಾಹಿತಿ ಇಂತಿದೆ...

ಉತ್ತರ ಪ್ರದೇಶ ಮತದಾನ ದಿನಾಂಕದ ಸಂಪೂರ್ಣ ವಿವರ..

  • ಫೆ.10ರಂದು ಮೊದಲ ಹಂತದ ಮತದಾನ (58 ವಿಧಾನಸಭೆ ಕ್ಷೇತ್ರ)
  • ಫೆ. 14ರಂದು ಎರಡನೇ ಹಂತ(55 ವಿಧಾನಸಭೆ ಕ್ಷೇತ್ರ)
  • ಫೆ. 20ರಂದು ಮೂರನೇ ಹಂತ(59ವಿಧಾನಸಭೆ ಕ್ಷೇತ್ರ)
  • ಫೆ. 23ರಂದು ನಾಲ್ಕನೇ ಹಂತ(60ವಿಧಾನಸಭೆ ಕ್ಷೇತ್ರ)
  • ಫೆ. 27ರಂದು ಐದನೇ ಹಂತ(60 ವಿಧಾನಸಭೆ ಕ್ಷೇತ್ರ)
  • ಮಾರ್ಚ್​​ 3ರಂದು 6ನೇ ಹಂತ(57 ವಿಧಾನಸಭೆ ಕ್ಷೇತ್ರ)
  • ಮಾರ್ಚ್​​ 7ರಂದು 7ನೇ ಹಂತದ ವೋಟಿಂಗ್​(54ವಿಧಾನಸಭೆ ಕ್ಷೇತ್ರ)
  • ಮಾರ್ಚ್​ 10ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ, ಫಲಿತಾಂಶ ಪ್ರಕಟ

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ವಿಶೇಷವೆಂದರೆ ಕೋವಿಡ್ ಕಾಲದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಒಂದು ಗಂಟೆ ಕಾಲ ಹೆಚ್ಚಿನ ಸಮಯವನ್ನು ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಸಲದ ಚುನಾವಣೆಯಲ್ಲಿ ಅಭ್ಯರ್ಥಿಗಳು ಆನ್​ಲೈನ್ ಮೂಲಕ ನಾಮಪತ್ರ ಸಲ್ಲಿಸಬಹುದಾಗಿದೆ.

ಇದನ್ನೂ ಓದಿರಿ: Assembly Election 2022: ಪಂಚರಾಜ್ಯ ಫೈಟ್.. ಫೆ. 10ರಿಂದ 7 ಹಂತದಲ್ಲಿ ಮತದಾನ, ಮಾರ್ಚ್​ 10ಕ್ಕೆ ರಿಸಲ್ಟ್​ ​

2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಊಹೆ ತಲೆಕೆಳಗಾಗುವಂತೆ ಮಾಡಿದ್ದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​​ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. 403 ಕ್ಷೇತ್ರಗಳ ಪೈಕಿ 312 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಈ ಸಲದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಕಾಂಗ್ರೆಸ್​, ಬಹುಜನ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಯೋಗಿ ಸರ್ಕಾರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್​ನಿಂದಲೂ ಭರ್ಜರಿ ತಯಾರಿ ನಡೆದಿದೆ. ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರದ ಅಖಾಡಕ್ಕಿಳಿದು ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಸಮಾಜವಾದಿ ಪಕ್ಷ ಸಹ ಈ ಬಾರಿ ತನ್ನ ಬಲ ಪ್ರದರ್ಶಿಸಲು ಹಲವು ಕಸರತ್ತುಗಳನ್ನು ನಡೆಸಿದೆ. ಬಿಎಸ್​ಪಿ ಸುಪ್ರಿಮೋ ಮಾಯಾವತಿ ಸಹ ಮತ್ತೆ ಯುಪಿಯಲ್ಲಿ ಪುಟಿದೇಳಲು ಸಜ್ಜಾಗಿದ್ದಾರೆ. ಅಂತಿಮವಾಗಿ ಇಲ್ಲಿನ ಜನ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಮಾರ್ಚ್​ 10 ರಂದೇ ತಿಳಿಯಲಿದೆ.

Last Updated : Jan 8, 2022, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.