ETV Bharat / bharat

ಯುವತಿಗೆ ಕಿರುಕುಳ ಆರೋಪ: ದಲಿತ ಯುವಕನಿಗೆ ಥಳಿಸಿ, ಮೂತ್ರ ಕುಡಿಸಿ, ಹುಬ್ಬುಗಳ ಕಿತ್ತು ಕ್ರೌರ್ಯ

author img

By ETV Bharat Karnataka Team

Published : Nov 25, 2023, 8:20 PM IST

UP Dalit Teenager Beaten, Forced to Drink Urine: ದಲಿತ ಯುವಕನಿಗೆ ಮೂವರು ಯುವಕರ ಗುಂಪೊಂದು ಥಳಿಸಿ, ಮೂತ್ರ ಕುಡಿಸಿ, ಹುಬ್ಬುಗಳನ್ನು ಕಿತ್ತು, ಬಾಯಿಗೆ ಮಣ್ಣು ತುಂಬಿದ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ.

UP Dalit teenager beaten, eyebrows plucked out, forced to drink urine for alleged molestation
ಯುವತಿಗೆ ಕಿರುಕುಳ ಆರೋಪ; ದಲಿತ ಯುವಕನಿಗೆ ಥಳಿಸಿ, ಮೂತ್ರ ಕುಡಿಸಿ, ಹುಬ್ಬುಗಳ ಕಿತ್ತು ಕ್ರೌರ್ಯ

ಜೌನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಹದಿಹರೆಯದ ದಲಿತ ಯುವಕನೊಬ್ಬನಿಗೆ ಮೂವರು ಯುವಕರ ಗುಂಪೊಂದು ಥಳಿಸಿ, ಮೂತ್ರ ಕುಡಿಸಿದೆ. ಅಲ್ಲದೇ, ದುಷ್ಕರ್ಮಿಗಳು ಯುವಕನ ಹುಬ್ಬುಗಳನ್ನು ಕಿತ್ತು, ಬಾಯಿಗೆ ಮಣ್ಣು ಕೂಡ ತುಂಬಿದ್ದಾರೆ. ನಂತರ ಬಾಲಕನ ತಂದೆಗೆ ಕರೆ ಮಾಡಿ, ಬರಹೇಳಿ ಆತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿನ ಸುಜನ್​ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸದ್ಯ ಈ ಬಗ್ಗೆ ಬಾಲಕನ ತಂದೆ ಮತ್ತು ಯುವಕರು ಪರಸ್ಪರ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಬಾಲಕನ ತಂದೆ ಹಲ್ಲೆ ಮತ್ತು ಅಮಾನವೀಯ ವರ್ತನೆಯ ಬಗ್ಗೆ ದೂರು ನೀಡಿದರೆ, ಯುವಕರು ತಮ್ಮ ಸಂಬಂಧಿ ಯುವತಿಗೆ ಕಿರುಕುಳ ನೀಡಿದ ಆರೋಪವನ್ನು ಮಾಡಿದ್ದಾರೆ. ಎರಡೂ ಕಡೆಯವರಿಂದ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: ಶೇಖ್‌ಪುರ ಖುಥಾನಿ ಗ್ರಾಮದ ಪೆಟ್ರೋಲ್ ಪಂಪ್ ಬಳಿ ಸೈಕಲ್‌ನಲ್ಲಿ ಸಂತ್ರಸ್ತ ಯುವಕ ತೆರಳುತ್ತಿದ್ದ. ಈತ ತನ್ನ ಸ್ನೇಹಿತನನ್ನು ಸೈಕಲ್‌ನಲ್ಲಿ ಮನೆಗೆ ಬಿಟ್ಟು ಹಿಂದಿರುಗುತ್ತಿದ್ದ. ಈ ವೇಳೆ ಮೂರ್ನಾಲ್ಕು ಯುವಕರು ತಡೆದಿದ್ದಾರೆ. ಅಲ್ಲಿಯೇ ಬಾಲಕನನ್ನು ನಿಂದಿಸಿ ಥಳಿಸಿದ್ದಾರೆ. ನಂತರ, ಅಲ್ಲಿಂದ ಆತನನ್ನು ಹತ್ತಿರದ ಕೊಳದ ಕಡೆಗೆ ಎಳೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿದ್ದಾರೆ.

ಅಷ್ಟೇ ಅಲ್ಲ, ದುಷ್ಕರ್ಮಿಗಳು ಯುವಕನ ಬಾಯಿಗೆ ಮಣ್ಣನ್ನು ತುಂಬಿ, ಬಲವಂತವಾಗಿ ಮೂತ್ರ ಕುಡಿಸಿದ್ದಾರೆ. ಕೈಗಳಿಂದ ಹುಬ್ಬುಗಳನ್ನು ಕಿತ್ತಿದ್ದಾರೆ. ಇದಾದ ಬಳಿಕ ಯುವಕನ ತಂದೆಯನ್ನು ಸ್ಥಳಕ್ಕೆ ಕರೆಸಿ ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಸಂತ್ರಸ್ತನ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮತ್ತೊಂದೆಡೆ, ಇದಕ್ಕೆ ಪ್ರತಿಯಾಗಿ ಹಲ್ಲೆ ನಡೆಸಿದ ಆರೋಪಿತ ಯುವಕರು ಕೂಡ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ. ಈ ಯುವಕ ಕಾಲೇಜಿಗೆ ಹೋಗುತ್ತಿದ್ದಾಗ ತಮ್ಮ ಸಂಬಂಧಿ ಯುವತಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೇ, ಯುವತಿ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ್ದಾನೆ ಎಂದು ಯುವಕರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಹಲ್ಲೆಗೆ ಒಳಗಾದ ಯುವಕನನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಪ್ರತಿಕ್ರಿಯಿಸಿ, ಯುವಕನಿಗೆ ಮೂವರು ಥಳಿಸಿ ನಿಂದಿಸಿದ ಸಂಬಂಧ ಒಂದು ದೂರು ಹಾಗೂ ಇದೇ ಯುವಕ ಹಾಗೂ ಸ್ನೇಹಿತರು ಸೇರಿಕೊಂಡು ಯುವತಿಗೆ ಕಿರುಕುಳ ನೀಡಿರುವ ಸಂಬಂಧ ಮತ್ತೊಂದು ದೂರು ಬಂದಿದೆ. ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಲಿತ ಯುವಕನ ಅಪಹರಿಸಿ ಹಲ್ಲೆ.. ಮುಖದ ಮೇಲೆ ಮೂತ್ರ ವಿಸರ್ಜನೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.