ETV Bharat / bharat

ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಕೇಂದ್ರ ಕಾನೂನು ಸಚಿವ

author img

By PTI

Published : Sep 21, 2023, 2:17 PM IST

ಕೇಂದ್ರ ಕಾನೂನು ಸಚಿವ ಅರ್ಜುನ ರಾಮ್​ ಮೇಘವಾಲ್ ಅವರು ಇಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರು.

ಅರ್ಜುನ ರಾಮ್​ ಮೇಘವಾಲ್
ಅರ್ಜುನ ರಾಮ್​ ಮೇಘವಾಲ್

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಹತ್ವದ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ್​ ಮೇಘವಾಲ್​ ಮಂಡಿಸಿದರು. ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ 128ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಮಸೂದೆ ಮಂಡಿಸಿದ ಸಚಿವರು, ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಮಹಿಳೆಯರ ಹೆಸರಿನಲ್ಲಿ ಶೂನ್ಯ ಬ್ಯಾಲೆನ್ಸ್ ಜನ್‌ಧನ್ ಖಾತೆಯಿಂದ ಹಿಡಿದು ಶೌಚಾಲಯಗಳನ್ನು ನಿರ್ಮಿಸುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ನಿಲಯಗಳ ಹಂಚಿಕೆ ಮತ್ತು ಉಚಿತ ಅಡುಗೆ ಅನಿಲ ಮಹಿಳೆಯರ ಘನತೆ ಹೆಚ್ಚಿಸುವ ಕಾರ್ಯಕ್ರಮಗಳಾಗಿವೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಶೇ.68 ಪ್ರತಿಶತದಷ್ಟು ಮಹಿಳಾ ಫಲಾನುಭವಿಗಳೇ ಇದ್ದಾರೆ ಎಂದು ಹೇಳಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ಎಸ್‌ಸಿ ಎಸ್‌ಟಿ ವರ್ಗಕ್ಕೂ ಅನ್ವಯಿಸುತ್ತದೆ. ಡಿಲಿಮಿಟೇಶನ್​ ಆಯೋಗವು ಮಹಿಳೆಯರಿಗೆ ಎಷ್ಟು ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದು ಮೇಘವಾಲ್​ ಹೇಳಿದರು. ಮೇಲ್ಮನೆಯಲ್ಲಿ ವಿಧೇಯಕ ಮಂಡಿಸಿದ ಕೇಂದ್ರ ಸಚಿವರು, ಮಸೂದೆ ಅಂಗೀಕಾರವಾದ ಕೂಡಲೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದೆ ಎಂದರು.

ನಿನ್ನೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪರವಾಗಿ 454 ಸದಸ್ಯರು ಮತ ಚಲಾಯಿಸಿದರೆ, ಅಸಾದುದ್ದೀನ್​ ಒವೈಸಿ ಮತ್ತು ಇಮ್ತಿಯಾಜ್​ ಜಲೀಲ್​ ವಿರುದ್ಧವಾಗಿ ಮತ ಚಲಾಯಿಸಿದ್ದರು.

ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಗೂ ಮುನ್ನ ಮಾತನಾಡಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, ಮಸೂದೆಯನ್ನು ಪರಿಚಯಿಸುವ ಮೊದಲು ಎರಡು ದಿನಗಳ ಕಾಲ ಈ ಕುರಿತು ನೊಟೀಸ್ ನೀಡುವ ನಿಬಂಧನೆ ಕೈಬಿಡಲಾಗಿದೆ. ಈ ಮೂಲಕ ಲೋಕಸಭೆಯಲ್ಲಿ ಅಂಗೀಕಾರವಾದ ಮರುದಿನವೇ ಮಹಿಳಾ ಮೀಸಲಾತಿ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದೆ ವೇಳೆ, ಪಿಟಿ ಉಷಾ, ಜಯಾ ಬಚ್ಚನ್ (ಎಸ್‌ಪಿ), ಫೌಜಿಯಾ ಖಾನ್ (ಎನ್‌ಸಿಪಿ), ಡೋಲಾ ಸೇನ್ (ಟಿಎಂಸಿ) ಮತ್ತು ಕನಿಮೊಳಿ ಎನ್‌ವಿಎನ್ ಸೋಮು (ಡಿಎಂಕೆ) ಸೇರಿದಂತೆ ಹಲವಾರು ಮಹಿಳಾ ಸಂಸದರನ್ನು ಧನಖರ್ ಅವರು ಸದನದ ಕಲಾಪಗಳನ್ನು ನಡೆಸುವ ಉಪಾಧ್ಯಕ್ಷರನ್ನಾಗಿ ಹೆಸರಿಸಿದರು.

1996 ರಿಂದಲೂ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಲಾಗುತ್ತಿದು ಇದು ಏಳನೇ ಪ್ರಯತ್ನವಾಗಿದೆ. ಪ್ರಸ್ತುತ ಭಾರತದ 95 ಕೋಟಿ ನೋಂದಾಯಿತ ಮತದಾರರಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಸಂಸತ್ತಿನಲ್ಲಿ ಕೇವಲ 15 ಪ್ರತಿಶತದಷ್ಟು ಮತ್ತು ರಾಜ್ಯ ವಿಧಾನಸಭೆಗಳಲ್ಲಿ 10 ಪ್ರತಿಶತದಷ್ಟು ಮಾತ್ರ ಮಾಹಿಳೆಯರು ಇದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲು ಮಸೂದೆ ವಿರೋಧಿಸಿದ ಇಬ್ಬರು ಸಂಸದರು ಯಾರು ಗೊತ್ತೇ?: ಕಾರಣ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.