ETV Bharat / bharat

ಮತ್ತೆ ಏರಿಕೆಯತ್ತ ಕಿಚನ್​ ಕ್ವೀನ್​ ಟೊಮೆಟೊ ಬೆಲೆ.. ಮುಂದಿನ ದಿನಗಳಲ್ಲಿ ಕೆಜಿಗೆ 300 ತಲುಪುವ ಸಾಧ್ಯತೆ!

author img

By

Published : Aug 3, 2023, 2:05 PM IST

ಭಾರಿ ಮಳೆಯಿಂದ ಟೊಮೆಟೊ ಪೂರೈಕೆ ಮೇಲೆ ಪೆಟ್ಟು ಬಿದ್ದಿದ್ದು, ಪೂರೈಕೆ ಕೊರತೆಯಿಂದ ಬೆಲೆಯಲ್ಲಿ ಏರಿಕೆಯಾಗತೊಡಗಿದೆ.

Tomato
ಟೊಮೆಟೊ

ನವದೆಹಲಿ: ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 300 ರೂಪಾಯಿಗೆ ತಲುಪುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬ ಕಳವಳವನ್ನು ಸಗಟು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ. ಟೊಮೆಟೊ ಬರುವುದು ಕಡಿಮೆಯಾಗುವುದರಿಂದ ಸಗಟು ದರದಲ್ಲಿ ಏರಿಕೆಯಾಗಲಿದೆ. ಅದರ ಪರಿಣಾಮ ಚಿಲ್ಲರೆ ವ್ಯಾಪಾರದ ಮೇಲೆ ಬೀರಲಿದೆ ಎನ್ನುತ್ತಾರೆ ಸಗಟು ವ್ಯಾಪಾರಿಗಳು.

ದಿಲ್ಲಿ ಮೂಲದ ಆಜಾದ್‌ಪುರ ಟೊಮೆಟೊ ಸಂಘದ ಅಧ್ಯಕ್ಷ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ಅಶೋಕ್‌ ಕೌಶಿಕ್‌ ಮಾತನಾಡಿ, 'ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಟೊಮೆಟೊ ಬೆಳೆ ಹಾನಿಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 160 ರೂ.ನಿಂದ 220 ರೂ.ಗೆ ಏರಿಕೆಯಾಗಿದ್ದು, ಇದರಿಂದ ಚಿಲ್ಲರೆ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಟೊಮೆಟೊ, ಕ್ಯಾಪ್ಸಿಕಂ ಮತ್ತು ಇತರ ಋತುಮಾನದ ತರಕಾರಿಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿರುವುದರಿಂದ ತರಕಾರಿಗಳ ಸಗಟು ವ್ಯಾಪಾರಿಗಳು ನಷ್ಟವನ್ನು ಎದುರಿಸುತ್ತಿದ್ದಾರೆ. ಇದೇ ವೇಳೆ ಮದರ್ ಡೈರಿಯು ತನ್ನ 'ಸಫಲ್ ಸ್ಟೋರ್' ಮೂಲಕ ಟೊಮೆಟೊವನ್ನು ಕೆಜಿಗೆ 259 ರೂ.ನಂತೆ ಮಾರಾಟ ಮಾಡುತ್ತಿದೆ. ಏಷ್ಯಾದ ಅತಿದೊಡ್ಡ ಸಗಟು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಾಗಿರುವ ಆಜಾದ್‌ಪುರ ಮಂಡಿಯಲ್ಲಿ ಟೊಮೆಟೊದ ಸಗಟು ಬೆಲೆ ಬುಧವಾರ ಕೆಜಿಗೆ ಗುಣಮಟ್ಟವನ್ನು ಅವಲಂಬಿಸಿ 170 - 220 ರೂ. ಆಗಿದೆ ಎಂದು ಅಶೋಕ್ ಕೌಶಿಕ್ ಹೇಳಿದರು.

ಆಜಾದಪುರ ತರಕಾರಿ ಮಾರುಕಟ್ಟೆಯ ಸಗಟು ವ್ಯಾಪಾರಿ ಸಂಜಯ್ ಭಗತ್ ಮಾತನಾಡಿ, 'ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ತರಕಾರಿ ಸಾಗಿಸಲು ಸಾಕಷ್ಟು ತೊಂದರೆಯಾಗಿದೆ. ಬೆಳೆಗಾರರಿಂದ ತರಕಾರಿ ತರಲು ವಾಡಿಕೆಗಿಂತ ಆರು - ಎಂಟು ಗಂಟೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟೊಮೆಟೊ ಬೆಲೆ ಕೆಜಿಗೆ 300 ರೂ. ಆಗಿದೆ ಎಂದು ತಿಳಿಸಿದ್ದಾರೆ.

ಮಳೆಯಿಂದಾಗಿ ಟೊಮೆಟೊ ಪೂರೈಕೆ ಸ್ಥಗಿತ: ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬರುವ ಟೊಮೆಟೊ ಮತ್ತು ಇತರ ತರಕಾರಿಗಳ ಗುಣಮಟ್ಟವೂ ಕುಸಿದಿದೆ. ಹಿಮಾಚಲ ಪ್ರದೇಶದಲ್ಲಿ ಜುಲೈನಲ್ಲಿ ಸುರಿದ ಭಾರೀ ಮಳೆಗೆ ಬೆಳೆ ಹಾನಿಯಾಗಿದೆ. ಪ್ರಮುಖವಾಗಿ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆ ವ್ಯತ್ಯಯದಿಂದಾಗಿ ಟೊಮೆಟೊ ಬೆಲೆ ಒಂದು ತಿಂಗಳಿನಿಂದ ಹೆಚ್ಚುತ್ತಲೇ ಇದೆ ಎಂದು ಸಂಜಯ್ ಭಗತ್ ಹೇಳಿದರು.

ಪೂರೈಕೆ ಕೊರತೆಯಿಂದ ಬೆಲೆ ಏರಿಕೆ: ಆಜಾದ್‌ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ಅನಿಲ್ ಮಲ್ಹೋತ್ರಾ ಮಾತನಾಡಿ, ಕೇಂದ್ರ ಸರ್ಕಾರ ಜುಲೈ 14 ರಿಂದ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. ಈ ಕಾರಣದಿಂದಾಗಿ, ರಾಷ್ಟ್ರ ರಾಜಧಾನಿಯಲ್ಲಿ ಚಿಲ್ಲರೆ ಬೆಲೆಗಳು ಸುಧಾರಿಕೆ ಕಂಡಿತ್ತು. ಆದರೆ ಪೂರೈಕೆ ಕಡಿಮೆಯಾದ ಕಾರಣ ಮತ್ತೆ ಬೆಲೆ ಏರತೊಡಗಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಪೂರೈಕೆ ಮತ್ತು ಬೇಡಿಕೆ ಎರಡೂ ಕಡಿಮೆಯಾಗಿದ್ದು, ಮಾರಾಟಗಾರರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ತರಕಾರಿಗಳ ಸಾಗಣೆ ವಿಳಂಬ, ಗುಣಮಟ್ಟದಲ್ಲಿ ಕ್ಷೀಣತೆ ಮುಂತಾದ ತೊಂದರೆಗಳನ್ನು ಮಾರಾಟಗಾರರು ಎದುರಿಸುತ್ತಿದ್ದಾರೆ. ಇದಲ್ಲದೇ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಟೊಮೇಟೊ ಚಿಲ್ಲರೆ ಬೆಲೆ ಬುಧವಾರ ಕೆಜಿಗೆ 203 ರೂ.ಗೆ ತಲುಪಿದ್ದರೆ, ಮದರ್ ಡೈರಿಯ ಸಫಲ್ ಸ್ಟೋರ್‌ನಲ್ಲಿ ಕೆಜಿಗೆ 259 ರೂ. ಆಗಿದೆ. ಅಸಹಜ ಹವಾಮಾನದಿಂದಾಗಿ ಕಳೆದ ಎರಡು ತಿಂಗಳಿಂದ ದೇಶಾದ್ಯಂತ ಟೊಮೆಟೊ ಪೂರೈಕೆಗೆ ತೊಂದರೆಯಾಗಿದೆ. ಕಳೆದ ಎರಡು ದಿನಗಳಿಂದ ಆಜಾದ್‌ಪುರ ಮಂಡಿಗೂ ಆಗಮನದಲ್ಲಿ ಭಾರಿ ಇಳಿಕೆಯಾಗಿದೆ. ಪೂರೈಕೆ ಕೊರತೆಯಿಂದಾಗಿ ಸಗಟು ಮಾರುಕಟ್ಟೆಯಲ್ಲಿ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಚಿಲ್ಲರೆ ಬೆಲೆಯ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ: ದಾಖಲೆ ಮಟ್ಟದಲ್ಲಿ ಟೊಮೆಟೊ ಬೆಲೆ.. ಇಲ್ಲಿ ಕೆಜಿ ಟೊಮೆಟೊಗೆ 224 ರೂಪಾಯಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.