ETV Bharat / bharat

ಒಂದು ಭಾಷೆ, ಸಂಸ್ಕೃತಿ ಹೇರಲು ಪ್ರಯತ್ನಿಸುವವರು ದೇಶದ ಶತ್ರುಗಳು: ಸಿಎಂ ಸ್ಟಾಲಿನ್

author img

By

Published : Jul 30, 2022, 6:42 PM IST

ಕೇರಳದ ತ್ರಿಶೂರ್‌ನಲ್ಲಿ ನಡೆಯುತ್ತಿರುವ "ಭಾರತ @75 ಮನೋರಮಾ ನ್ಯೂಸ್ ಕಾನ್ ಕ್ಲೇವ್ 2022" ರಲ್ಲಿ ಚೆನ್ನೈನಿಂದ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದ ತಮಿಳುನಾಡು ಸಿಎಂ ಸ್ಟಾಲಿನ್​, ಇತ್ತೀಚೆಗೆ 27 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದರು.

Those who try to impose one language, one culture are enemies of the country: CM MK Stalin
ಒಂದು ಭಾಷೆ, ಸಂಸ್ಕೃತಿ ಹೇರಲು ಪ್ರಯತ್ನಿಸುವವರು ದೇಶದ ಶತ್ರುಗಳು: ಸಿಎಂ ಸ್ಟಾಲಿನ್

ಚೆನ್ನೈ(ತಮಿಳುನಾಡು): ಪತ್ರಕರ್ತರ ಬಂಧನ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ಕ್ರಮ ಕೇಂದ್ರ ಸರ್ಕಾರದ ನಿರಂಕುಶ ವರ್ತನೆಯಾಗಿದೆ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಬಗೆದ ದ್ರೋಹ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಂದು ಭಾಷೆ, ಒಂದು ನಂಬಿಕೆ ಮತ್ತು ಒಂದು ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವವರು ದೇಶದ ಶತ್ರುಗಳು ಮತ್ತು ಅಂಥ ದುಷ್ಟ ಶಕ್ತಿಗಳಿಗೆ ಇಲ್ಲಿ ಯಾವುದೇ ಸ್ಥಳವಿಲ್ಲ ಎಂದು ಅವರು ಹೇಳಿದರು.

ಕೇರಳದ ತ್ರಿಶೂರ್‌ನಲ್ಲಿ ನಡೆಯುತ್ತಿರುವ "ಭಾರತ @75 ಮನೋರಮಾ ನ್ಯೂಸ್ ಕಾನ್ ಕ್ಲೇವ್ 2022" ರಲ್ಲಿ ಚೆನ್ನೈನಿಂದ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ 27 ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಹೇಳಿದರು.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಶ್ಲಾಘಿಸಿದ ಸ್ಟಾಲಿನ್, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಸಿಪಿಐ (ಎಂ) ನಡುವಿನ ಮೈತ್ರಿಯು ಸೈದ್ಧಾಂತಿಕವಾಗಿದ್ದು, ಇದು ಕೇವಲ ಚುನಾವಣಾ ಮೈತ್ರಿಯಲ್ಲ ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ಸಾಕಷ್ಟು ಹೋರಾಟದ ನಂತರ ನೀಡಲಾದ ಸಂವಿಧಾನದ ಹಕ್ಕುಗಳನ್ನು ಕಿತ್ತುಕೊಳ್ಳುವುದು ತಪ್ಪು. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ದ್ರೋಹ ಎಂಬುದು ನನ್ನ ಅಭಿಪ್ರಾಯ ಎಂದರು.

ವಿವಿಧ ವಿಚಾರಗಳ ಸಂಘರ್ಷಕ್ಕೆ ವೇದಿಕೆಯಾಗಬೇಕಾದ ಸಂಸತ್ತಿನಲ್ಲಿ ಸಂಸದರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ. ಅಲ್ಲದೆ ಡಿಎಂಕೆ ಸೇರಿದಂತೆ 27 ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ತನ್ನ ರಾಜ್ಯಪಾಲರ ಮೂಲಕ ಸಮಾನಾಂತರ ಸರ್ಕಾರಗಳನ್ನು ನಡೆಸಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಅಡೆತಡೆಗಳನ್ನು ಎದುರಿಸಿ ನಾವು ನಮ್ಮ ರಾಜ್ಯಗಳಲ್ಲಿ ಆಡಳಿತ ನಡೆಸಬೇಕಾಗಿದೆ. ನಾವು ಜನರ ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪೂರೈಸಬೇಕಿದೆ. ಅದನ್ನೆಲ್ಲ ಪೂರೈಸುವ ಭರವಸೆ ನಮಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.