ETV Bharat / bharat

ಭಾರತದಲ್ಲಿ ಬಿಬಿಸಿ ನಿಷೇಧ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

author img

By

Published : Feb 10, 2023, 3:46 PM IST

ಭಾರತದಲ್ಲಿ ಬಿಬಿಸಿ ಮಾಧ್ಯಮ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿತು. ಅರ್ಜಿಯು ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದ್ದು, ವಿಚಾರಣೆಗೆ ಅರ್ಹವಾಗಿಲ್ಲ ಎಂದು ಹೇಳಿದೆ.

SC dismisses plea seeking complete ban on BBC from operating in India
SC dismisses plea seeking complete ban on BBC from operating in India

ನವದೆಹಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಕ್ಕಾಗಿ ಭಾರತದಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅರ್ಜಿಯು ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ ಮತ್ತು ವಿಚಾರಣೆಗೆ ಅರ್ಹವಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ.ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ರೈತ ಬೀರೇಂದ್ರ ಕುಮಾರ್ ಸಿಂಗ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ರಿಟ್ ಅರ್ಜಿಯು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದೆ ಮತ್ತು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಮತ್ತು ಅದೇ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.

ಆರಂಭದಲ್ಲಿ ನ್ಯಾಯಮೂರ್ತಿ ಖನ್ನಾ ಅವರು, ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯಿಂದ ಕೂಡಿದೆ, ಇದು ಯಾವುದೇ ಅರ್ಹತೆ ಪಡೆದಿಲ್ಲ. ನೀವು ಇದನ್ನು ವಾದ ಮಾಡುವುದಾದರೂ ಹೇಗೆ? ಒಟ್ಟಾರೆ ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ನಾನು ಭಾವಿಸುತ್ತೇನೆ ಎಂದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಂಕಿ ಆನಂದ್, ಸಾಕ್ಷ್ಯಚಿತ್ರ ಹೊರಬಿದ್ದ ಹಿನ್ನೆಲೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದರು. ಇಂದು ಭಾರತೀಯರೊಬ್ಬರು ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಿಯಾಗಿರುವ ಸಂದರ್ಭವನ್ನು ಪರಿಗಣಿಸುವಂತೆ ಕೋರಿದರು.

ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಮತ್ತು ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ ದೇಶ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಾಕ್ಷ್ಯಚಿತ್ರವು ಇದಕ್ಕೆ ಕುಂದು ತರುತ್ತದೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿತು. ನೀವು ಕೇಳುತ್ತಿರುವುದಾದರೂ ಏನು? ನಾವು ಸಂಪೂರ್ಣ ಸೆನ್ಸರ್​ಶಿಪ್ ಹಾಕಬೇಕೆಂದು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿತು.

ನಿರ್ಭಯಾ ಪ್ರಕರಣ, ಕಾಶ್ಮೀರ ಸಮಸ್ಯೆ ಮತ್ತು ಮುಂಬೈ ಗಲಭೆ ಸಂದರ್ಭದಲ್ಲೂ ಇಂಥದೇ ಕೃತ್ಯ ನಡೆದಿದೆ ಎಂದು ಆನಂದ್ ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಪೀಠ, ನಾವು ಇನ್ನಷ್ಟು ಸಮಯವನ್ನು ವ್ಯರ್ಥ ಮಾಡುವುದಿಲ್ಲ ಎಂದು ಹೇಳಿ ಮನವಿ ವಜಾಗೊಳಿಸಿತು. ಭಾರತ ಮತ್ತು ಭಾರತ ಸರ್ಕಾರದ ವಿರುದ್ಧ ಬಿಬಿಸಿ ಪಕ್ಷಪಾತಿಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಸಾಕ್ಷ್ಯಚಿತ್ರವು ಭಾರತ ಮತ್ತು ಅದರ ಪ್ರಧಾನಿಯ ಜಾಗತಿಕ ಬೆಳವಣಿಗೆಯ ವಿರುದ್ಧ ಆಳವಾದ ಪಿತೂರಿಯ ಭಾಗವಾಗಿದೆ ಎಂದು ಅರ್ಜಿದಾರರು ವಾದಿಸಿದರು.

2002 ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ಸಾಕ್ಷ್ಯಚಿತ್ರವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಇದು ನರೇಂದ್ರ ಮೋದಿ ವಿರುದ್ಧ ಪ್ರಚಾರ ಮಾಡುವ ಸಂಚಿನ ಭಾಗವಾಗಿದೆ. ಇದು ಅವರ ಇಮೇಜ್ ಅನ್ನು ಹಾಳುಮಾಡುವ ಹಾಗೂ ಹಿಂದೂ ಧರ್ಮ ವಿರೋಧಿ ಪ್ರಚಾರವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಭಾರತ ವಿರೋಧಿ ಹಾಗೂ ಭಾರತ ಸರ್ಕಾರ ವಿರೋಧಿ ವರದಿ ಮಾಡಿದ್ದಕ್ಕಾಗಿ/ ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ/ ಕಿರುಚಿತ್ರ ನಿರ್ಮಾಣ ಮಾಡಿದ್ದಕ್ಕಾಗಿ ಭಾರತದಲ್ಲಿನ ಬಿಬಿಸಿ ಪತ್ರಕರ್ತ ಸಿಬ್ಬಂದಿಯ ವಿರುದ್ಧ IPC ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಅಡಿಯಲ್ಲಿ ತನಿಖೆ ನಡೆಸಬೇಕೆಂದು ಮತ್ತು ಅವರು ದೋಷಿ ಎಂದು ಕಂಡುಬಂದಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸುವಂತೆ ಕೂಡ ಅರ್ಜಿಯಲ್ಲಿ ಕೋರಲಾಗಿತ್ತು.

ಇದನ್ನೂ ಓದಿ: ವಲಸೆ ಕಾರ್ಮಿಕರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆಯೇ:ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.