ETV Bharat / bharat

ಕಾಂಗ್ರೆಸ್​ಗೆ ಭಯೋತ್ಪಾದನೆಯೇ ವೋಟ್​ ಬ್ಯಾಂಕ್: ಪ್ರಧಾನಿ ಮೋದಿ ಆರೋಪ

author img

By

Published : Nov 27, 2022, 9:38 PM IST

ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್​ ಭಯೋತ್ಪಾದನೆಯನ್ನೇ ವೋಟ್​ ಬ್ಯಾಂಕ್​ ಆಗಿ ಬಳಸಿಕೊಂಡಿದೆ. ಭಾರತೀಯ ಸೇನೆಯ ಸಾಹಸವನ್ನೇ ಪಕ್ಷ ಪ್ರಶ್ನಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್​ ಚುನಾವಣೆ ಸಮಾವೇಶದಲ್ಲಿ ಟೀಕಾಪ್ರಹಾರ ಮಾಡಿದರು.

pm-modi-in-gujarat
ಪ್ರಧಾನಿ ಮೋದಿ ಆರೋಪ

ಖೇಡಾ (ಗುಜರಾತ್): ಮುಂದಿನ ತಿಂಗಳು ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯ ಭರ್ಜರಿ ಪ್ರಚಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ಮಾಡಿದರು. ಕಾಂಗ್ರೆಸ್​ ಭಯೋತ್ಪಾದನೆಯನ್ನೇ ವೋಟ್​ ಬ್ಯಾಂಕ್​ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಭಾರತೀಯ ಸೇನೆ ಪಾಕಿಸ್ತಾನದ ಗಡಿ ದಾಟಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿತ್ತು. ಕಾಂಗ್ರೆಸ್​ ಅಧಿಕಾರದ ವೇಳೆ ದೇಶದಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು. ಭಯೋತ್ಪಾದನೆಯನ್ನೇ ಆ ಪಕ್ಷ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ದೇಶದ ಹಳೆಯ ಪಕ್ಷವು ಟೆರರಿಸಂ ಅನ್ನು ಟಾರ್ಗೆಟ್​ ಮಾಡುವ ಬದಲಾಗಿ ನನ್ನನ್ನು ಗುರಿಯಾಗಿಸಿದೆ ಎಂದು ಟೀಕಿಸಿದರು.

ಗುಜರಾತ್ ಈ ಹಿಂದೆ ಭಯೋತ್ಪಾದನೆಗೆ ಗುರಿಯಾಗಿತ್ತು. ಸೂರತ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ಸ್ಫೋಟಗಳಲ್ಲಿ ಹಲವು ಜನರು ಸಾವನ್ನಪ್ಪಿದರು. ಆಗ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿತ್ತು. ಆದರೆ, ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆಯ ಪಿಡುಗನ್ನು ದೇಶದಿಂದಲೇ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಉಗ್ರ ನಿಗ್ರಹಕ್ಕೆ ಡಬಲ್ ಇಂಜಿನ್​ ಸರ್ಕಾರ: 2014 ರಲ್ಲಿ ದೇಶವಾಸಿಗಳು ನೀಡಿದ ಮತದಿಂದಾಗಿ ಭಯೋತ್ಪಾದನೆ ಹತ್ತಿಕ್ಕಲು ಸಾಧ್ಯವಾಯಿತು. ಗಡಿಯಲ್ಲಿ ಉಗ್ರರು ದಾಳಿ ಮಾಡಬೇಕಾದರೆ, ಸಾಕಷ್ಟು ಯೋಚಿಸಬೇಕಿದೆ. ನಮ್ಮ ವೀರಯೋಧರು ಮಾಡಿದ ಸರ್ಜಿಕಲ್​ ಸ್ಟ್ರೈಕ್​ ಅನ್ನು ಕಾಂಗ್ರೆಸ್​ ಪ್ರಶ್ನಿಸಿತ್ತು. ಕರ್ಫ್ಯೂ ಕಟ್ಟುನಿಟ್ಟಿನ ನಿಯಮ ಹೇಗಿರುತ್ತದೆ ಎಂಬುದು 25 ವರ್ಷದ ಈಗಿನ ಯುವಜನತೆ ಕಂಡಿಲ್ಲ. ಉಗ್ರರ ದಾಳಿಯಿಂದ ಅವರನ್ನು ರಕ್ಷಿಸಬೇಕಿದೆ. ಬಿಜೆಪಿಯ ಡಬಲ್​ ಇಂಜಿನ್​ ಸರ್ಕಾರದಿಂದಲೇ ಇದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿರುವ ಹಲವಾರು ಪಕ್ಷಗಳೂ ಈಗ ದೇಶದಲ್ಲಿ ಹುಟ್ಟಿಕೊಂಡಿವೆ. ಬಾಟ್ಲಾ ಹೌಸ್ ಎನ್‌ಕೌಂಟರ್ ವೇಳೆ ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಬೆಂಬಲಿಸಿ ಕೂಗಿದರು. ಭಯೋತ್ಪಾದನೆ ಕೂಡ ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಆಗಿದೆ. ಕಾಂಗ್ರೆಸ್​ ಒಂದೇ ಅಲ್ಲ, ಇದೇ ಮನಸ್ಥಿತಿ ಹೊಂದಿರುವ ಹಲವು ಪಕ್ಷಗಳು ಈಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಗುಜರಾತ್​ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಓದಿ: ಏಕರೂಪ ನಾಗರಿಕ ಸಂಹಿತೆ ರಾಷ್ಟ್ರೀಯ ವಿಚಾರ, ಜಾರಿಗೆ ಬದ್ಧ: ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.