ETV Bharat / bharat

ಶಿಕ್ಷಣ, ನೌಕರಿ ಮಾಡುವಂತೆ ಪತ್ನಿಗೆ ಹೇಳುವುದು ಕ್ರೌರ್ಯವಲ್ಲ: ಹೈಕೋರ್ಟ್

author img

By

Published : Aug 18, 2022, 5:57 PM IST

Updated : Aug 18, 2022, 6:04 PM IST

ಉನ್ನತ ಶಿಕ್ಷಣ ಪಡೆಯುವಂತೆ ಮತ್ತು ನೌಕರಿ ಮಾಡುವಂತೆ ಪತ್ನಿಗೆ ಹೇಳುವುದು ಕ್ರೌರ್ಯವಲ್ಲ. ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್​ ತೀರ್ಪು.

Telling wife to pursue education, work is not cruelty
Telling wife to pursue education, work is not cruelty

ಬೆಂಗಳೂರು: ಪತ್ನಿಗೆ ಉನ್ನತ ಶಿಕ್ಷಣ ಮುಂದುವರೆಸುವಂತೆ ಅಥವಾ ಉದ್ಯೋಗ ಮಾಡುವಂತೆ ಹೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಪತಿ ಮತ್ತು ಆತನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498-A ಅಡಿಯಲ್ಲಿ ಡಾ. ಶಶಿಧರ್ ಸುಬ್ಬಣ್ಣ ಎಂಬುವರು ಮತ್ತು ಅವರ ತಾಯಿಯನ್ನು ದೋಷಿಗಳೆಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಇದರಲ್ಲಿನ ಸೆಕ್ಷನ್ 34 ಪತ್ನಿಯ ಮೇಲಿನ ಕ್ರೌರ್ಯದ ಬಗ್ಗೆ ವ್ಯವಹರಿಸುತ್ತದೆ.

ಪ್ರಕರಣದ ಪ್ರಕಾರ, ದಂಪತಿ ಯುಎಸ್​​ನಲ್ಲಿ ವಾಸಿಸುತ್ತಿದ್ದರು. ಸಂಸಾರ ನಿರ್ವಹಣೆ ಹಾಗೂ ಮಾಸಿಕ ಖರ್ಚು ಭರಿಸಲು ಉದ್ಯೋಗ ಹುಡುಕುವಂತೆ ಹಾಗೂ ಉನ್ನತ ವ್ಯಾಸಂಗ ಮಾಡುವಂತೆ ಪತಿ ಒತ್ತಡ ಹೇರುತ್ತಿದ್ದ ಎಂದು ದೂರುದಾರ ಪತ್ನಿ ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಹೆಚ್ಚಿನ ಜ್ಞಾನ ಸಂಪಾದಿಸುವಂತೆ ಮತ್ತು ಉನ್ನತ ವ್ಯಾಸಂಗ ಮಾಡುವಂತೆ ಪತಿ ಪತ್ನಿಗೆ ಸಲಹೆ ನೀಡುವುದು ಹೇಗೆ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಕೇಳಿದೆ.

ಮದುವೆಗೂ ಮುನ್ನ ತನ್ನ ಪತಿಯೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೆ ಮತ್ತು ಮದುವೆಯ ನಂತರ ಅಮೆರಿಕದಲ್ಲಿ ತನ್ನ ಪತಿಯೊಂದಿಗೆ ಸೇರಿಕೊಳ್ಳುವುದಾಗಿ ಪತ್ನಿಯೇ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ಪತಿ ಅವಳನ್ನು ಎಲ್ಲಿಯೂ ಇದ್ದಕ್ಕಿದ್ದಂತೆ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಒತ್ತಾಯಿಸಲಿಲ್ಲ ಎಂಬುದನ್ನು ಕೂಡ ನ್ಯಾಯಾಲಯ ಗಮನಿಸಿದೆ.

ಇಬ್ಬರೂ ಕಕ್ಷಿದಾರರು ಅಂತಿಮವಾಗಿ ಅಮೆರಿಕದಲ್ಲಿ ವಾಸಿಸಲು ಬಯಸಿದ್ದರು ಮತ್ತು ಆ ಉದ್ದೇಶಕ್ಕಾಗಿ ಪತಿಯು ಆಕೆಗೆ ಕೆಲಸ ಮತ್ತು ಹೆಚ್1 ವೀಸಾ ಪಡೆಯುವಂತೆ ಕೇಳಿಕೊಂಡಿದ್ದಾನೆ. ಒಂದು ವೇಳೆ ಗಂಡನ ವೀಸಾ ಅವಧಿ ಮುಗಿದರೆ ಅಥವಾ ನವೀಕರಿಸದಿದ್ದಲ್ಲಿ ಇಬ್ಬರೂ ಅದರ ನಂತರವೂ ಅಮೆರಿಕದಲ್ಲಿ ವಾಸಿಸುವುದನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಪತಿ ಆಕೆಗೆ ಆ ರೀತಿಯಾಗಿ ಹೇಳಿದ್ದಾನೆ. ವಿದೇಶದಲ್ಲಿ ನೆಲೆಸುವ ವಿಷಯಕ್ಕೆ ಪತಿ ಅನಗತ್ಯ ಪ್ರಾಮುಖ್ಯತೆಯನ್ನು ನೀಡಿದ್ದರೂ, ಯಾವುದೇ ಸಂದರ್ಭದಲ್ಲಿ ಅದು ಕ್ರೌರ್ಯಕ್ಕೆ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Last Updated : Aug 18, 2022, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.