ETV Bharat / bharat

ತೆಲಂಗಾಣ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ತೆರೆ, ರಾಜ್ಯಾದ್ಯಂತ 144 ಸೆಕ್ಷನ್​ ಜಾರಿ

author img

By ETV Bharat Karnataka Team

Published : Nov 28, 2023, 7:35 PM IST

Telangana Assembly Elections: ರಾಜ್ಯಾದ್ಯಂತ 144 ಸೆಕ್ಷನ್​ ಜಾರಿಯಾಗಿದ್ದು, ಗಡಿಗಳಲ್ಲಿ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದಾರೆ.

Telangana Assembly Elections
ತೆಲಂಗಾಣ ವಿಧಾನಸಭಾ ಚುನಾವಣೆ

ಹೈದರಾಬಾದ್​(ತೆಲಂಗಾಣ): ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಅಬ್ಬರ ಅಂತ್ಯಗೊಂಡಿದ್ದು, ಇಡೀದಿನ ಸದ್ದು ಮಾಡುತ್ತಿದ್ದ ಮೈಕ್​ಗಳು ಮ್ಯೂಟ್​ ಆಗಿವೆ. ಇನ್ನೇನು ಎರಡು ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ರಾಜ್ಯಾದ್ಯಂತ 144 ಸೆಕ್ಷನ್​ ಜಾರಿಯಾಗಿದೆ.

ಅಕ್ಟೋಬರ್​ 9ರಂದು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆಯ ಬಿಸಿ ಏರಿತ್ತು. ಆದರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಚಾರ ಕಾರ್ಯ ಮತ್ತಷ್ಟು ಜೋರಾಗಿತ್ತು. ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದವು. ಅವೆಲ್ಲಕ್ಕೂ ಇಂದು ತೆರೆ ಬಿದ್ದಿದೆ.

ಆಡಳಿತಾರೂಢ ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​), ವಿರೋಧ ಪಕ್ಷಗಳಾದ ಕಾಂಗ್ರೆಸ್​ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದೆಲ್ಲೆಡೆ ವ್ಯಾಪಕ ಪ್ರಚಾರ ನಡೆಸಿವೆ. ಎಂಐಎಂ​, ಬಿಎಸ್​ಪಿ, ಎಡಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಆಯಾ ಪಕ್ಷಗಳ ಪರವಾಗಿ ರಾಜ್ಯಾದ್ಯಂತ ಪಕ್ಷದ ಪ್ರಮುಖ ನಾಯಕರು ಪ್ರಚಾರ ಸಭೆಗಳು, ರ‍್ಯಾಲಿಗಳು, ರೋಡ್​ ಶೋಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಿದ್ದಾರೆ.

ತಮ್ಮ ಪಕ್ಷದ ನಿಲುವುಗಳನ್ನು ವಿವರಿಸಿ, ಪ್ರತಿಪಕ್ಷಗಳ ನೀತಿಗಳನ್ನು ಟೀಕಿಸುವ ಮೂಲಕ ಪ್ರಚಾರದ ಬಿಸಿ ಹೆಚ್ಚಿಸಿದ್ದರು. ಅಬ್ಬರದಿಂದ ನಡೆದ ಚುನಾವಣಾ ಪ್ರಚಾರದ ಉದ್ದಕ್ಕೂ ಟೀಕೆ, ಪ್ರತ್ಯಾರೋಪಗಳೇ ತುಂಬಿದ್ದವು. ತಮ್ಮ ಪಕ್ಷ ಪ್ರಣಾಳಿಕೆಗಳನ್ನು ಸಾರ್ವಜನಿಕರ ಬಳಿ ತಲುಪಿಸುವ ಪಕ್ಷದ ನಾಯಕರು, ಅಭ್ಯರ್ಥಿಗಳ ಅಬ್ಬರದ ಪ್ರಚಾರ ಮಂಗಳವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ.

ಚುನಾವಣೆಗೆ 48 ಗಂಟೆ ಮೊದಲೇ ರಾಜ್ಯದಲ್ಲಿ ಸದ್ದು ಗದ್ದಲದ ಪ್ರಚಾರ ಮುಗಿದಿದ್ದು, ಇನ್ನೇನಿದ್ದರೂ ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡಲಿದ್ದಾರೆ. 119 ವಿಧಾನಸಭಾ ಕ್ಷೇತ್ರಗಳಿಗೆ 30ರಂದು ಚುನಾವಣೆ ನಡೆಯಲಿದ್ದು, ಅವುಗಳಲ್ಲಿ 13 ಕ್ಷೇತ್ರಗಳಲ್ಲಿ 30 ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಆ ಕಾರಣದಿಂದಲೇ ಈ ಎಲ್ಲಾ ಕ್ಷೇತ್ರಗಳಲ್ಲಿ ಇಂದು 4 ಗಂಟೆಗೆ ಪ್ರಚಾರ ಕಾರ್ಯ ಕೊನೆಯಾಗಿತ್ತು. ಸಿರ್ಪುರ, ಚೆನ್ನೂರು, ಬೆಳ್ಳಂಪಲ್ಲಿ, ಮಂಚಿರ್ಯಾಲ, ಆಸಿಫಾಬಾದ್​, ಮಂಥನಿ, ಭೂಪಾಲಪಲ್ಲಿ, ಮುಲುಗು, ಪಿನಾಪಾಕ, ಇಲ್ಲಾಂಡು, ಕೊತ್ತಗುಡೆಂ, ಅಶ್ವರಾವ್​ಪೇಟೆ ಮತ್ತು ಭದ್ರಾಚಲಂ ಕ್ಷೇತ್ರಗಳಲ್ಲಿ ಸಂಜೆ 4ಕ್ಕೆ ಮತದಾನ ಕೊನೆಯಾಗಲಿದೆ. ಉಳಿದ 106 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ.

ಚುನಾವಣಾ ಪ್ರಚಾರ ಅಂತ್ಯವಾಗುತ್ತಿದ್ದಂತೆ, ರಾಜ್ಯದೆಲ್ಲೆಡೆ ನಿರ್ಬಂಧಗಳು ಜಾರಿಯಾಗಿವೆ. ಯಾವುದೇ ಪಕ್ಷಗಳು, ಅಥವಾ ಅಭ್ಯರ್ಥಿಗಳು ಯಾವುದೇ ಸಭೆ, ಪ್ರಚಾರ ಸಭೆಗಳು, ರ‍್ಯಾಲಿ, ರೋಡ್​ ಶೋ ನಡೆಸುವಂತಿಲ್ಲ. 144 ಸೆಕ್ಷನ್​ ಜಾರಿಯಾಗಿದ್ದು, ಪೊಲೀಸರು ಎಲ್ಲೆಡೆ ತೀವ್ರ ತಪಾಸಣೆ ಜತೆಗೆ ಕಟ್ಟೆಚ್ಚರ ವಹಿಸಿದ್ದಾರೆ. ರಾಜ್ಯದ ಗಡಿಗಳಲ್ಲಿ ಸ್ಥಾಪಿಸಿರುವ ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಇದರಿಂದಾಗಿ ಸಂಜೆ 5ರಿಂದಲೇ ಮದ್ಯದಂಗಡಿ, ಶೇಂದಿ ಅಂಗಡಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಹಣ ಲೂಟಿ ಮಾಡಿ ತೆಲಂಗಾಣದ ಚುನಾವಣೆಗೆ ಖರ್ಚು ಮಾಡ್ತಿದೆ: ಡಿ ವಿ ಸದಾನಂದಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.