ETV Bharat / bharat

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದ್ದನ್ನು ನೆನಪಿಡಿ: ಮಹಾರಾಷ್ಟ್ರ ಸರ್ಕಾರಕ್ಕೆ ಪವಾರ್ ಸಲಹೆ

author img

By ETV Bharat Karnataka Team

Published : Jan 9, 2024, 4:18 PM IST

Sharad Pawar on Bilkis Bano case: ಬಿಲ್ಕಿಸ್ ಬಾನು ಪ್ರಕರಣವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ, ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕೆಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ಧಾರೆ.

Pawar to Maharashtra govt
ಮಹಾರಾಷ್ಟ್ರ ಸರ್ಕಾರಕ್ಕೆ ಪವಾರ್ ಸಲಹೆ

ಮುಂಬೈ (ಮಹಾರಾಷ್ಟ್ರ): 2002ರ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಗಂಭೀರತೆ ಹೊಂದಬೇಕು ಮತ್ತು ಈ ಘೋರ ಅಪರಾಧದ ಕುರಿತು ಸುಪ್ರೀಂಕೋರ್ಟ್​ ಏನು ಹೇಳಿದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಸಲಹೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆ ರದ್ದುಗೊಳಿಸಿರುವ ಆದೇಶವು ಜನಸಾಮಾನ್ಯರಿಗೆ ಬಲ ನೀಡಿದೆ. ನ್ಯಾಯಾಲಯದ ಈ ಆದೇಶ ಸ್ವಾಗತಾರ್ಹ. ಮಹಿಳೆ ಅನುಭವಿಸುತ್ತಿರುವ ಪರಿಸ್ಥಿತಿ ಮತ್ತು ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವುದನ್ನು ನೋಡಿದರೆ, ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬುವುದಾಗಿ ಭಾವಿಸಿದ್ದೇನೆ ಎಂದು ಹೇಳಿದರು.

ಮುಂದುವರೆದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಘೋರ ಅಪರಾಧದಲ್ಲಿ ಭಾಗಿಯಾಗಿರುವವರ ಬಗ್ಗೆ ಸುಪ್ರೀಂಕೋರ್ಟ್ ಏನು ಹೇಳಿದೆ ಎಂಬುದನ್ನು ನೆನಪಿನಲ್ಲಿಡಿ ಎಂಬುದು ನನ್ನ ವಿನಂತಿಯಾಗಿದೆ. ಈ ಪ್ರಕರಣವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ, ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಸಮಾಜದಲ್ಲಿ ಇಂತಹ ಅಪರಾಧಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶ ಸಾರುವಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವರೂ ಆದ ಪವಾರ್ ಒತ್ತಾಯಿಸಿದರು.

ಇದನ್ನೂ ಓದಿ: ಬಿಲ್ಕಿಸ್​ ಬಾನೊ ಅವಿರತ ಹೋರಾಟ ಸೊಕ್ಕಿನ ಬಿಜೆಪಿ ಸರ್ಕಾರದ ವಿರುದ್ಧ ನ್ಯಾಯಕ್ಕೆ ಸಂದಿರುವ ಜಯ : ರಾಹುಲ್​ ಗಾಂಧಿ

ಇದೇ ವೇಳೆ, ಡಿಸಿಎಂ ಅಜಿತ್ ಪವಾರ್ ಅವರು ತಮ್ಮ ವಯಸ್ಸಿನ ಟೀಕಿಸಿರುವ ಈ ಕುರಿತು ಶರದ್ ಪವಾರ್ ಪ್ರತಿಕ್ರಿಯಿಸಿ, ಅವರು ತಮಗೆ ತೋಚಿದಂತೆ ಮಾತನಾಡಬಹುದು. ಆದರೆ, ಪ್ರತಿಪಕ್ಷಗಳು ನನ್ನ ದಕ್ಷತೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಪ್ರಶ್ನೆ ಎತ್ತಲು ಅವರಿಗೆ ಸಾಧ್ಯವಾಗಲ್ಲ ಎಂದು ತಿರುಗೇಟು ನೀಡಿದರು. ಅಲ್ಲದೇ, ರಾಮ ಮಂದಿರದ ವಿರುದ್ಧ ನಮ್ಮ ಪಕ್ಷದಿಂದ ಯಾವುದೇ ಹೇಳಿಕೆ ನೀಡಿಲ್ಲ. ರಾಮನು ನಮ್ಮ ನಂಬಿಕೆ. ನನಗೆ ಅಯೋಧ್ಯೆಗೆ ಆಹ್ವಾನ ಬಂದಿಲ್ಲ. ನನಗೆ ಆಹ್ವಾನ ಬೇಕಾಗಿಲ್ಲ. ಸಮಯ ಬಂದಾಗ ನಾನೇ ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಸಿಎಂ - ಸ್ಪೀಕರ್ ಭೇಟಿ ಅನುಮಾನಕ್ಕೆ ಕಾರಣ: ಇದೇ ವೇಳೆ, ಶಿವಸೇನೆ ಶಾಸಕರ ಅನರ್ಹತೆ ಕುರಿತು ತೀರ್ಪು ನೀಡುವ ಮುನ್ನವೇ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್​ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ ವಿಷಯದ ಕುರಿತು ಪ್ರತಿಕ್ರಿಯಿಸಿ ಹಿರಿಯ ರಾಜಕಾರಣಿ ಪವಾರ್, ತೀರ್ಪು ಪ್ರಕಟಿಸುವ ಮೊದಲೇ ಸ್ಪೀಕರ್ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವುದು ಅನುಮಾನಕ್ಕೆ ಅವಕಾಶ ನೀಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್ ತೀರ್ಪು ಪ್ರಕಟಿಸಿದ ನಂತರವೇ ಈ ಬಗ್ಗೆ ಪ್ರತಿಕ್ರಿಯಿಸಬಹುದು ಎಂದರು.

ಸೀಟು ಹಂಚಿಕೆ ಬಗ್ಗೆ ಚರ್ಚೆ: ಮುಂಬರುವ ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಅವರು, ಇಂದು ದೆಹಲಿಯಲ್ಲಿ ಮಹಾವಿಕಾಸ್ ಅಘಾಡಿ ನಾಯಕರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಮುಂಬರುವ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳು ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಟ್ಟಿವೆ. ಪ್ರತಿಯೊಂದು ಪಕ್ಷವೂ ತನ್ನ ನಿಲುವನ್ನು ಮಂಡಿಸುತ್ತದೆ ಎಂದು ಮಾಹಿತಿ ನೀಡಿದರು.

ಬಿಲ್ಕಿಸ್ ಬಾನು ಪ್ರಕರಣದ ಹಿನ್ನೆಲೆ: ಗುಜರಾತ್​ನಲ್ಲಿ 2002ರಲ್ಲಿ ಗೋದ್ರಾ ದುರಂತದ ನಂತರ ನಡೆದ ಗಲಭೆಗಳ ಭೀಕರತೆಯಿಂದ ರಕ್ಷಿಸಿಕೊಳ್ಳಲು ಬಿಲ್ಕಿಸ್ ಬಾನು ಎಂಬ ಮಹಿಳೆ ಯತ್ನಿಸುತ್ತಿದ್ದರು. ಆಗ 21 ವರ್ಷ ವಯಸ್ಸಿನ ಆಕೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೇ, ಐದು ತಿಂಗಳ ಗರ್ಭಿಣಿ ಕೂಡಾ ಆಗಿದ್ದರು. ಅವರ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.

ಈ ಪ್ರಕರಣದ 11 ಜನರು ತಪ್ಪಿತಸ್ಥರು ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಯೂ ವಿಧಿಸಲಾಗಿತ್ತು. ಈ ಹಿಂದೆ ಸಾಕ್ಷ್ಯವನ್ನು ನಾಶಪಡಿಸುವ ಮತ್ತು ಸಾಕ್ಷಿಗಳಿಗೆ ಅಪಾಯದ ಕಾರಣದಿಂದ ಪ್ರಕರಣದ ವಿಚಾರಣೆಯನ್ನು ಅಹಮದಾಬಾದ್‌ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು. ಆದರೆ, 2022ರ ಸ್ವಾತಂತ್ರ್ಯ ದಿನದಂದು ಗುಜರಾತ್​ ಸರ್ಕಾರ ಎಲ್ಲ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ವಿನಾಯತಿಯನ್ನು ರದ್ದುಗೊಳಿಸಿ ಸೋಮವಾರ ಆದೇಶಿಸಿದೆ. ಇದರಲ್ಲಿ ಮಹಾರಾಷ್ಟ್ರ ಸರ್ಕಾರ ಸಹ ಸಹಕಾರ ಮಾಡುತ್ತಿದ್ದು, ತನ್ನ ವಿವೇಚನೆ ದುರುಪಯೋಗಪಡಿಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್​ ಚಾಟಿ ಬೀಸಿದೆ. ಆದ್ದರಿಂದ ಈಗ ಶರದ್ ಪವಾರ್ ಸಹ ಈ ಪ್ರಕರಣದಲ್ಲಿ ಗಂಭೀರತೆ ಹೊಂದಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಬಿಡುಗಡೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.