ETV Bharat / bharat

ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿದ ರಾಹುಲ್​​ ಗಾಂಧಿ ಮೇಲ್ಮನವಿ ಅರ್ಜಿ ತೀರ್ಪು ಇಂದು

author img

By

Published : Apr 20, 2023, 9:33 AM IST

ಮೋದಿ ಉಪನಾಮ ಪ್ರಕರಣದಲ್ಲಿ ದೋಷಿಯಾಗಿರುವ ರಾಹುಲ್​ ಗಾಂಧಿ ತಮ್ಮ ಶಿಕ್ಷೆಯ ವಿರುದ್ಧ ಸಲ್ಲಿಸಿದ ಮೇಲ್ಮನವಿ ಅರ್ಜಿಯ ತೀರ್ಪು ಇಂದು ಹೊರಬೀಳುವ ಸಾಧ್ಯತೆ ಇದೆ.

ಶಿಕ್ಷೆ ತಡೆ ಕೋರಿದ ರಾಹುಲ್​​ ಗಾಂಧಿ ಮೇಲ್ಮನವಿ
ಶಿಕ್ಷೆ ತಡೆ ಕೋರಿದ ರಾಹುಲ್​​ ಗಾಂಧಿ ಮೇಲ್ಮನವಿ

ಸೂರತ್ (ಗುಜರಾತ್): ಮಾನಹಾನಿ ಪ್ರಕರಣದಲ್ಲಿ ತಮಗೆ ನೀಡಲಾದ 2 ವರ್ಷ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ತೀರ್ಪನ್ನು ಸೂರತ್​​ ಕೋರ್ಟ್​ ಇಂದು ಪ್ರಕಟಿಸುವ ಸಾಧ್ಯತೆ ಇದೆ. ಏ.13 ರಂದು ರಾಹುಲ್​​ರ ಮೇಲ್ಮನವಿ ಅರ್ಜಿಯನ್ನು ಕೋರ್ಟ್​ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ಪ್ರಕರಣದಲ್ಲಿ ರಾಹುಲ್​ ಗಾಂಧಿ ಅಪರಾಧಿ ಎಂದು ಸಾಬೀತಾದ ನಂತರ ಸೂರತ್ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯ ವಿರುದ್ಧ ದೂರುದಾರ ಶಾಸಕ ಪೂರ್ಣೇಶ್ ಮೋದಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯೂ ನಡೆಸಲಾಗಿತ್ತು. ಅಲ್ಲದೇ, ನ್ಯಾಯಾಲಯವು ದೂರುದಾರ ಪೂರ್ಣೇಶ್ ಮೋದಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸುವ ಮುನ್ನ ನ್ಯಾಯಾಧೀಶ ರಾಬಿನ್ ಮೊಗೇರ ಅವರು ರಾಹುಲ್​ ಗಾಂಧಿ ಮತ್ತು ದೂರುದಾರ ಬಿಜೆಪಿಯ ಪೂರ್ಣೇಶ್ ಮೋದಿ ಅವರ ವಾದವನ್ನು ಆಲಿಸಿದ್ದರು.

"ಮೋದಿ ಉಪನಾಮ" ಹೇಳಿಕೆಗೆ ಸಂಬಂಧಿಸಿದಂತೆ ಶಾಸಕ ಪೂರ್ಣೇಶ್​ ಮೋದಿ ಸಲ್ಲಿಸಿದ ಕ್ರಿಮಿನಲ್​ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿದ್ದ ಸೂರತ್​ ಕೋರ್ಟ್​ ಅವರಿಗೆ ಮಾರ್ಚ್​ 23 ರಂದು 2 ವರ್ಷ ಶಿಕ್ಷೆ, ದಂಡ ವಿಧಿಸಿತ್ತು. ಕ್ರಿಮಿನಲ್​ ಕೇಸ್​ನಲ್ಲಿ ಶಿಕ್ಷೆಗೆ ಒಳಗಾಗಿದ್ದರಿಂದ ರಾಹುಲ್​ ಅವರ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಈ ಬಗ್ಗೆ ಸಂಸತ್​ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಪೂರ್ಣೇಶ್​ ಮೋದಿ ಆಕ್ಷೇಪಣಾ ಅರ್ಜಿ: ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು, ರಾಹುಲ್​ ಅವರ ಶಿಕ್ಷೆ ತಡೆ ಅರ್ಜಿಯ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್​ ಗಾಂಧಿ ಶಿಕ್ಷೆಗೆ ಒಳಗಾದ ಬಳಿಕವೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆ ಹೇಳಿಕೆ ನೀಡುತ್ತಲೇ ಇದ್ದಾರೆ. ಮಾನಹಾನಿ ಮಾತುಗಳನ್ನು ಅವರು ಮುಂದುವರಿಸಿದ್ದಾರೆ. ನ್ಯಾಯಾಲಯದ ಹೇಳಿಕೆಯನ್ನು ಪ್ರಸ್ತಾಪಿಸಿ ವಾಕ್​ ಸ್ವಾತಂತ್ರ್ಯದ ಹೆಸರಿನಲ್ಲಿ ಅವರು ಕುಚೋದ್ಯ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈಗ ನೀಡಿರುವ ಶಿಕ್ಷೆಗೆ ಯಾವ ಕಾರಣಕ್ಕೂ ತಡೆ ನೀಡಬಾರದು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

"ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ಕೋರಿ ಅವರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯವು ಮೊದಲು ಆಲಿಸುತ್ತದೆ. ಅದರ ನಂತರ, ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಮನವಿಯ ವಿರುದ್ಧದ ಆಕ್ಷೇಪಣಾ ಅರ್ಜಿಯ ವಿಚಾರಣೆ ನಡೆಯುತ್ತದೆ ಎಂದು ಪೂರ್ಣೇಶ್ ಮೋದಿ ಅವರ ಪರ ವಕೀಲ ಕೇತನ್ ರೇಶಮ್ವಾಲಾ ನ್ಯಾಯಾಲಯ ಪ್ರವೇಶಿಸುವ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ರಾಹುಲ್​ಗೆ ಪಾಟ್ನಾ ಕೋರ್ಟಿಂದ ಸಮನ್ಸ್​: ಇನ್ನೊಂದೆಡೆ ಮೋದಿ ಉಪನಾಮ ಬಳಕೆ ಸಂಬಂಧ ರಾಹುಲ್​ ಗಾಂಧಿ ಅವರಿಗೆ ಬಿಹಾರದ ಪಾಟ್ನಾ ಕೋರ್ಟ್​ ಕೂಡ ಸಮನ್ಸ್​ ಜಾರಿ ಮಾಡಿದೆ. ಬಿಜೆಪಿ ಸಂಸದ, ಮಾಜಿ ಉಪಮುಖ್ಯಮಂತ್ರಿ ಸುಶೀಲ್​ಕುಮಾರ್​ ಶಿಂಧೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದು, ಅದರ ವಿಚಾರಣೆಯಿಂದ ರಾಹುಲ್​ ತಪ್ಪಿಸಿಕೊಂಡಿದ್ದರು. ಇದರಿಂದ ಕೋರ್ಟ್​ ಸಮನ್ಸ್​ ನೀಡಿದೆ.

ತಮಗೆ ನೀಡಲಾದ ಶಿಕ್ಷೆಗೆ ತಡೆ ನೀಡಬೇಕು ಎಂದು ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸೂರತ್​ ಕೋರ್ಟ್​ನ ವಿಚಾರಣೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಇನ್ನೊಂದು ದಿನಾಂಕ ನೀಡಬೇಕು ಎಂದು ರಾಹುಲ್​ ಮನವಿ ಮಾಡಿದ್ದರು. ಅದರಂತೆ ಪಾಟ್ನಾ ಕೋರ್ಟ್​, ಏ.25 ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್​ನಲ್ಲಿ ಸೂಚಿಸಿದೆ.

ಪ್ರಕರಣವೇನು?: 2019 ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಇದು ವಿವಾದಕ್ಕೀಡಾಗಿತ್ತು. ಇದು ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿ ಶಾಸಕ ಪೂರ್ಣೇಶ್​ ಮೋದಿ ಕ್ರಿಮಿನಲ್​ ಕೇಸ್​ ದಾಖಲಿಸಿದ್ದರು. ಇದರಲ್ಲಿ ರಾಹುಲ್​ ದೋಷಿ ಎಂದು ಕೋರ್ಟ್​ ತೀರ್ಪು ನೀಡಿದೆ.

ಓದಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ ಪ್ರಯೋಗ.. ಶಾಸಕ ರೇಣುಕಾಚಾರ್ಯ ಹೀಗಂದ್ರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.