ETV Bharat / bharat

ಇವಿಎಂ ಬಳಕೆ ತಡೆ ಕೋರಿದ್ದ ಅರ್ಜಿ ಸುಪ್ರೀಂಕೋರ್ಟ್​ನಿಂದ ವಜಾ

author img

By

Published : Aug 12, 2022, 1:47 PM IST

ಮತಪತ್ರಗಳ ಬದಲಿಗೆ ಮತಯಂತ್ರ ಬಳಸುವ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ. ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಪ್ರಶ್ನೆ. ಇವಿಎಂ ಬಳಕೆ ತಡೆಯುವಂತೆ ಕೋರಿದ ಅರ್ಜಿ ವಜಾ.

ಇವಿಎಂ ಬಳಕೆ ತಡೆ ಕೋರಿದ್ದ ಅರ್ಜಿ ಸುಪ್ರೀಂ ಕೋರ್ಟ್​ನಿಂದ ವಜಾ
Supreme Court dismissed the petition seeking ban on the use of EVMs

ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿನ ಮತದಾನಕ್ಕೆ ಮತಪತ್ರಗಳ ಬದಲಿಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಜಾರಿಗೊಳಿಸಲು ರೂಪಿಸಲಾದ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರ ಪೀಠವು, ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸುವುದಕ್ಕೆ ಸಂಬಂಧಿಸಿದ 1951 ರ ಕಾಯ್ದೆಯ ಸೆಕ್ಷನ್ 61 ಎ ಅನ್ನು ಪ್ರಶ್ನಿಸುವ ಮನವಿಯನ್ನು ಪರಿಗಣಿಸಲು ನಿರಾಕರಿಸಿತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಅರ್ಜಿದಾರ ಹಾಗೂ ವಕೀಲ ಎಂ.ಎಲ್. ಶರ್ಮಾ ವಾದಿಸಿ, ಸಂವಿಧಾನದ 100 ನೇ ವಿಧಿಯನ್ನು ಉಲ್ಲೇಖಿಸಿ ಇದು ಕಡ್ಡಾಯ ನಿಬಂಧನೆಯಾಗಿದೆ ಎಂದರು.

ಸಂವಿಧಾನದ 100ನೇ ವಿಧಿಯು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿನ ಮತದಾನ, ಖಾಲಿ ಹುದ್ದೆಗಳು ಮತ್ತು ಕೋರಮ್‌ಗಳ ಹೊರತಾಗಿಯೂ ಕಾರ್ಯನಿರ್ವಹಿಸುವ ಸದನಗಳ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61ಎ ಇದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮತದಾನದ ಮೂಲಕ ಅಂಗೀಕಾರವಾಗಿಲ್ಲ ಎಂದು ಶರ್ಮಾ ಹೇಳಿದರು.

ಸದನದಲ್ಲಿ ಏನು ನಡೆದಿದೆ ಅದನ್ನು ಪ್ರಶ್ನಿಸುತ್ತಿರುವಿರಾ? ಸಾಮಾನ್ಯ ಮತದಾನವನ್ನು ನೀವು ಪ್ರಶ್ನಿಸುತ್ತಿರುವಿರಾ? ಏನನ್ನು ನೀವು ಪ್ರಶ್ನಿಸುತ್ತಿರುವಿರಿ ಎಂದು ಕೋರ್ಟ್ ಕೇಳಿತು. ಸದನದಲ್ಲಿ ಮತದಾನದ ಮೂಲಕ ಅಂಗೀಕಾರವಾಗದ, ಇವಿಎಂಗಳ ಬಳಕೆಗೆ ಅನುಮತಿ ನೀಡಿರುವ ಕಾಯ್ದೆಯ ಸೆಕ್ಷನ್ 61ಎ ಅನ್ನು ಪ್ರಶ್ನಿಸುತ್ತಿದ್ದೇನೆ ಎಂದು ಶರ್ಮಾ ಹೇಳಿದರು.

ನಮಗೆ ಇದರಲ್ಲಿ ಯಾವುದೇ ಮೆರಿಟ್ ಕಾಣಿಸುತ್ತಿಲ್ಲ, ಡಿಸ್ಮಿಸ್ಡ್​ ಎಂದು ನ್ಯಾಯಾಲಯ ಮೌಖಿಕವಾಗಿ ಆದೇಶಿಸಿ ಅರ್ಜಿಯನ್ನು ವಜಾ ಮಾಡಿತು. ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಿದ್ದ ಅರ್ಜಿದಾರರು, ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿದ್ದರು.

ಇದನ್ನು ಓದಿ:ತಂದೆಯ ಮರಣದ ಬಳಿಕ ಮಕ್ಕಳ ಸರ್​ನೇಮ್​ ನಿರ್ಧರಿಸುವ ಹಕ್ಕು ತಾಯಿಗಿದೆ: ಸುಪ್ರೀಂ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.