ETV Bharat / bharat

ಗರ್ಭಪಾತ ಕಾಯ್ದೆ ವ್ಯಾಪ್ತಿ ವಿಸ್ತರಣೆ: ಅವಿವಾಹಿತೆಯ ಗರ್ಭಪಾತಕ್ಕೆ 'ಸುಪ್ರೀಂ' ಅನುಮತಿ

author img

By

Published : Jul 22, 2022, 11:41 AM IST

Updated : Jul 22, 2022, 11:59 AM IST

2021ರಲ್ಲಿ ತಿದ್ದುಪಡಿಯಾದ ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3 ವಿವರಣೆಯಲ್ಲಿ ಪತಿ ಶಬ್ದದ ಬದಲು 'ಸಂಗಾತಿ' ಯೆಂದು ಬಳಸಲಾಗಿದೆ. ಅಂದರೆ, ಕೇವಲ ವೈವಾಹಿಕ ಸಂಬಂಧದಿಂದ ಉಂಟಾಗುವ ಪರಿಸ್ಥಿತಿಗಳಿಗೆ ಮಾತ್ರ ಈ ಕಾಯ್ದೆಯನ್ನು ಅನ್ವಯಿಸುವುದು ಸಂಸತ್ತಿನ ಉದ್ದೇಶವಾಗಿರಲಿಲ್ಲ. ಸಂಗಾತಿ ಶಬ್ದವನ್ನು ಬಳಸಿರುವುದು ಅವಿವಾಹಿತ ಮಹಿಳೆಯನ್ನೂ ಕಾಯ್ದೆಯ ವ್ಯಾಪ್ತಿಗೆ ತರುವುದು ಸಂಸತ್ತಿನ ಉದ್ದೇಶವಾಗಿತ್ತು ಎಂಬುದು ತಿಳಿದುಬರುತ್ತದೆ ಹಾಗೂ ಇದು ಸಂವಿಧಾನಿಕವಾಗಿಯೂ ಇದೆ ಎಂದು ನ್ಯಾಯಪೀಠ ಹೇಳಿತು.

Supreme Court allowed a woman to abort her 24 weeks pregnancy
Supreme Court allowed a woman to abort her 24 weeks pregnancy

ನವದೆಹಲಿ: ಮಹತ್ವದ ಆದೇಶವೊಂದರಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ಸುಪ್ರೀಂಕೋರ್ಟ್, ಅವಿವಾಹಿತ ಮಹಿಳೆಯೊಬ್ಬಳು ಒಪ್ಪಿತ ಲೈಂಗಿಕ ಸಂಬಂಧದಿಂದ ಗರ್ಭ ಧರಿಸಿದಾಗ, ಅಂಥ 24 ವಾರದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದೆ. ಅವಿವಾಹಿತ ಮಹಿಳೆ ಕೂಡ ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಗೆ ಬರುತ್ತಾಳೆ ಎಂದು ಈ ಮೂಲಕ ಕೋರ್ಟ್ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠ, ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಇಬ್ಬರು ವೈದ್ಯರ ಸಮಿತಿಯೊಂದನ್ನು ರಚಿಸುವಂತೆ ಹಾಗೂ ಗರ್ಭಪಾತದಿಂದ ಮಹಿಳೆಯ ಜೀವಕ್ಕೇನಾದರೂ ಅಪಾಯವಾಗಬಹುದಾ ಎಂಬುದನ್ನು ಸಮಿತಿಯು ಪರಿಶೀಲಿಸಿ ವರದಿ ನೀಡುವಂತೆ ಏಮ್ಸ್​ ನಿರ್ದೇಶಕರಿಗೆ ಆದೇಶಿಸಿತು.

"ನಾಳೆಯೊಳಗೆ (ಶುಕ್ರವಾರದೊಳಗೆ) ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3(2) (ಡಿ) ಅಡಿಯಲ್ಲಿ ವೈದ್ಯರ ಸಮಿತಿಯೊಂದನ್ನು ರಚಿಸುವಂತೆ ಏಮ್ಸ್​ ನಿರ್ದೇಶಕರಿಗೆ ನಾವು ಮನವಿ ಮಾಡುತ್ತಿದ್ದೇವೆ. ಅರ್ಜಿದಾರ ಮಹಿಳೆಯ ಜೀವಕ್ಕೆ ಯಾವುದೇ ಅಪಾಯವಾಗದಂತೆ ಭ್ರೂಣವನ್ನು ತೆಗೆಯಬಹುದಾದರೆ, ಅಂಥ ಪರಿಸ್ಥಿತಿಯಲ್ಲಿ ಅರ್ಜಿದಾರರ ಕೋರಿಕೆಯಂತೆ ಏಮ್ಸ್​ ಗರ್ಭಪಾತ ಪ್ರಕ್ರಿಯೆ ಮುಂದುವರಿಸಬಹುದು.. " ಎಂದು ನ್ಯಾಯಪೀಠ ಹೇಳಿತು.

ವೈದ್ಯಕೀಯ ಸಮಿತಿಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ ಪೀಠ, ಮೇಲೆ ಸೂಚಿಸಿದ ಮಟ್ಟಿಗೆ ದೆಹಲಿ ಹೈಕೋರ್ಟ್ ಆದೇಶವನ್ನು ಮಾರ್ಪಡಿಸಲಾಗಿರುತ್ತದೆ ಎಂದು ತಿಳಿಸಿತು. 2021ರಲ್ಲಿ ತಿದ್ದುಪಡಿಯಾದ ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3 ವಿವರಣೆಯಲ್ಲಿ ಪತಿ ಶಬ್ದದ ಬದಲು 'ಸಂಗಾತಿ' ಶಬ್ದವನ್ನು ಬಳಸಲಾಗಿದೆ. ಅಂದರೆ, ಕೇವಲ ವೈವಾಹಿಕ ಸಂಬಂಧದಿಂದ ಉಂಟಾಗುವ ಪರಿಸ್ಥಿತಿಗಳಿಗೆ ಮಾತ್ರ ಈ ಕಾಯ್ದೆಯನ್ನು ಅನ್ವಯಿಸುವುದು ಸಂಸತ್ತಿನ ಉದ್ದೇಶವಾಗಿರಲಿಲ್ಲ.

ಸಂಗಾತಿ ಶಬ್ದವನ್ನು ಬಳಸಿರುವುದು ಅವಿವಾಹಿತ ಮಹಿಳೆಯನ್ನೂ ಕಾಯ್ದೆಯ ವ್ಯಾಪ್ತಿಗೆ ತರುವುದು ಸಂಸತ್ತಿನ ಉದ್ದೇಶವಾಗಿತ್ತು ಎಂಬುದು ತಿಳಿದುಬರುತ್ತದೆ ಹಾಗೂ ಇದು ಸಂವಿಧಾನಿಕವಾಗಿಯೂ ಇದೆ ಎಂದು ನ್ಯಾಯಪೀಠ ಹೇಳಿತು. ಮಹಿಳೆಯು ಅವಿವಾಹಿತಳು ಎಂಬ ಕಾರಣಕ್ಕೆ ಒಪ್ಪಿತ ಸಂಬಂಧದಿಂದ ಉಂಟಾದ 23 ವಾರಗಳ ಗರ್ಭದ ಗರ್ಭಪಾತಕ್ಕೆ ಅನುಮತಿ ನೀಡದೆ ದೆಹಲಿ ಹೈಕೋರ್ಟ್ ಅನಗತ್ಯವಾಗಿ ನಿರ್ಬಂಧಗಳನ್ನು ಹೇರಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕಾಯ್ದೆಯ ನಿಬಂಧನೆಗಳ ವ್ಯಾಖ್ಯಾನ ಕುರಿತಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಸಹಾಯವನ್ನು ಪೀಠವು ಕೋರಿತು. ಅರ್ಜಿದಾರ ಮಹಿಳೆಯು ತನಗೆ ಬೇಡವಾದ ಗರ್ಭಧಾರಣೆಯನ್ನು ಮುಂದುವರಿಸುವುದು ಸಂವಿಧಾನದ ಆಶಯ ಮತ್ತು ಉದ್ದೇಶಗಳಿಗೆ ವಿರುದ್ಧವಾಗುತ್ತದೆ ಎಂದು ಹೇಳಿತು. ಅರ್ಜಿದಾರಳು ಅವಿವಾಹಿತ ಮಹಿಳೆ ಎಂಬ ಒಂದೇ ಕಾರಣಕ್ಕೆ ಕಾನೂನಿನ ಪ್ರಯೋಜನವನ್ನು ಆಕೆಗೆ ನಿರಾಕರಿಸಬಾರದು ಎಂದು ಅದು ಹೇಳಿತು.

Last Updated :Jul 22, 2022, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.