ETV Bharat / bharat

ದೆಹಲಿ ಲೆಫ್ಟಿನೆಂಟ್​ ಗವರ್ನರ್​​ಗೆ ಮತ್ತೊಂದು ಪತ್ರ ಬರೆದ ಸುಕೇಶ್​ ಚಂದ್ರಶೇಖರ್​

author img

By

Published : Jan 13, 2023, 1:42 PM IST

ಎಎಪಿ ನಾಯಕರ ಮೇಲಿನ ದೂರು ಹಿಂಪಡೆದರೆ ಕರ್ನಾಟಕ ವಿಧಾನಸಭಾ ಚುನಾವಣಾ ಟಿಕೆಟ್​ ನೀಡುವುದಾಗಿ ಸತ್ಯೇಂದರ್​ ಜೈನ್​ ಆಮಿಷವೊಡ್ಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಸುಕೇಶ್‌ ಚಂದ್ರಶೇಖರ್‌ ಆಪಾದಿಸಿದ್ದಾರೆ.

ದೆಹಲಿ ಲೆಫ್ಟಿನೆಂಟ್​ ಗವರ್ನರ್​​ಗೆ ಮತ್ತೊಂದು ಪತ್ರ ಬರೆದ ವಂಚಕ ಸುಕೇಶ್​ ಚಂದ್ರಶೇಖರ್​
sukesh-chandrasekhar-wrote-another-letter-to-delhi-lt-governor

ನವದೆಹಲಿ: ಬಹುಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್​ ಚಂದ್ರಶೇಖರ್​ ಗುರುವಾರ ದೆಹಲಿ ಲೆಫ್ಟಿನೆಂಟ್​ ಗವರ್ನರ್​​ ವಿಕೆ ಸಕ್ಸೆನಾ ಅವರಿಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮತ್ತು ಸಚಿವ ಸತ್ಯೇಂದರ್​ ಜೈನ್​ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಕೇಶ್​ ಪ್ರಸ್ತುತ ಮಂಡಲಿ ಜೈಲಿನಲ್ಲಿದ್ದು, ಅನೇಕ ಆಮ್​ ಆದ್ಮಿ ಪಕ್ಷದ ನಾಯಕರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ ಮೂರು ಸುದೀರ್ಘ ಪುಟಗಳ ದೂರು ಸಲ್ಲಿಸಿದ್ದಾರೆ.

ಪ್ರಸ್ತುತ ತಿಹಾರ್​ ಜೈಲಿನಲ್ಲಿರುವ ಸಚಿವ ಸತ್ಯೇಂದರ್​ ಜೈನ್​, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಮ್​ ಆದ್ಮಿ ಪಕ್ಷದ ಟಿಕೆಟ್​ ನೀಡುವ ಆಮಿಷ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಆಮ್​ ಆದ್ಮಿ ಪಕ್ಷನ ಅನೇಕ ನಾಯಕರು ಮತ್ತು ಅರವಿಂದ್​ ಕೇಜ್ರಿವಾಲ್​ ಮತ್ತು ಸತ್ಯೇಂದರ್​ ಜೈನ್​ ವಿರುದ್ಧ ಕೊಟ್ಟಿರುವ ದೂರುಗಳನ್ನು ಹಿಂಪಡೆಯುವಂತೆ ಷರತ್ತು ವಿಧಿಸಿ ಒತ್ತಾಯ ಹೇರುತ್ತಿದ್ದಾರೆ. ಅಲ್ಲದೇ ಅವರು ಪಂಜಾಬ್​ನಲ್ಲಿ ಗಣಿಗಳ ಗುತ್ತಿಗೆಯನ್ನು ನೀಡುವ ಭರವಸೆಯನ್ನು ನೀಡುತ್ತಿದ್ದಾರೆ. ತಮ್ಮ ಈ ಆಫರ್​ಗಳನ್ನು ಒಪ್ಪಿಕೊಳ್ಳದಿದ್ದರೆ, ಗಂಭೀರ ಪರಿಣಾಮವನ್ನು ಎದುರಿಸುವ ಎಚ್ಚರಿಕೆಯನ್ನು ಜೈನ್​ ನೀಡಿದ್ದಾರೆ ಎಂದು ದೂರಿದ್ದಾರೆ.

ಈಗಾಗಲೇ ಅನೇಕ ಪತ್ರ ಬರೆದಿರುವ ವಂಚಕ: ಈ ಹಿಂದೆ ಕೂಡ ಜೈಲಿನಲ್ಲಿ ತಮಗೆ ಎಎಪಿ ನಾಯಕರು ದೂರು ಹಿಂಪಡೆಯುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ, ಜೈಲಿನಲ್ಲಿ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದು, ತಮ್ಮನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿ ಸುಕೇಶ್​ ದೆಹಲಿ ಲೆಫ್ಟಿನೆಂಟ್​ ಗವರ್ನರ್​​ಗೆ ಪತ್ರ ಬರೆದಿದ್ದರು. ಮತ್ತೊಂದು ಪತ್ರದಲ್ಲಿ ಅರವಿಂದ್​ ಕೇಜ್ರಿವಾಲ್​ ಮತ್ತು ಜೈನ್​ ಅವರ ಕುರಿತು ವೈಯಕ್ತಿಕ ಮಾಹಿತಿ ತಮ್ಮ ಬಳಿ ಇವೆ. ಅವರು ಪಂಜಾಬ್​ ಚುನಾವಣೆಗೆ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕೂಡ ಆರೋಪಿಸಿದ್ದರು.

ತನಿಖೆಗೆ ತ್ರಿಸದಸ್ಯ ಸಮಿತಿ: ನಿರಂತರ ಆರೋಪದ ಹಿನ್ನೆಲೆಯಲ್ಲಿ ಸುಕೇಶ್​ ಅವರ ಆರೋಪದ ಕುರಿತು ತನಿಖೆ ನಡೆಸಲು ಲೆಫ್ಟಿನೆಂಟ್​ ಗವರ್ನರ್​​ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತ್ರಿ ಸದಸ್ಯ ಸಮಿತಿ ರಚಿಸಿದ್ದರು. ಈ ಸಮಿತಿ ಸುಕೇಶ್​ ಅವರ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿತ್ತು. ಈ ವೇಳೆ ಅವರು ದಕ್ಷಿಣ ಭಾರತದಲ್ಲಿ ಪಕ್ಷದ ಪ್ರಾಬಲ್ಯ ಬೆಳೆಸಲು ಸಹಾಯ ಮಾಡಿದರೆ ರಾಜ್ಯಸಭೆಗೆ ಕಳುಹಿಸುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಕುರಿತು ತ್ರಿ ಸದಸ್ಯ ಪೀಠ ದೆಹಲಿ ಲೆಫ್ಟಿನೆಂಟ್​ ಗವರ್ನರ್​​ಗೆ ವರದಿಯನ್ನು ಸಲ್ಲಿಸಿತ್ತು.

ಯಾರು ಸುಕೇಶ್​ ಚಂದ್ರಶೇಖರ್?​: ಬೆಂಗಳೂರು ಮೂಲದ 30 ವರ್ಷದ ಸುಕೇಶ್​ ಚಂದ್ರಶೇಖರ್​ ವಿರುದ್ಧ ಅನೇಕ ಮೆಟ್ರೋ ನಗರಗಳಲ್ಲಿ ವಂಚನೆ ಪ್ರಕರಣಗಳಿವೆ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ದೆಹಲಿ ಪೊಲೀಸ್​ ಆರ್ಥಿಕ ಅಪರಾಧ ದಳ ಅವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಹೈ ಪ್ರೋಫೈಲ್​ ಜನರಿಗೆ ವಂಚನೆ ಮಾಡಿರುವ ಅನೇಕ ಪ್ರಕರಣಗಳು ಈತನ ಮೇಲಿದೆ. 2021ರಲ್ಲಿ ಇಡಿ, ಮನಿ ಲಾಂಡರಿಂಗ್​ ಪ್ರಕರಣದಲ್ಲಿ ಚೆನ್ನೈನ ಐಷಾರಾಮಿ ಬಂಗಲೆ ಮೇಲೆ ದಾಳಿ ಮಾಡಿದಾಗ 82.5 ಲಕ್ಷ ನಗದು 12ಕ್ಕೂ ಹೆಚ್ಚು ಐಷಾರಾಮಿ ಕಾರನ್ನು ವಶಕ್ಕೆ ಪಡೆದಿತ್ತು. ಸುಲಿಗ ಹಣದಲ್ಲಿ ಅವರು ಬಾಲಿವುಡ್​ ನಟಿಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಅವರಿಗಾಗಿ ಹಣ ಖರ್ಚು ಮಾಡುತ್ತಿದ್ದರು ಎಂಬ ಆರೋಪ ಕೂಡ ಇದೆ.

ಇದನ್ನೂ ಓದಿ: ನವದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.