ವಿಶೇಷ ಸಂಸತ್ ಅಧಿವೇಶನ: ಹೊಸ ಕಟ್ಟಡದಲ್ಲಿ ರಿಹರ್ಷಲ್.. ಎಲ್ಲ ವ್ಯವಸ್ಥೆಗಳ ಪರಿಶೀಲನೆ!

ವಿಶೇಷ ಸಂಸತ್ ಅಧಿವೇಶನ: ಹೊಸ ಕಟ್ಟಡದಲ್ಲಿ ರಿಹರ್ಷಲ್.. ಎಲ್ಲ ವ್ಯವಸ್ಥೆಗಳ ಪರಿಶೀಲನೆ!
ಹೊಸ ಸಂಸತ್ ಭವನದಲ್ಲಿ 18- 22 ರವರೆಗೂ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ರಿಹರ್ಷಲ್ ನಡೆಸಲಾಗಿದ್ದು, ಹೊಸ ಪರಿಕರಗಳು ಸರಿಯಾಗಿ ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ ತಾಲೀಮು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ನವದೆಹಲಿ: ಸೆಪ್ಟೆಂಬರ್ 18 ರಂದು ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ, 'ಅಮೃತ್ ಕಾಲ' ಸಮಯದಲ್ಲಿ ಸರ್ಕಾರವು ಕರೆದಿರುವ ಅಧಿವೇಶನಕ್ಕೆ ಮೂರು ದಿನಗಳ ಮೊದಲು ಹೊಸ ಮತ್ತು ಹಳೆಯ ಸಂಸತ್ತಿನೊಂದಿಗೆ ಪೂರ್ವಾಭ್ಯಾಸ ಕಾರ್ಯ ಕೈಗೊಳ್ಳಲಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಹಳೆಯ ಕಟ್ಟಡದಲ್ಲಿ ಒಂದು ದಿನ ಹಾಗೂ ಹೊಸ ಕಟ್ಟಡದಲ್ಲಿ ಎರಡು ದಿನ ತಾಲೀಮು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹಳೆ ಕಟ್ಟಡದಲ್ಲಿ ವಿಶೇಷ ಅಧಿವೇಶನಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ವಿಶೇಷ ಅಧಿವೇಶನದ ಮೊದಲ ದಿನ ಅಂದರೆ ಸೆ.18ರಂದು ಫೋಟೊ ಸೆಷನ್ ನಡೆಯಲಿರುವುದರಿಂದ ಅಲ್ಲಿಯೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನ ಸಂಸತ್ ಭವನದಲ್ಲಿ ಇದೇ ಮೊದಲ ಬಾರಿಗೆ ಅಧಿವೇಶನದ ಕಾರ್ಯಕಲಾಪಗಳು ನಡೆಯಲಿವೆ. ಹೊಸ ಕಟ್ಟಡದಲ್ಲಿ ಎಲ್ಲ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಪರಿಶೀಲಿಸುವ ಸಲುವಾಗಿ ಎರಡು ದಿನಗಳ ಕಾಲ ತಾಲೀಮು ನಡೆಸಲಾಗಿದೆ.
ವಿಶೇಷ ಅಧಿವೇಶನದ ವೇಳೆ ಯಾವುದೇ ಸಂಸದರು, ಹೊಸ ಭವನದಲ್ಲಿ ಯಾವುದೇ ರೀತಿಯ ತೊಂದರೆ ಎದುರಿಸಬಾರದು ಎಂಬ ಕಾರಣಕ್ಕೆ ಈ ಪೂರ್ವಾಭ್ಯಾಸ ಅಥವಾ ತಾಲೀಮು ನಡೆಸಲಾಗಿದೆ. ಆಗುವ ಯಾವುದೇ ಸಮಸ್ಯೆ ಇದ್ದರೆ ಅದನ್ನು ಖಚಿತಪಡಿಸಿಕೊಳ್ಳಲು ಈ ತಾಲೀಮು ಮಾಡಲಾಗುತ್ತಿದೆ. ವಿಶೇಷವಾಗಿ ಎಲ್ಲ ಸಚಿವರು ಮತ್ತು ಸಂಸದರಿಗೆ ಆಸನ ವ್ಯವಸ್ಥೆ ಸರಿ ಇದೆಯಾ ಏನಾದರೂ ಅನಾನುಕೂಲಗಳು ಇವೆಯಾ ಎಂಬುದನ್ನು ಈ ಪೂರ್ವಾಭ್ಯಾಸದ ವೇಳೆ ಪರಿಶೀಲನೆ ನಡೆಸಲಾಗಿದೆ. ಆಸನಗಳು, ಮೈಕ್‌ಗಳು ಮತ್ತು ಸ್ಕ್ರೀನ್ಗಳು ಸೇರಿದಂತೆ ಎಲ್ಲ ತಾಂತ್ರಿಕ ವ್ಯವಸ್ಥೆಗಳ ಪ್ರಯೋಗವನ್ನು ಮಾಡಲಾಗುತ್ತಿದೆ.
ಕುತೂಹಲಕಾರಿ ಸಂಗತಿಯೆಂದರೆ ರಿಹರ್ಸಲ್ ವೇಳೆ ಸಂಸದರ ಬದಲಿಗೆ ಸಂಸತ್ ಭವನದ ನೌಕರರನ್ನು ಆಸನಗಳ ಮೇಲೆ ಕುಳ್ಳರಿಸಿ ಮೈಕ್ ಸರಿ ಇದೆಯೋ ಇಲ್ಲವೋ ಎಂಬುದನ್ನು ಪದೇ ಪದೇ ಪರೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಂಸದರಿಗೆ ಅಳವಡಿಸಿರುವ ಡಿಸ್ಪ್ಲೇ ಗಳನ್ನು ಪರೀಕ್ಷಿಸಿ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಸಂಸತ್ ಅಧಿವೇಶನದ ಕೊನೆಯ ಮೂರು ದಿನಗಳಲ್ಲಿ ಮಾತ್ರ ಸರ್ಕಾರವು ಸದನದಲ್ಲಿ ಮಸೂದೆಯನ್ನು ಮಂಡಿಸಲಿದೆ ಎಂದು ತಿಳಿದು ಬಂದಿದೆ. ವಿಶೇಷ ಸಂಸತ್ ಅಧಿವೇಶನಕ್ಕಾಗಿ, ಐದು ದಿನಗಳ ವಿಶೇಷ ಸಂಸತ್ ಅಧಿವೇಶನಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿ ಈಗಾಗಲೇ ತನ್ನ ಎಲ್ಲ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ ಮತ್ತು ಸದನದಲ್ಲಿ ಕಡ್ಡಾಯವಾಗಿ ಹಾಜರಾಗುವ ಮೂಲಕ ಸರ್ಕಾರದ ನಿಲುವನ್ನು ಬೆಂಬಲಿಸುವಂತೆ ಸೂಚಿಸಿದೆ.
ಇದೇ ವೇಳೆ, ವಿಶೇಷ ಸಂಸತ್ ಅಧಿವೇಶನದಲ್ಲಿ ಎಲ್ಲ ಸಚಿವರು, ಸಂಸದರು ಕಡ್ಡಾಯವಾಗಿ ಹಾಜರಿರುವಂತೆ ಸೂಚನೆಗಳನ್ನು ನೀಡಲಾಗಿದೆ. ಸಂಸದರಿಗೆ ವಿಪ್ ಜಾರಿ ಮಾಡಲಾಗಿದ್ದು, ಐದು ದಿನವೂ ಸದನದಲ್ಲಿ ಇರುವಂತೆ ಸೂಚಿಸಲಾಗಿದೆ. ಸರ್ಕಾರದ ಈ ಕಟ್ಟಪ್ಪಣೆ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಮ್ಮೆ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಎತ್ತುತ್ತಿರುವ ಪ್ರಶ್ನೆಗಳ ನಡುವೆ. ಸರ್ಕಾರವು ತನ್ನ ನಿಲುವು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ನಡುವೆ, 75 ವರ್ಷಗಳ ಸ್ವಾತಂತ್ರ್ಯದ ಪಯಣದ ಚರ್ಚೆಯ ಜೊತೆಗೆ ನಾಲ್ಕು ಪ್ರಮುಖ ಮಸೂದೆಗಳನ್ನು ವಿಶೇಷ ಅಧಿವೇಶನದ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
