ETV Bharat / bharat

ಇವಿಎಂ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

author img

By ETV Bharat Karnataka Team

Published : Oct 3, 2023, 10:03 AM IST

Updated : Oct 3, 2023, 10:21 AM IST

ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

security shot and committed suicide
ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕೊರ್ಬಾ(ಛತ್ತೀಸ್​ಗಢ): ಛತ್ತೀಸ್​ಗಢದ ಕೊರ್ಬಾ ಜಿಲ್ಲೆಯಲ್ಲಿ ಇವಿಎಂ ಭದ್ರತೆಗಾಗಿ ನಿಯೋಜಿಸಿದ್ದ ಯೋಧನೊಬ್ಬ ತನ್ನದೇ ಐಎನ್​ಎಸ್​ಎಎಸ್​ ರೈಫಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊರ್ಬಾದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಇವಿಎಂ ಮತಯಂತ್ರ ಗೋದಾಮಿನಲ್ಲಿ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಯೋಧನನ್ನು ಲಲಿತ್​ ಸೋನ್ವಾನಿ ಎಂದು ಗುರುತಿಸಲಾಗಿದ್ದು, ಆತ ಜಂಜಗೀರ್​ ಜಿಲ್ಲೆಯ ಚಂಪಾ ಜಿಲ್ಲೆಯ ನಿವಾಸಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಯೋಧನ ರೈಫಲ್​, ಮೊಬೈಲ್​ ಫೋನ್​ ಹಾಗೂ ಇತರ ಕೆಲವು ವಸ್ತುಗಳು ಆತನ ಹಾಸಿಗೆಯ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಘಟನೆ ನಡೆದ ಸ್ಥಳದಿಂದ ಯೋಧನ ಎದೆಗೆ ಗುಂಡು ಹಾರಿಸಿದಂತಿದ್ದು, ಗುಂಡು ಎದೆಯ ಮೂಲಕ ಹಾದು ಹೋಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಬಳಿಕ ಸ್ಥಳಕ್ಕೆ ಶ್ವಾನ ದಳ ಹಾಗೂ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ತನಿಖೆ ನಡೆಯುತ್ತಿದೆ. ಸ್ಥಳ ತಪಾಸಣೆ ನಡೆಸಿರುವ ಪೊಲೀಸರು ಅಲ್ಲಿರುವ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸ್​ ಅಧಿಕಾರಿಗಳು ಹೇಳುವುದೇನು?: ಈ ಬಗ್ಗೆ ಕೊರ್ಬಾ ಸಿವಿಲ್​ ಲೈನ್​ ಪೊಲೀಸ್​ ಠಾಣೆಯ ಮೃತ್ಯುಂಜಯ್​ ಪಾಂಡೆ ಮಾತನಾಡಿದ್ದಾರೆ. "ಮೇಲ್ನೋಟಕ್ಕೆ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಏನು ಎಂಬುದು ಹಾಗೂ ಸತ್ಯಾಸತ್ಯತೆ ಗೊತ್ತಾಗಲಿದೆ. ಅಲ್ಲಿವರೆಗೂ ಏನೂ ಹೇಳಲು ಆಗಲ್ಲ" ಎಂದು ಮೃತ್ಯುಂಜಯ್​ ಪಾಂಡೆ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಯೋಧನ ವಯಸ್ಸು ಸುಮಾರು 30 ರಿಂದ 35 ಎಂದು ಅಂದಾಜಿಸಲಾಗಿದೆ. ಮೃತ ಯೋಧ ಲಲಿತ್​ ಸೋನ್ವಾನಿ ಮೊಬೈಲ್​ ಕಾಲ್​​ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಫೋನ್​ ಕಾಲ ಪರಿಶೀಲನೆ ಪ್ರಕಾರ ಮೃತ ಯೋಧ ಕೊನೆಯದಾಗಿ ಅವರ ತಂದೆಯೊಂದಿಗೆ ಮಾತನಾಡಿರುವುದು ಕಂಡು ಬಂದಿದೆ. ಕಲಕ್ಷರೇಟ್​ನಲ್ಲಿರುವ ಇವಿಎಂ ಯಂತ್ರಗಳ ಭದ್ರತೆಗಾಗಿ ಆಗಸ್ಟ್​ ತಿಂಗಳಿನಿಂದ ಯೋಧನನನ್ನು ಇಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.

ಈ ನಡುವೆ ಅವರ ಕುಟುಂಬದವರು ಮತ್ತು ಆಪ್ತರಲ್ಲಿ ಆತ ಏಕೆ ಆತ್ಮಹತ್ಯೆಗೆ ಶರಣಾದ ಎಂಬ ಅನುಮಾನಗಳು ವ್ಯಕ್ತವಾಗಿವೆ ಎನ್ನಲಾಗಿದೆ. ಈ ಬಗ್ಗೆ ಅವರು ತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ತನಿಖೆ ಬಳಿಕ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬರಲಿದೆ.

ಇದನ್ನೂ ಓದಿ : ಶಿವಮೊಗ್ಗ: ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್​ಕಾನ್​ಸ್ಟೇಬಲ್ ಆತ್ಮಹತ್ಯೆ

Last Updated : Oct 3, 2023, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.