ETV Bharat / bharat

ಪಶ್ಚಿಮಬಂಗಾಳದ ಹೌರಾದಲ್ಲಿ ಹಿಂಸಾಚಾರ ಪ್ರಕರಣ: ನಿಷೇಧಾಜ್ಞೆ, ಇಂಟರ್​ನೆಟ್​ ಬಂದ್​

author img

By

Published : Apr 1, 2023, 8:03 AM IST

ಹಿಂಸಾಚಾರದ ಬಳಿಕ ಪಶ್ಚಿಮಬಂಗಾಳದ ಹೌರಾದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಇಂಟರ್​ನೆಟ್​ ಬಂದ್​ ಮಾಡಲಾಗಿದೆ. ಇದು ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ.

ಪಶ್ಚಿಮಬಂಗಾಳದ ಹೌರಾದಲ್ಲಿ ಹಿಂಸಾಚಾರ
ಪಶ್ಚಿಮಬಂಗಾಳದ ಹೌರಾದಲ್ಲಿ ಹಿಂಸಾಚಾರ

ಹೌರಾ(ಪಶ್ಚಿಮಬಂಗಾಳ): ರಾಮನವಮಿ ಮೆರವಣಿಗೆ ಮೇಲೆ ನಡೆದಿದ್ದ ದಾಳಿ ಬಳಿಕ ಪಶ್ಚಿಮಬಂಗಾಳದ ಹೌರಾ ಇನ್ನೂ ಶಾಂತವಾಗಿಲ್ಲ. ನಿನ್ನೆ ಕೂಡ ಮತ್ತೆ ಉದ್ರಿಕ್ತರು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸರ್ಕಾರ ಸಿಆರ್​ಪಿಸಿ ಸೆಕ್ಷನ್​ 144 ಜಾರಿ ಮಾಡಿದ್ದಲ್ಲದೇ, ಇಂದು ಮಧ್ಯರಾತ್ರಿ 2 ಗಂಟೆವರೆಗೆ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಿದೆ. ಬಿಹಾರದಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್​ನಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.

ಪಶ್ಚಿಮಬಂಗಾಳದ ಹೌರಾದಲ್ಲಿ ಕೆಲ ಉದ್ರಿಕ್ತರು ಶುಕ್ರವಾರ ಮಧ್ಯಾಹ್ನ ಮತ್ತೆ ರಸ್ತೆಗೆ ಇಳಿದು ಹಿಂಸಾಚಾರ ನಡೆಸಿದ್ದಾರೆ. ಪೊಲೀಸ್​ ವಾಹನ, ಪತ್ರಕರ್ತರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಗುರುವಾರವಷ್ಟೇ ಈ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಬಳಿಕ ಜನರ ಸಂಚಾರಕ್ಕೆ ಪ್ರದೇಶವನ್ನು ಮುಕ್ತ ಮಾಡಲಾಗಿತ್ತು. ಆದರೆ, ಕೆಲ ಗಲಭೆಕೋರರು ಮತ್ತೆ ಹಿಂಸಾಚಾರ ನಡೆಯುವಂತೆ ಮಾಡಿದ್ದಾರೆ.

ಗಲಭೆಯನ್ನು ತಡೆಯಲು ಸರ್ಕಾರ ತಕ್ಷಣಕ್ಕೆ ಜಾರಿಗೆ ಬರುವಂತೆ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ. ಶನಿವಾರ ಮಧ್ಯರಾತ್ರಿ 2 ಗಂಟೆವರೆಗೆ ಇಂಟರ್​ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಹೌರಾ, ಶಿಬ್ಪುರ್, ಸಂತ್ರಗಾಚಿ, ದಾಸ್ನಗರ, ಸಾಲ್ಕಿಯಾ, ಮಾಲಿಪಂಚ್ಘೋರಾ ಮತ್ತು ಜಗಚಾ ಪ್ರದೇಶಗಳಲ್ಲಿ ಏಪ್ರಿಲ್ 1 ರಾತ್ರಿವರೆಗೂ ನಿಷೇಧವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಚೋದನಕಾರಿ ಸಂದೇಶಗಳು ಮತ್ತು ವಿಡಿಯೋಗಳ ಹರಿದಾಟ ನಿರ್ಬಂಧಿಸಲು ಟೆಲಿಕಾಂ, ಇಂಟರ್ನೆಟ್ ಮತ್ತು ಕೇಬಲ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿ ಸ್ಥಗಿತಕ್ಕೆ ಸೂಚಿಸಿದೆ. ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ತುರ್ತು ಪರಿಸ್ಥಿತಿ ಮುಂದುವರೆದಿದೆ. ಇದು ಸಾರ್ವಜನಿಕ ಶಾಂತಿಗಾಗಿ ತ್ವರಿತ ಕ್ರಮದ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಐಡಿ ತನಿಖೆಗೆ ಆದೇಶ: ಹಿಂಸಾಚಾರದ ಬಳಿಕ ಘಟನೆಯಯನ್ನು ಮುಖ್ಯಮಂತ್ರಿ ಬ್ಯಾನರ್ಜಿ ನೇತೃತ್ವದ ಸರ್ಕಾರ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವಹಿಸಿದೆ. ಸಿಐಡಿ ಪೊಲೀಸ್ ಮಹಾನಿರೀಕ್ಷಕ ಸುನಿಲ್ ಚೌಧರಿ ನೇತೃತ್ವದ ವಿಶೇಷ ತಂಡ ತನಿಖೆ ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರೊಂದಿಗೆ ಮಾತನಾಡಿ, ಹಿಂಸಾಚಾರ ಭುಗಿಲೆದ್ದ ಹೌರಾದಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ರಾಜಕೀಯ ಕಿತ್ತಾಟ: ಹಿಂಸಾಚಾರದ ಬಳಿಕ ರಾಜಕೀಯ ಕಿತ್ತಾಟ ಶುರುವಾಗಿದೆ. ಈ ಗಲಾಟೆಗೆ ಬಿಜೆಪಿ ಕಾರಣ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದರೆ, ಇದನ್ನು ಎನ್​ಎಐ ತನಿಖೆಗೆ ನೀಡಲು ಎಂದು ಕೇಸರಿ ಪಡೆ ಸವಾಲು ಹಾಕಿದೆ. ಅಲ್ಲದೇ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಎನ್‌ಐಎ ತನಿಖೆಗೆ ಕೋರಿ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಘಟನೆ ಕುರಿತಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂಸಾಚಾರ ನಡೆಸಿದವರಿಗೆ ಸಿಎಂ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಸಿಐಡಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರಾವಧಿಯಲ್ಲಿ ಹಿಂದೂ ಸಮುದಾಯದ ಮೇಲೆ ಅನೇಕ ದಾಳಿಗಳು ನಡೆದಿವೆ. ಕಳೆದ ವರ್ಷ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಲಾಗಿತ್ತು. ಘರ್ಷಣೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಓದಿ: ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.