ETV Bharat / bharat

ಶೋಪಿಯಾನ್​ನಲ್ಲಿ ಭಾರತೀಯ ಸೇನೆ - ಉಗ್ರರ ನಡುವೆ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

author img

By ETV Bharat Karnataka Team

Published : Oct 10, 2023, 7:47 AM IST

Updated : Oct 10, 2023, 8:05 AM IST

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

Etv Bharat
Etv Bharat

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ದಕ್ಷಿಣ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಭಯೋತ್ಪಾದಕರನ್ನು ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆಯ ಮೊರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಅಬ್ರಾರ್​ ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ಎಡಿಜಿಪಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕಾಶ್ಮೀರ ಪೊಲೀಸ್​ ಟ್ವೀಟ್​ ಮಾಡಿ, "ಶೋಪಿಯಾನ್‌ ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಉಗ್ರರನ್ನು ಮಟ್ಟ ಹಾಕಲು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿತ್ತು.

ಶೋಪಿಯಾನ್​ ಜಿಲ್ಲೆಯ ಅಲ್ಶಿಪೋರಾ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಜಮ್ಮು ಕಾಶ್ಮೀರ ಪೊಲೀಸ್ ಸಿಬ್ಬಂದಿ​ ಮತ್ತು ಭಾರತೀಯ ಸೇನೆ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆ ಪ್ರಾರಂಭಿಸಿದೆ. ಉಗ್ರರು ಅಡಗಿಕೊಂಡಿದ್ದ ಪ್ರದೇಶವನ್ನು ಸುತ್ತುವರೆದ ಭಾರತೀಯ ಸೇನೆ ಮತ್ತು ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಈ ವೇಳೆ ಭಾರತೀಯ ಸೇನೆಯೂ ಪ್ರತಿ ದಾಳಿ ನಡೆಸಿದೆ. ಸೇನಾ ದಾಳಿ ಇಬ್ಬರು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಗ್ರರು ಮತ್ತು ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ದಾಳಿ ಪ್ರಕರಣಗಳು ನಡೆಯುತ್ತಲೇ ಇದೆ.

ಕುಪ್ವಾರ ಜಿಲ್ಲೆಯಲ್ಲಿ ಇಬ್ಬರು ನುಸುಳುಕೋರರ ಹತ್ಯೆ : ಕಳೆದ ಸೆಪ್ಟೆಂಬರ್​ ಅಂತ್ಯದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ನುಸುಳುಕೋರರನ್ನು ಹತ್ಯೆ ಮಾಡಿದ್ದರು. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್​ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಯತ್ನಿಸುತ್ತಿದ್ದ ಇಬ್ಬರು ನುಸುಳುಕೋರರ ಮೇಲೆ ಭದ್ರತಾ ಸಿಬ್ಬಂದಿಗಳ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನಾ ಸ್ಥಳದಿಂದ ಎರಡು ಎಕೆ ರೈಫಲ್ಸ್​​, ನಾಲ್ಕು ಮ್ಯಾಗಜಿನ್​, 90 ಗುಂಡು, ಒಂದು ಪಿಸ್ತೂಲ್​ ವಶಕ್ಕೆ ಪಡೆಯಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಲಡಾಖ್​ನಲ್ಲಿ ಭಾರಿ ಹಿಮಪಾತ:ಒಬ್ಬ ಯೋಧ ಮೃತ, ಮೂವರು ನಾಪತ್ತೆ

Last Updated : Oct 10, 2023, 8:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.