ETV Bharat / bharat

ದೇವರನಾಡಿನಲ್ಲಿ ವರುಣನ ರೌದ್ರ ನರ್ತನ: ಒಂದೇ ಕುಟುಂಬದ 6 ಮಂದಿ ಸಾವು, ಹಲವೆಡೆ ದುರಂತ

author img

By

Published : Oct 17, 2021, 4:58 AM IST

Updated : Oct 17, 2021, 5:40 AM IST

ಕೇರಳದ ಕೊಕ್ಕಾಯಾರ್​ನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಏಳು ಮನೆಗಳು ಕೊಚ್ಚಿ ಹೋಗಿದ್ದು, 8 ಜನರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್​ ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ.

seven-were-killed-in-landslide-due-to-heavy-rain-in-kerala
ದೇವರನಾಡಿನಲ್ಲಿ ವರುಣನ ರೌದ್ರ ನರ್ತನ

ತಿರುವನಂತಪುರಂ(ಕೇರಳ) : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸಿವೆ. ಕೊಟ್ಟಾಯಂ ಜಿಲ್ಲೆಯ ಕೂಟಿಕಲ್​ನಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ 6 ಮಂದಿ ಸೇರಿ ಒಟ್ಟೂ 7 ಜನರು ಸಾವನ್ನಪ್ಪಿದ್ದಾರೆ.

ಮಳೆಯಿಂದ ಇದುವರೆಗೆ 12ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಕೂಟಿಕಲ್​ನ ಮಾರ್ಟಿನ್ ಎಂಬುವರ ಕುಟುಂಬ ಭೂಕುಸಿತಕ್ಕೆ ಸಿಲುಕಿದೆ. ಮಾರ್ಟಿನ್​ ಸೇರಿ ಅವರ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಈ ಪ್ರದೇಶದ ಮೂರು ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಇತರ ಮೂವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸೇನಾ ಸಿಬ್ಬಂದಿಯ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಆಗಮಿಸಿದೆ.

seven-were-killed-in-landslide-due-to-heavy-rain-in-kerala
ಕೇರಳ ಪ್ರವಾಹ

ಎಂಥಾಯರ್, ಕೂಟ್ಟಕ್ಕಾಯಂ ಮತ್ತು ಕಾಂಜಿರಪಲ್ಲಿ ಪಟ್ಟಣಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಪ್ರದೇಶದ ಅನೇಕ ಜನರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಪ್ರವಾಹ ಭಯದಲ್ಲಿ ಬದುಕುವಂತಾಗಿದೆ. ಕಾಂಜಿರಪಲ್ಲಿಯಲ್ಲಿ 13 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 86 ಕುಟುಂಬಗಳ 222 ಜನರು ಆಶ್ರಯ ಪಡೆದಿದ್ದಾರೆ.

ಇಡುಕ್ಕಿ ಭೂಕುಸಿತದಲ್ಲಿ 8 ಜನರು ಕಾಣೆ:

ಇಡುಕ್ಕಿಯ ಕೊಕ್ಕಾಯಾರ್​ನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಏಳು ಮನೆಗಳು ಕೊಚ್ಚಿ ಹೋಗಿದ್ದು, 8 ಜನರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್​ ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ.

ಪ್ರವಾಹಕ್ಕೆ ಸಿಲುಕಿ ಇಬ್ಬರು ಸಾವು:

ಕಾಂಜರ್-ಮನಪ್ಪಾಡಿ ರಸ್ತೆಯ ಮುನ್ನುಂಕವಯಾಲ್ ಬಳಿ ಕಾರೊಂದು ಪ್ರವಾಹಕ್ಕೆ ಸಿಲುಕಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗುಡ್ಡದಿಂದ ರಭಸವಾಗಿ ಹರಿದುಬರುತ್ತಿದ್ದ ನೀರಿಗೆ ಸಿಲುಕಿ ಕಾರು ಕೊಚ್ಚಿಕೊಂಡು ಹೋಗಿ ದುರಂತ ಸಂಭವಿಸಿದೆ.

ಐದು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್:

ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್​, ಇಡುಕ್ಕಿ ಮತ್ತು ಕೊಟ್ಟಾಯಂ- ಈ ಐದು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆಯಾಗಿದೆ. ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲಿ ಭಾರಿ ಮಳೆ

ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಭಾರಿ ಮಳೆಯಿಂದಾಗಿ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಮಳೆಯಿಂದಾಗಿ ಮನಿಯಾರ್ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ವರುಣನಾರ್ಭಟ : ಪ್ರವಾಹದ ಸುಳಿಯಲ್ಲಿ ದೇವರನಾಡು..13 ಮಂದಿ ನಾಪತ್ತೆ!

Last Updated : Oct 17, 2021, 5:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.