ETV Bharat / bharat

6 ವಿಧಾನಸಭಾ 1 ಲೋಕಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಇಂದು.. ಮತ ಎಣಿಕೆ ಪ್ರಾರಂಭ

author img

By

Published : Dec 8, 2022, 9:00 AM IST

6 ವಿಧಾನಸಭಾ ಮತ್ತು 1 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆಯೂ ಪ್ರಾರಂಭವಾಗಿದ್ದು, ಎಲ್ಲ ಪಕ್ಷಗಳು ತಮ್ಮ ಭವಿಷ್ಯ ನಿರ್ಧಾರದ ಕ್ಷಣಕ್ಕೆ ಕಾಯುತ್ತಿವೆ. ಈ ಉಪಚುನಾವಣೆ ಫಲಿತಾಂಶ ಪಕ್ಷಗಳಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಅಡಿಪಾಯವಾಗಿದೆ.

seven constituency by election Counting started
ಐದು ರಾಜ್ಯಗಳ ಏಳು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಪ್ರಾರಂಭ

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಜೊತೆಗೆ ಒಂದು ಲೋಕಸಭಾ ಕ್ಷೇತ್ರ ಹಾಗೂ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ನಡೆಯುತ್ತಿದೆ. ವಿವಿಧ ಕಾರಣಗಳಿಂದ ತೆರವಾಗಿದ್ದ ಆರು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಡಿ.5ರಂದು ಚುನಾವಣೆ ನಡೆದಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು, ಫಲಿತಾಂಶಕ್ಕೆ ಎದರು ನೋಡುತ್ತಿದ್ದಾರೆ.

ಎಲ್ಲೆಲ್ಲಿ ಉಪ ಚುನಾವಣೆ: ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಮತ್ತು ರಾಂಪುರ್, ಖತೌಲಿ, ಒಡಿಶಾದ ಪದಾಂಪುರ್, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುಧಾನಿ ಮತ್ತು ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಉತ್ತರ ಪ್ರದೇಶದ ಮೂರು ಕ್ಷೇತ್ರಗಳ ಮೇಲೆ ಎಲ್ಲ ಪಕ್ಷಗಳ ಕಣ್ಣು ನೆಟ್ಟಿದ್ದು, ಅದರಲ್ಲೂ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಈ ಸ್ಥಾನಗಳನ್ನು ಗೆಲ್ಲುವುದು ತಮ್ಮ ಪ್ರತಿಷ್ಠೆಯ ಯುದ್ಧವಾಗಿ ಪರಿಗಣಿಸಿದೆ.

ಮೈನ್‌ಪುರಿ ಕ್ಷೇತ್ರಕ್ಕೆ ಉಪಚುನಾವಣೆ: ಅಕ್ಟೋಬರ್‌ನಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದಾಗಿ ಖಾಲಿಯಾಗಿದ್ದ ಮೈನ್‌ಪುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಎಸ್‌ಪಿ ನಾಯಕ ಅಜಂ ಖಾನ್ ಅವರನ್ನು ಅನರ್ಹಗೊಳಿಸಿದ್ದರಿಂದ ರಾಂಪುರ ಸದರ್ ಸ್ಥಾನ ತೆರವಾಗಿತ್ತು. ಮುಲಾಯಂ ಸಿಂಗ್ ಯಾದವ್ ಅವರ ಹಿರಿಯ ಸೊಸೆ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಮೈನ್‌ಪುರಿಯಿಂದ ಸ್ಪರ್ಧಿಸಿದ್ದು, ಮುಲಾಯಂ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರ ಮಾಜಿ ವಿಶ್ವಾಸಿ ರಘುರಾಜ್ ಸಿಂಗ್ ಶಾಕ್ಯಾ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಇದೇ 2013ರ ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ತಿಂಗಳು ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ದೋಷಿ ಎಂದು ಜಿಲ್ಲಾ ನ್ಯಾಯಾಲಯ ಘೋಷಣೆ ಮಾಡಿದ ಬೆನ್ನಲ್ಲಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಅವರಿಂದ ತೆರವಾಗಿ ಖತೌಲಿಯಲ್ಲಿ ಬಿಜೆಪಿ ಅವರ ಪತ್ನಿ ರಾಜಕುಮಾರಿ ಸೈನಿ ಅವರನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಲೋಕದಳದಿಂದ ಮದನ್ ಭಯ್ಯಾ ಅವರು ಕಣಕ್ಕಿಳಿದಿದ್ದಾರೆ.

ರಾಜಸ್ಥಾನದ ಸರ್ದರ್ಶಹರ್ ಸ್ಥಾನ: ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ನಿಧನದಿಂದ ತೆರವಾದ ರಾಜಸ್ಥಾನದ ಸರ್ದರ್ಶಹರ್ ಸ್ಥಾನಕ್ಕೆ ಶರ್ಮಾ ಅವರ ಪುತ್ರ ಅನಿಲ್ ಕುಮಾರ್ ಕಾಂಗ್ರೆಸ್​ನಿಂದ, ಮಾಜಿ ಶಾಸಕ ಅಶೋಕ್ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಡಿ(ಬಿಜು ಜನತಾ ದಳ) ಶಾಸಕ ಬಿಜಯ್ ರಂಜನ್ ಸಿಂಗ್ ಬರಿಹಾ ಅವರ ನಿಧನದಿಂದ ತೆರವಾದ ಒಡಿಶಾದ ಪದಂಪುರ ಕ್ಷೇತ್ರಕ್ಕೆ ಬಿರಿಹಾ ಅವರ ಹಿರಿಯ ಪುತ್ರಿ ಬರ್ಷಾ ಸಿಂಗ್ ಬರಿಹಾ ಅವರನ್ನು ಪಕ್ಷವು ಇಲ್ಲಿಂದ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಸರ್ದರ್ಶಹರ್ ಕ್ಷೇತ್ರದ ಉಪಚುನಾವಣಾ ಫಲಿತಾಂಶದ ಮೇಲೆ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿದೆ. 2023 ರ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸರ್ದರ್ಶಹರ್ ಉಪಚುನಾವಣೆಯ ಫಲಿತಾಂಶ ರಾಜ್ಯದ ರಾಜಕೀಯದಲ್ಲಿ ಬಹಳ ಮಹತ್ವದ್ದಾಗಿದೆ.

ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಮಾಂಧವಿ ನಿಧನದಿಂದ ತೆರೆವಾಗಿದ್ದ ಛತ್ತೀಸ್‌ಗಢದ ಮಾವೋವಾದಿ ಪೀಡಿತ ಕಂಕೇರ್ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಭಾನುಪ್ರತಾಪುರ್ ಕ್ಷೇತ್ರಕ್ಕೆ ಕಾಂಗ್ರೆಸ್​ ದಿ. ಮನೋಜ್​ ಸಿಂಗ್​ ಪತ್ನಿ ಸಾವಿತ್ರಿ ಮಾಂಧವಿ ಅವರನ್ನು ಕಣಕ್ಕಿಳಿಸಿದ್ದು, ಬಿಜೆಪಿ ಬ್ರಹ್ಮಾನಂದ್ ನೇತಂ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ.

ಜೆಡಿಯು ಮೈತ್ರಿಕೂಟದ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಾಹ್ನಿ ಅವರನ್ನು ವಿಧಾನಸಭಾ ಸದಸ್ಯತ್ವಕ್ಕೆ ಅನರ್ಹಗೊಳಿಸಿದ ನಂತರ ಬಿಹಾರದ ಕುಧಾನಿ ಕ್ಷೇತ್ರ ಖಾಲಿಯಾಗಿದ್ದು, ಜೆಡಿಯು ತನ್ನ ಅಭ್ಯರ್ಥಿಯಾಗಿ ಮನೋಜ್ ಸಿಂಗ್ ಕುಶ್ವಾಹ ಅವರನ್ನು ಕಣಕ್ಕಿಳಿಸಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಇಂದು ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಇಂದು ಗುಜರಾತ್​, ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.