ಸೆ.17 ಹೈದರಾಬಾದ್ ವಿಮೋಚನಾ ದಿನ: ರಜಾಕಾರರ ರಕ್ತಸಿಕ್ತ ಇತಿಹಾಸ, ಹೋರಾಟದ ಹೆಜ್ಜೆಗುರುತುಗಳು

author img

By

Published : Sep 17, 2022, 3:07 PM IST

Updated : Sep 17, 2022, 3:21 PM IST

ಹೈದರಾಬಾದ್ ವಿಮೋಚನಾ ದಿನ
Sep 17 Hyderabad Liberation Day ()

ಹೈದರಾಬಾದ್ ವಿಮೋಚನಾ ದಿನ: 1946 ರಲ್ಲಿ, ಮೊದಲ ಅಮರ ದೊಡ್ಡಿ ಕೊಮುರಯ್ಯ ಸೇರಿದಂತೆ ಚಾಕಲಿ ಐಲಮ್ಮ, ರವಿ ನಾರಾಯಣ ರೆಡ್ಡಿ, ಬದ್ದಂ ಎಲ್ಲ ರೆಡ್ಡಿ, ಮಖ್ದೂಮ್ ಮತ್ತು ಶೋಯಬುಲ್ಲಾ ಖಾನ್ ಅವರಂತಹ ಅನೇಕ ವೀರರು ಹೋರಾಟದ ಕಿಡಿ ಹೊತ್ತಿಸಿದರು. ಸಶಸ್ತ್ರ ಹೋರಾಟದಲ್ಲಿ ಸುಮಾರು ನಾಲ್ಕು ಸಾವಿರ ಜನ ಸತ್ತರು... ಅವರೆಲ್ಲ ಉರಿಯುವ ಜ್ವಾಲೆಯಂತೆ ನಿಂತು ರಜಾಕಾರರ ವಿರುದ್ಧ ಹೋರಾಡಿದರು.

ರಜಾಕಾರರ ಹಿಂಸಾಚಾರದ ಬಗ್ಗೆ ಕೇಳಿದರೆ ಎಂಥವರ ರಕ್ತವೂ ಕುದಿಯಲಾರಂಭಿಸುತ್ತದೆ. ಮಕ್ಕಳು, ವೃದ್ಧರು, ಮಹಿಳೆಯರು ಎನ್ನದೇ ಎಲ್ಲರ ಮೇಲೂ ಹೈದರಾಬಾದ್ ನಿಜಾಮನ ರಜಾಕಾರರು ಹಿಂಸಾಚಾರ ನಡೆಸಿದ್ದು ಭಾರತದ ರಕ್ತಸಿಕ್ತ ಇತಿಹಾಸದ ಪುಟಗಳಲ್ಲೊಂದು. ಇಂದು ಸೆಪ್ಟೆಂಬರ್ 17 ರಂದು ಹೈದರಾಬಾದ್ ವಿಮೋಚನಾ ದಿನ.

ಹೈದರಾಬಾದ್ ರಜಾಕಾರರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿ ಈಗಲೂ ಬದುಕಿರುವ ಎಲ್ಲ ಹಿರಿಯರು ಬಹುತೇಕ ಇಂದು ಶತಮಾನದಂಚಿನ ವಯಸ್ಸಿನಲ್ಲಿದ್ದಾರೆ. ರಜಾಕಾರರ ವಿರುದ್ಧ ವೀರಾವೇಶದಿಂದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಈಟಿವಿ ಭಾರತ ಮಾತನಾಡಿಸಿದ್ದು, ರಕ್ತಸಿಕ್ತ ಹೋರಾಟದ ಕಥನವನ್ನು ಅವರ ಬಾಯಲ್ಲೇ ಕೇಳೋಣ ಬನ್ನಿ.

ಯಾವಾಗ ಬೇಕಾದರೂ ದಾಳಿ ಮಾಡುತ್ತಿದ್ದ ರಜಾಕಾರರು: ನಿಜಾಮ್​ನ ಸೈನ್ಯದ ಕುದುರೆಗಳ ಹೆಜ್ಜೆ ಸಪ್ಪಳ ಕೇಳಿಸುತ್ತಲೇ ಎಲ್ಲ ಜನರು ತಕ್ಷಣ ರಹಸ್ಯ ಸ್ಥಳಗಳಲ್ಲಿ ಅಡಗಿಕೊಳ್ಳುವ ವ್ಯವಸ್ಥೆ ಇತ್ತು. ಹಿಂಸಾಚಾರ ನಡೆಸುತ್ತ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಕ್ರೂರ ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅವರು ಸದಾ ಸಿದ್ಧರಾಗಿರುತ್ತಿದ್ದರು. ಕಷ್ಟ, ಚಿತ್ರಹಿಂಸೆಗಳ ದ್ಯೋತಕವಾದ ದೇಶಮುಖ ಮತ್ತು ಪಟೇಲರ ಸಂಕೋಲೆಗಳಿಂದ ಜನರನ್ನು ವಿಮೋಚನೆಗೊಳಿಸಲು ಅವರು ಮಾಡಿದ ಸಾಹಸ ಸ್ಮರಣೀಯ. ಅವರು ಕಾಡುಗಳಲ್ಲಿ ಅಡಗಿಕೊಳ್ಳುತ್ತಿದ್ದರು. ಎಲೆ ಮತ್ತು ಕೊಂಬೆಗಳನ್ನು ತಿನ್ನುತ್ತಿದ್ದರು ಮತ್ತು ಜನರ ರಕ್ಷಣೆಗಾಗಿ ತಮ್ಮ ಪ್ರಾಣ ಉಳಿಸಿಕೊಂಡರು.

ಜಮೀನುದಾರರು ಮತ್ತು ಜಾಗೀರದಾರರಿಂದ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಬಡವರಿಗೆ ಹಂಚಲಾಯಿತು. ಹಳ್ಳಿ ಹಳ್ಳಿಗಳಲ್ಲೂ ರೈತನೇ ಭೂಮಿಯ ಒಡೆಯ ಎಂಬ ಘೋಷಣೆ ಮೊಳಗಿಸಿದರು. ಅವರು ನಿಜಾಮನ ರಾಜ್ಯದಲ್ಲಿ ಆಂಧ್ರ ಮಹಾ ಸಭಾಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಉರ್ದು ಬಿಟ್ಟರೆ ಬೇರೆ ಯಾವ ಭಾಷೆಗೂ ಸ್ಥಾನವೇ ಇರದಿದ್ದ ಕಾಲದಲ್ಲಿ ಅವರು ಇಂಥದೊಂದು ಸಾಹಸ ಮಾಡಿದರು. ಭೂಮಿಗಾಗಿ.. ಅನ್ನಕ್ಕಾಗಿ.. ಅವರ ಹೋರಾಟದ ಫಲವಾಗಿ ಬಡವರಿಗೆ ಭೂಮಿ ಸಿಕ್ಕಿತು.

1946 ರಲ್ಲಿ, ಮೊದಲ ಅಮರ ದೊಡ್ಡಿ ಕೊಮುರಯ್ಯ ಸೇರಿದಂತೆ ಚಾಕಲಿ ಐಲಮ್ಮ, ರವಿ ನಾರಾಯಣ ರೆಡ್ಡಿ, ಬದ್ದಂ ಎಲ್ಲ ರೆಡ್ಡಿ, ಮಖ್ದೂಮ್ ಮತ್ತು ಶೋಯಬುಲ್ಲಾ ಖಾನ್ ಅವರಂತಹ ಅನೇಕ ವೀರರು ಹೋರಾಟದ ಕಿಡಿಯನ್ನು ಹೊತ್ತಿಸಿದರು. ಸಶಸ್ತ್ರ ಹೋರಾಟದಲ್ಲಿ ಸುಮಾರು ನಾಲ್ಕು ಸಾವಿರ ಜನ ಸತ್ತರು.. ಅವರೆಲ್ಲ ಉರಿಯುವ ಜ್ವಾಲೆಯಂತೆ ನಿಂತು ರಜಾಕಾರರ ವಿರುದ್ಧ ಹೋರಾಡಿದರು. ರಜಾಕಾರರ ಹಿಂಸಾಚಾರಕ್ಕೆ ಭೈರನಪಲ್ಲಿಯಲ್ಲಿ 118 ಮಂದಿ ಪ್ರಾಣ ಕಳೆದುಕೊಂಡರೂ, ಅದರಲ್ಲಿ ಯಾರೊಬ್ಬರೂ ಸೋಲು ಒಪ್ಪಿಕೊಳ್ಳಲಿಲ್ಲ.

1948ರಲ್ಲಿ ಹೈದರಾಬಾದ್​​ಗೆ ಮುಕ್ತಿ:

ಅಂತಿಮವಾಗಿ ಭಾರತ ಸರ್ಕಾರದ ಮಧ್ಯಪ್ರವೇಶದಿಂದ ಹೈದರಾಬಾದ್ ಸಾಮ್ರಾಜ್ಯವು ಸೆಪ್ಟೆಂಬರ್ 17, 1948 ರಂದು ಪತನವಾಯಿತು. ಅಲ್ಲಿಗೆ ಹೈದರಾಬಾದ್ ಭಾರತದ ಅವಿಭಾಜ್ಯ ಅಂಗವಾಯಿತು. ಹಾಗಾಗಿಯೇ ತೆಲಂಗಾಣದ ಇತಿಹಾಸದಲ್ಲಿ ಸೆಪ್ಟೆಂಬರ್ 17ಕ್ಕೆ ವಿಶೇಷ ಸ್ಥಾನವಿದೆ.

ಇದಲ್ಲದೇ ಹೈದರಾಬಾದ್​ ವಿಲೀನದ ನಂತರ ಮೂರು ವರ್ಷಗಳ ಕಾಲ ಭಾರತ ಸರ್ಕಾರದ ಸೈನ್ಯವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿತ್ತು. ಈ ಸಮಯದಲ್ಲಿ ಹಳ್ಳಿಗಳ ಹಿರಿಯರು ಸೈನ್ಯದ ರಕ್ಷಣೆಯಲ್ಲಿ ತಮ್ಮ ಭೂಮಿಗಳನ್ನು ಹಿಂದಕ್ಕೆ ಪಡೆದರು. ಈ ಸಂದರ್ಭದಲ್ಲಿ ಜಮೀನ್ದಾರರ ದೌರ್ಜನ್ಯದ ವಿರುದ್ಧ ಮತ್ತೊಂದು ಹೋರಾಟ ನಡೆಯಿತು.

ನನ್ನ ಮೇಲೆ 16 ಕೇಸುಗಳಿದ್ದವು: ಜೈನಿ ಮಲ್ಲಯ್ಯ ಗುಪ್ತಾ (97 ವರ್ಷ): ನಮ್ಮದು ಭುವನಗಿರಿ ಕ್ಷೇತ್ರ. ನನ್ನ ಹೆಸರು ಮಲ್ಲಯ್ಯ ಗುಪ್ತಾ (97). ನಾನು ಅಲ್ಲಿನ ಮಂಡಿಯಲ್ಲಿ ಸಣ್ಣ ವ್ಯಾಪಾರ ಮಾಡುತ್ತಿದ್ದೆ. 1942 ರಲ್ಲಿ ನಿಜಾಮರ ಆಳ್ವಿಕೆಯಲ್ಲಿ ದಬ್ಬಾಳಿಕೆ ಪ್ರಾರಂಭವಾಯಿತು. ಅವರ ದೌರ್ಜನ್ಯಗಳ ವಿರುದ್ಧ ಹೋರಾಡಲು ನಾವು ನನ್ನ ಸ್ನೇಹಿತರೊಂದಿಗೆ ತಂಡವೊಂದನ್ನು ರಚಿಸಿದ್ದೆವು.

ಮಂಡಿಯಲ್ಲಿನ ಸಣ್ಣ ವ್ಯಾಪಾರಿಗಳ ಸಹಕಾರದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವು ಸಭೆಗಳನ್ನು ಆಯೋಜಿಸಿದೆವು. ಸಭೆಯ ಪೂರ್ಣ ವಿವರಗಳನ್ನು ನೀಡಿದ ಹದಿನೈದು ದಿನಗಳ ನಂತರವೇ ನಿಜಾಮರು ಸಭೆ ನಡೆಸಲು ಅನುಮತಿ ನೀಡುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ನಾವು ಹೈದರಾಬಾದ್ ಮತ್ತು ಭುವನಗಿರಿ ನಡುವೆ ಪ್ರಯಾಣಿಸುತ್ತ ರಾಜ್ ಬಹದ್ದೂರ್ ಗೌಡ್ ಮತ್ತು ಬುರ್ಗುಲಾ ನರಸಿಂಗ್ ರಾವ್ ಅವರ ಜೊತೆಗೂಡಿ ಚಳವಳಿ ಎಲ್ಲ ಕಡೆಗೂ ಹರಡಿದೆವು.

ಹೀಗಿರುವಾಗ ನನ್ನ ಮೇಲೆ 16 ಕೇಸುಗಳು ದಾಖಲಾದವು. 1946ರಲ್ಲಿ ನನ್ನನ್ನು ಬಂಧಿಸಲಾಯಿತು. ನನ್ನನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಲಾಯಿತು. ಅಲ್ಲಿ ಹತ್ತು ತಿಂಗಳು ಜೈಲಿನಲ್ಲಿ ಕಳೆದೆ. ನನಗೆ ಒಂದು ದಿನ ಹೊರಗೆ ಹೋಗಲು ಅನುಮತಿ ನೀಡಲಾಯಿತು. ನಾಂಪಲ್ಲಿ ಟಿಫಿನ್ ಸೆಂಟರ್ ನಲ್ಲಿ ನಿಲ್ಲಿಸಿ ತಿಂಡಿ ತಿನ್ನುವ ನೆಪದಲ್ಲಿ ನಾವು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾದೆವು.

ಆದರೆ, ಪೊಲೀಸರು ಮತ್ತೆ ನಮ್ಮನ್ನು ಹುಡುಕುವ ಪ್ರಯತ್ನ ಮಾಡಲಿಲ್ಲ. ರವಿ ನಾರಾಯಣ ರೆಡ್ಡಿ, ಮತ್ತು ಆರ್ಯ ಸಮಾಜ ನರೇಂದ್ರ ಅವರ ಬೆಂಬಲದಿಂದ ನಮ್ಮ ಹೋರಾಟವನ್ನು ತೀವ್ರಗೊಳಿಸಿದೆವು. ನಿಜಾಮ ನವಾಬನು ಮುಸಲ್ಮಾನನಾಗಿದ್ದರೂ ಅವನ ಶೈಲಿಯನ್ನು ಇಷ್ಟಪಡದ ಅನೇಕ ವಿದ್ಯಾವಂತ ಮುಸ್ಲಿಂ ಯುವಕರು ಹೋರಾಟದಲ್ಲಿ ಭಾಗವಹಿಸಿದ್ದರು.

ಮಖ್ದೂಮ್ ಮೊಹಿಯುದ್ದೀನ್ ಮತ್ತು ರಫಿ ಅಹಮದ್ ಮುಂತಾದವರು ಚಳವಳಿಯ ನೇತೃತ್ವ ವಹಿಸಿದ್ದರು. ನಿಜಾಮ ಆಡಳಿತದಲ್ಲಿ ನಡೆಯುತ್ತಿರುವ ಹೋರಾಟವನ್ನು ತಿಳಿಯಲು ಕಾಶ್ಮೀರದಿಂದ ಬಂದಿದ್ದ ಶೇಖ್ ಅಬ್ದುಲ್ಲಾ ಅವರಿಗೆ ಇಲ್ಲಿನ ಪರಿಸ್ಥಿತಿ ಹೇಳಿದ್ದೆವು. ಆಂದೋಲನದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದ ಬಡ ಮುಸ್ಲಿಮರಿಗೆ ವಿಷಯ ವಿವರಿಸಲು ಕೇಳಿದಾಗ, ಅವರು ಎರಡು ದಿನಗಳ ಕಾಲ ಅದೇ ಕಾರ್ಯದಲ್ಲಿದ್ದು ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ದೇಶದ ಸ್ವಾತಂತ್ರ್ಯ ದಿನದಂದು ಹೈದರಾಬಾದ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಮೊದಲ ವ್ಯಕ್ತಿ ಕೂಡ ಮುಸ್ಲಿಂ ವಿದ್ಯಾರ್ಥಿ ರಫಿ ಅಹಮದ್.

23 ತಿಂಗಳು ಜೈಲಿನಲ್ಲಿದ್ದೆ: ಗುಂತಕಂಡ್ಲ ಪಿಚ್ಚಿ ರೆಡ್ಡಿ (ವಯಸ್ಸು 97): ನಮ್ಮ ಊರು ಸೂರ್ಯಪೇಟೆ. ತೆಲುಗಿನಲ್ಲಿ ಓದಲು ಅವಕಾಶವಿಲ್ಲದ ಕಾರಣ ಆರನೇ ತರಗತಿವರೆಗೆ ಉರ್ದು ಭಾಷೆಯಲ್ಲಿ ಮಾತ್ರ ಓದಿದೆ. ತರಗತಿಗಳು ನಿಜಾಮ ನವಾಬನಿಗೆ ಪ್ರಾರ್ಥನೆ ಮಾಡುವುದರೊಂದಿಗೆ ಪ್ರಾರಂಭವಾಗುತ್ತಿದ್ದವು. ಅದನ್ನೆಲ್ಲ ಸಹಿಸಲಾಗದೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದೆ.

ನಂತರದ ಅವಧಿಯಲ್ಲಿ ಧರ್ಮಭಿಕ್ಷಂ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿದರು. ಹಳ್ಳಿಗಳಲ್ಲಿ ನಡೆಯುತ್ತಿರುವ ಅರಾಜಕತೆಗಳನ್ನು ಕೇಳಿ ವಿದ್ಯಾರ್ಥಿ ಚಳವಳಿಯತ್ತ ಆಕರ್ಷಿತನಾದೆ. ಆಂಧ್ರ ಮಹಾಸಭಾ ರಚನೆಯಾದಾಗ.. ನಾನು ತಕ್ಷಣ ಸೇರಿಕೊಂಡೆ. ಗೊಲ್ಲಪಲ್ಲಿ ಸುಗುಣರಾವ್, ಸಿ.ಎಚ್.ಹನ್ಮಂತ ರಾವ್, ಮತ್ತು ಮಿತ್ತ ಯಾದವ ರೆಡ್ಡಿ ಅವರನ್ನು ನಲ್ಗೊಂಡದಲ್ಲಿ ವಿದ್ಯಾರ್ಥಿ ಸಂಘವನ್ನು ನಡೆಸಿದ್ದಕ್ಕಾಗಿ ನಿಜಾಮರ ಸೇನೆ ಬಂಧಿಸಿತ್ತು.

ಇದರೊಂದಿಗೆ, ನಮ್ಮ ಇಡೀ ತಂಡವು ರಹಸ್ಯವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಸ್ಥಳೀಯ ದೇಶಮುಖರು ಜನರಿಗೆ ತುಂಬಾ ಕಷ್ಟ ನೀಡುತ್ತಿದ್ದರು. ಜನರನ್ನು ಹೆದರಿಸಿ ನೂರಾರು ಎಕರೆ ಕೃಷಿ ಮಾಡುತ್ತಿದ್ದರು. ಅವರು ಜನರಿಗೆ ಹಣ ಅಥವಾ ಬೆಳೆಯನ್ನು ಎಂದೂ ನೀಡುತ್ತಿರಲಿಲ್ಲ.

12 ವರ್ಷ ಸಾಗುವಳಿ ಮಾಡಿದರೆ ಆ ಜಮೀನನ್ನು ಸಾಗುವಳಿದಾರರಿಗೆ ನೀಡಬೇಕೆಂಬ ನಿಯಮವಿದ್ದರೂ ದೇಶಮುಖರು ಆ ನಿಯಮ ಪಾಲಿಸುತ್ತಿರಲಿಲ್ಲ. ಆವಾಗ ನಾನು ರೈತರನ್ನು ಒಟ್ಟುಗೂಡಿಸಿ ಹೋರಾಟ ಆರಂಭಿಸಿದೆ. ಜನಗಾಮ ತಾಲೂಕಿನಲ್ಲಿ ಒಬ್ಬ ದೇಶಮುಖರ ವ್ಯಾಪ್ತಿಗೆ ಅರವತ್ತು ಗ್ರಾಮಗಳಿದ್ದವು. ಅವರು ತೆರಿಗೆ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸುತ್ತಿದ್ದರು.

ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿರುವ ಬೆಳೆಗಳನ್ನೆಲ್ಲ ತೆಗೆದುಕೊಂಡು ಹೋಗುತ್ತಿದ್ದರು. ನಾವು ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಅವರ ವಿರುದ್ಧ ಹೋರಾಡಿ ಬಡವರಿಗೆ ಭೂಮಿಯನ್ನು ಹಂಚಿದ್ದೇವೆ. ನಾನು ಗ್ರೆನೇಡ್‌ನೊಂದಿಗೆ ಸಿಕ್ಕಿಬಿದ್ದೆ ಮತ್ತು 23 ತಿಂಗಳು ಜೈಲು ಶಿಕ್ಷೆ ಅನುಭವಿಸಿದೆ.

ನಾವು ಸಶಸ್ತ್ರ ಹೋರಾಟ ಮಾಡುತ್ತ ಅರಣ್ಯದಲ್ಲಿ ಅಡಗಿಕೊಳ್ಳುತ್ತಿದ್ದೆವು. ನಿಜಾಮನು ಕೇಂದ್ರ ಸೇನೆಗೆ ಶರಣಾದರೂ ನಾವು ಹೋರಾಟ ನಿಲ್ಲಿಸಲಿಲ್ಲ. ಸೇನೆಯ ಸಹಾಯದಿಂದ ನಾವು ಬಡವರಿಗೆ ಭೂಮಿಯನ್ನು ಹಂಚಿದೆವು. ನಿಜಾಮರ ವಿರುದ್ಧ ಹೋರಾಡಿದ ಕಮ್ಯುನಿಸ್ಟ್ ಪಡೆಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆದಾಗ್ಯೂ ಸುದೀರ್ಘ ಹೋರಾಟದ ನಂತರ ನಾವು ಮರಳಿ ಬಂದು ಸಾಮಾನ್ಯ ಜೀವನ ಆರಂಭಿಸಿದೆವು.

ದೇಶಮುಖರ ವಿರುದ್ಧ ಹೋರಾಡಿದ್ದಕ್ಕೆ ನಾನು ಬಂಧಿತನಾಗಿದ್ದೆ: ದರ್ಗ್ಯಾನಾಯಕ್ (105), ಧರ್ಮಪುರಂ: ರಜಾಕಾರರ ಜೊತೆ ಹೋರಾಡಿದ ಜನಗಾಮ ಜಿಲ್ಲೆ ದೇವರುರುಪ್ಪುಳ ಮಂಡಲದ ಧರ್ಮಪುರಂ ಪದ್ಮತಿ ತಾಂಡಾದ ಜಾತೋತು ದರ್ಗ್ಯಾನಾಯಕ್ (105) ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ. ಮೂರು ತಿಂಗಳ ಕೆಳಗೆ ‘ಈಟಿವಿ ಭಾರತ್’ ಜೊತೆ ಮಾತನಾಡಿ ಹೋರಾಟದ ಕ್ಷಣಗಳನ್ನು ವಿವರಿಸಿದರು. ತಮ್ಮ ಅವಿಭಕ್ತ ಕುಟುಂಬದ ಸದಸ್ಯ ಜಾತೋತು ತಾನೂನಾಯಕ್ ತೋರಿದ ಧೈರ್ಯ ಅವಿಸ್ಮರಣೀಯ ಎಂದು ದರ್ಗ್ಯಾ ನಾಯ್ಕ್ ಸ್ಮರಿಸಿದರು.

ವಿಸುನೂರು ಜಮೀನ್ದಾರರು ಕಷ್ಟಪಟ್ಟು ಬೆಳೆದ ಧಾನ್ಯವನ್ನು ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದಾಗ ತಾನುನಾಯಕ್ ಬಂಡಾಯವೆದ್ದರು. ಧಾನ್ಯವನ್ನು ತಾನು ಮರಳಿ ತಂದನು. ಹಾಗಾಗಿ ದೇಶಮುಖನ ಆಳುಗಳು ಆತನನ್ನು ಹುಡುಕಲಾರಂಭಿಸಿದರು. ಆತ ಪತ್ತೆಯಾಗದ ಕಾರಣ ಆತನ ಕುಟುಂಬಸ್ಥರಿಗೆ ಚಿತ್ರಹಿಂಸೆ ನೀಡಿದರು.

ಸಿರಿವಂತರ ಅರಾಜಕತೆಯಿಂದ ತಾಂಡಾದ ಜನರ ಹೃದಯ ಉರಿಯಿತು. ಅವರಲ್ಲಿ ಬಂಡಾಯದ ಭಾವನೆಗಳು ಹುಟ್ಟಿಕೊಂಡವು. ಬಹುತೇಕ ಗ್ರಾಮಸ್ಥರು ತಾನುನಾಯಕ್ ಅವರನ್ನು ಬೆಂಬಲಿಸಿದರು. ನಡೆಯುತ್ತಿರುವ ಹೋರಾಟದ ಸಮಯದಲ್ಲಿ, ಸ್ವಲ್ಪ ಸಮಯದವರೆಗೆ ಮೊಂಡ್ರೈನಲ್ಲಿದ್ದ ತಾನುನಾಯಕ್ ಅವರನ್ನು ಜಮೀನ್ದಾರರು ಸೆರೆಹಿಡಿದು ಚಿತ್ರಹಿಂಸೆ ನೀಡಿ ಗುಂಡಿಕ್ಕಿ ಕೊಂದರು.

ನಂತರ, ಅವರ ಕುಟುಂಬ ಸದಸ್ಯರನ್ನು ಜೀವಂತ ದಹನ ಮಾಡಿದರು. ನಿಜಾಮರ ಆಡಳಿತದಿಂದ ಸ್ವಾತಂತ್ರ್ಯ ಪಡೆದ ನಂತರ ಧರ್ಮಪುರಂ ಪ್ರಾಥಮಿಕ ಶಾಲೆಯ ಬಳಿ ತಾನೂನಾಯಕ್ ಅವರ ಸ್ಮಾರಕ ಸ್ತಂಭವನ್ನು ನಿರ್ಮಿಸಲಾಯಿತು ಎಂದು ದರ್ಗ್ಯಾನಾಯಕ್ ವಿವರಿಸಿದರು.

ಬಾಲ್ಯದಲ್ಲಿ ರಹಸ್ಯವಾಗಿ ಮಾಹಿತಿ ರವಾನಿಸುತ್ತಿದ್ದೆ: ಬತ್ತಿನಿ ಯಾದಗಿರಿಗೌಡ (ವಯಸ್ಸು 89): ನಮ್ಮ ಊರು ಭುವನಗಿರಿ ಜಿಲ್ಲೆಯ ಆತ್ಮಕೂರು (ಎಂ) ಮಂಡಲದ ಪುಲ್ಲೈಗುಡೆಂ. ನಾನು ಜಮೀನುದಾರನ ಬಳಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ 10 ಕೆಜಿ ಅಕ್ಕಿ ಕೊಡುತ್ತಿದ್ದರು. ಸುಮಾರು 13ನೇ ವಯಸ್ಸಿನಲ್ಲಿ ಜಮೀನುದಾರರ ಕುರಿ, ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರವಲಯದಲ್ಲಿರುವ ದಟ್ಟ ಕಾಡಿಗೆ ಹೋಗುತ್ತಿದ್ದೆ.

ಒಂದು ದಿನ ಅಲ್ಲಿ ಮೂರು ಜನ ಕುಳಿತು ಏನೋ ಚರ್ಚೆ ಮಾಡುತ್ತಿದ್ದರು. ಅವರು ನನ್ನನ್ನು ನೋಡಿ ನನ್ನ ವಿವರಗಳನ್ನು ಕೇಳಿದರು. ನಾನು ವಿವರಗಳನ್ನು ನೀಡಿ ನನ್ನಲ್ಲಿದ್ದ ಆಹಾರ ಹಂಚಿಕೊಂಡೆ. ಎರಡ್ಮೂರು ದಿನ ಇಲ್ಲೇ ಇರುತ್ತೇವೆ. ದಿನವೂ ಗುಟ್ಟಾಗಿ ಊಟ ತರಬೇಕು ಅಂತ ಕೇಳಿದರು. ಗ್ರಾಮದಲ್ಲಿ ಓದಿದ ಯುವಕರ ವಿವರವನ್ನೂ ಕೇಳಿದರು. ಕೊಪ್ಪುಳ ನರಸಿರೆಡ್ಡಿ, ಬಂಡಾರಿ ಬುಚ್ಚಿರೆಡ್ಡಿ, ಜೀಡಿಮಲ್ಲ ರಾಮಚಂದ್ರರೆಡ್ಡಿ ಇವರ ಹೆಸರನ್ನು ನಾನು ಅವರಿಗೆ ಹೇಳಿದ್ದೆ.

ಅವರು ಒಂದು ಪತ್ರವನ್ನು ನನಗೆ ನೀಡಿ, ಅದನ್ನು ಅವರಿಗೆ ಹಸ್ತಾಂತರಿಸುವಂತೆ ಕೇಳಿದರು. ಒಂದು ವಾರದ ನಂತರ ಮತ್ತೆ ಬರುವುದಾಗಿ ಹೇಳಿ ಹೊರಟು ಹೋದರು. ಹಳ್ಳಿಯ ವಿದ್ಯಾವಂತ ಯುವಕರಿಗೂ ಅದನ್ನೇ ಹೇಳಿದ್ದೆ. ಆದರೂ ಆ ಮೂವರು ಯಾರು ಅಂತ ಗೊತ್ತಿರಲಿಲ್ಲ. ಅವರೇ ರವಿ ನಾರಾಯಣ ರೆಡ್ಡಿ, ಪುಚ್ಚಲಪಲ್ಲಿ ಸುಂದರಯ್ಯ, ಬದ್ದಂ ಎಲ್ಲ ರೆಡ್ಡಿ ಎಂದು ನಂತರ ತಿಳಿಯಿತು. ಹತ್ತು ದಿನಗಳ ನಂತರ ಮತ್ತೆ ಬಂದು ನಿಜಾಮರ ನಿರಂಕುಶ ಆಡಳಿತ ಮತ್ತು ರಜಾಕಾರರ ದೌರ್ಜನ್ಯದ ವಿರುದ್ಧ ತಮ್ಮ ಚಳವಳಿಯನ್ನು ವಿವರಿಸಿದರು.

ಗುಂಡಾಲ ಮಂಡಲದ ಸುದ್ದಲ್‌ನಲ್ಲಿ ಗುರ್ರಂ ಯಾದಗಿರಿರೆಡ್ಡಿ, ಆತ್ಮಕೂರು ಮಂಡಲದ ಕಪ್ರಾಯಿಪಲ್ಲಿಯಲ್ಲಿ ದುಡಿಪಾಲ ಪೆದ್ದ ಸತ್ತಿರೆಡ್ಡಿ ಮತ್ತು ಚಿನ್ನಸತ್ತಿರೆಡ್ಡಿ, ಕುರೆಲ್ಲದಲ್ಲಿ ಕಂಚಾರ್ಲ ಸಂಜೀವ ರೆಡ್ಡಿ ಸಶಸ್ತ್ರ ಪಡೆಗಳ ನಡುವೆ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರವಿ ನಾರಾಯಣ ರೆಡ್ಡಿ ಅವರ ಸಲಹೆ ಮೇರೆಗೆ ರಜಾಕಾರರ ದಾಳಿಯಿಂದ ತಪ್ಪಿಸಿಕೊಳ್ಳಲು ವಿಜಯವಾಡಕ್ಕೆ ತೆರಳಿದ್ದೆ.

ಒಂದು ತಿಂಗಳ ನಂತರ ಮತ್ತೆ ಬಂದೆ. ಹೈದರಾಬಾದಿನ ಕವಾಡಿಗುಡದಲ್ಲಿ ಮುದುಕಿಯೊಬ್ಬರಿಗೆ ಎಮ್ಮೆಗಳ ಕಾವಲುಗಾರನಾಗಿ ಸೇವೆ ಸಲ್ಲಿಸಿದ್ದೆ. ಅದರ ನಂತರ ನಾನು ಅಮೀನು (ಪೊಲೀಸ್) ಮತ್ತು ರಜಾಕಾರರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದೆ ಎಂದು ಯಾದಗಿರಿಗೌಡರು ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.

ರಜಾಕಾರರ ಹತ್ಯಾಕಾಂಡದ ಬಗ್ಗೆ ನಿಮಗೆ ತಿಳಿದಿದೆಯೇ? : ಆದವರ ಲಿಂಗು ಬಾಯಿ (107): ಆ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ಒಮ್ಮೆ ನನ್ನ ಕಣ್ಣೆದುರೇ ಒಂದು ದುಷ್ಕೃತ್ಯ ನಡೆದಿತ್ತು. ನಾನು ರಕ್ತದ ಮಡುವಿನಿಂದ ಹೊರಬಂದೆ. ಆ ಕ್ಷಣಗಳಲ್ಲಿ ನಾನು ಸಾಯುತ್ತೇನೆ ಎಂದು ಭಾವಿಸಿದೆ. ಒಮ್ಮೆ ನಾವು ನಮ್ಮ ಊರಿಗೆ ಹೋಗಿ ಹೋಗಿ ಕಾಲ್ನಡಿಗೆಯಲ್ಲಿ ಮರ್ಲಪೆಲ್ಲಿಗೆ ಹಿಂತಿರುಗುತ್ತಿದ್ದೆವು.

ಆಗ ನನ್ನೊಂದಿಗೆ ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ದಾರಿಯಲ್ಲಿ ಭೈಂಸಾ ಬಳಿ ರಜಾಕಾರರು ಕೆಲವರನ್ನು ಕೊಂದರು. ಚಿಕ್ಕ ಮಕ್ಕಳನ್ನೂ ಕ್ರೂರವಾಗಿ ಹತ್ಯೆ ಮಾಡಲಾಯಿತು. ನಾನು ಹೆದರಿ ಹೇಗಾದರೂ ತಪ್ಪಿಸಿಕೊಂಡು ಮುಂದೆ ಸಾಗಲು ಪ್ರಯತ್ನಿಸಿದೆ. ಭಯದಿಂದ ನಾನು ಪೊದೆಯಲ್ಲಿ ಅಡಗಿಕೊಂಡು ನಿಧಾನವಾಗಿ ಅಲ್ಲಿಂದ ಹೊರಟೆ.

ಉಸಿರು ಬಿಗಿ ಹಿಡಿದು ಮನೆ ತಲುಪಿದೆ. ಅದಾದ ನಂತರವೂ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಜಾಕಾರರ ಹಿಂಸಾಚಾರ ನಡೆದಿತ್ತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು ಅದಾವರ ಲಿಂಗುಬಾಯಿ.

ಇವರು ನಿರ್ಮಲ್ ಜಿಲ್ಲೆಯ ಕುಭೀರ್‌ನವರಾಗಿದ್ದು, ಉಭಯ ಮಂಡಲದ ಮರ್ಲಪೆಲ್ಲಿ ಗ್ರಾಮದ ಬಾಪುರರಾವ್‌ ಅವರನ್ನು ವಿವಾಹವಾಗಿದ್ದಾರೆ. ಅವರ 15 ಮಕ್ಕಳಲ್ಲಿ 12 ಸದ್ಯ ಜೀವಂತವಾಗಿದ್ದಾರೆ. ಆರು ಗಂಡು, ಆರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸೇರಿ ಒಟ್ಟು 126 ಮಂದಿ ಅವರ ಕುಟುಂಬದಲ್ಲಿದ್ದಾರೆ. 30 ವರ್ಷಗಳ ಹಿಂದೆಯೇ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಈವರೆಗೆ ಮಾಂಸಾಹಾರ ಸೇವಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತರಕಾರಿ, ಸೊಪ್ಪುಗಳನ್ನು ಮಾತ್ರ ತಿನ್ನುತ್ತಾರೆ. ನೂರು ವರ್ಷಗಳ ನಂತರವೂ ಅಡುಗೆ ಮಾಡುವುದು ಸೇರಿದಂತೆ ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ಲಿಂಗುಬಾಯಿ ಅವರಿಗೆ ಬೇಳೆ ರೊಟ್ಟಿ, ಜೋಳದ ಗಟ್ಕಾ ಇಷ್ಟ.

ಇದನ್ನೂ ಓದಿ: ಬಿಜೆಪಿ ಗೆದ್ದು ಬಂದರೆ ಹೈದರಾಬಾದ್ 'ಭಾಗ್ಯನಗರ' ಮಾಡುತ್ತೇವೆ; ಸಿಎಂ ಯೋಗಿ ಆದಿತ್ಯನಾಥ್

Last Updated :Sep 17, 2022, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.