ETV Bharat / bharat

ಶಿವಸೈನಿಕರ ಕಾದಾಟ: 'ಬಾಳಾಸಾಹೇಬ್' ಬಣ ಕಟ್ಟಿದ ಶಿಂದೆ, ನಿಮ್ಮಪ್ಪನ ಹೆಸರೇ ಇಟ್ಟುಕೊಳ್ಳಿ ಎಂದ ಉದ್ಧವ್

author img

By

Published : Jun 25, 2022, 10:10 PM IST

ಗುವಾಹಟಿಯಲ್ಲೇ ಇದ್ದು, ತಮ್ಮ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಎಂದು ಏಕನಾಥ ಹೆಸರು ಘೋಷಿಸಿದ್ದಾರೆ. ಇದು ಉದ್ಧವ್ ಠಾಕ್ರೆ ಮತ್ತು ಅವರ ಬಣದ ಕಣ್ಣು ಕೆಂಪಾಗುವಂತೆ ಮಾಡಿದೆ.

Sena talks tough, passes resolutions; action against rebels
ಶಿವಸೈನಿಕರ ಕಾದಾಟ: 'ಬಾಳಾಸಾಹೇಬ್' ಬಣ ಕಟ್ಟಿದ ಶಿಂದೆ, ನಿಮ್ಮಪ್ಪನ ಹೆಸರು ಇಟ್ಟುಕೊಳ್ಳಿ ಎಂದ ಉದ್ಧವ್​!

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಕ್ಷಣ-ಕ್ಷಣಕ್ಕೂ ರೋಚಕತೆ ಪಡೆಯುತ್ತಿದೆ. ಶಿವಸೇನೆಯು ಎರಡು ಬಣಗಳಾಗಿ ಬೇರ್ಪಟ್ಟಿದ್ದು, ನಾಯಕರ ನಡುವೆ ಏಟು, ಎದುರೇಟು ಜೋರಾಗಿದೆ. ಇದರಿಂದ ರಾಜಕೀಯ ಬಿಕ್ಕಟ್ಟು ಶಮನಕ್ಕಿಂತಲೂ ಮತ್ತಷ್ಟು ಹೆಚ್ಚುತ್ತಲೇ ಇದೆ. ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಶಿವಸೇನೆಯ ಪ್ರಬಲ ಬಂಡಾಯ ಏಕನಾಥ ಶಿಂದೆ ಬಂಡಾಯದ ಬಾವುಟ ಸಾರಿದ್ದಾರೆ. ಶಿವಸೇನೆ ಮತ್ತು ಇತರ ಸಣ್ಣ ಪಕ್ಷಗಳು, ಪಕ್ಷೇಕರರು ಸೇರಿ ಸುಮಾರು 40 ಶಾಸಕರನ್ನು ಕಟ್ಟಿಕೊಂಡು ಬಿಜೆಪಿ ಆಡಳಿತದ ಅಸ್ಸೋಂನ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.

ಈ ನಡುವೆ ಶನಿವಾರ ಗುವಾಹಟಿಯಲ್ಲೇ ಇದ್ದು, ತಮ್ಮ ಬಣಕ್ಕೆ 'ಶಿವಸೇನಾ ಬಾಳಾಸಾಹೇಬ್' ಎಂದು ಏಕನಾಥ ಹೆಸರು ಘೋಷಿಸಿದ್ದಾರೆ. ಇದು ಉದ್ಧವ್ ಠಾಕ್ರೆ ಮತ್ತು ಅವರ ಬಣದ ಕಣ್ಣು ಕೆಂಪಾಗುವಂತೆ ಮಾಡಿದೆ. ಅಲ್ಲದೇ, ಇದಕ್ಕೆ ತೀಕ್ಷ್ಣವಾಗಿಯೇ ಚಾಟಿ ಬೀಸಿರುವ ಸಿಎಂ ಉದ್ಧವ್ ಠಾಕ್ರೆ​, ಚುನಾವಣೆಯಲ್ಲಿ ಗೆಲ್ಲಲು ನಮ್ಮ ತಂದೆ (ಬಾಳಾಸಾಹೇಬ್​ ಠಾಕ್ರೆ) ಹೆಸರು ಬಳಸಬೇಡಿ, ನಿಮ್ಮ ತಂದೆಯ ಹೆಸರನ್ನೇ ಬಳಕೆ ಮಾಡಿ ಎಂದು ಗುಡುಗಿದ್ದಾರೆ. ಇಷ್ಟೇ ಅಲ್ಲ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಇಂದಿನ 10 ಪ್ರಮುಖ ಬೆಳವಣಿಗೆಗಳು..

  • 1. ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಿದೆ. (1) ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಅವರಿಗೆ ಅಧಿಕಾರವಿದೆ. (2) ಉದ್ಧವ್ ಠಾಕ್ರೆ ಹೆಸರಿನಲ್ಲಿ ಚುನಾವಣೆಗಳು ನಡೆಯುತ್ತವೆ. (3) ಪಕ್ಷವು ಬಾಳಾಸಾಹೇಬ್ ಠಾಕ್ರೆಯವರದ್ದು ಮತ್ತು ಅವರ ಹೆಸರನ್ನು ಬಳಸಲು ಯಾರಿಗೂ ಅಧಿಕಾರವಿಲ್ಲ. (4) ಅಖಂಡ ಮಹಾರಾಷ್ಟ್ರದಲ್ಲಿ ಯಾವುದೇ ರಾಜಿ ಇಲ್ಲ. (5) ಬಾಳಾಸಾಹೇಬ್ ಠಾಕ್ರೆಯ ಹಿಂದುತ್ವ ಸಿದ್ಧಾಂತಕ್ಕೆ ಧಕ್ಕೆ ತರುವುದಿಲ್ಲ. (6) ಬಾಳಾಸಾಹೇಬ್ ಅವರ ಹೆಸರನ್ನು ಬಳಸುವವರ ವಿರುದ್ಧ ಶಿವಸೇನೆ ಕಾನೂನು ಕ್ರಮ ಕೈಗೊಳ್ಳುತ್ತದೆ.
  • 2. ಶಾಸಕಾಂಗ ಪಕ್ಷದಲ್ಲಿ ಬಂಡಾಯ ಗುಂಪು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದೆ ಮತ್ತು ಮಹಾರಾಷ್ಟ್ರದ ಹಿರಿಯ ಸಚಿವ ಏಕನಾಥ್ ಶಿಂದೆ ಅವರನ್ನು ತಮ್ಮ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಶಿವಸೇನೆಯ ಭಿನ್ನಮತೀಯ ಶಾಸಕ ದೀಪಕ್ ಕೇಸರಕರ್ ಹೇಳಿದ್ದಾರೆ. ಶಿಂದೆ ಮತ್ತು ಇತರ ಬಂಡಾಯ ಶಾಸಕರು ಬೀಡು ಬಿಟ್ಟಿರುವ ಗುವಾಹಟಿಯಲ್ಲಿ ಕೇಸರಕರ್ ಮಾತನಾಡಿ, ನಾವು ಶಿವಸೇನೆಯನ್ನು ತೊರೆದಿಲ್ಲ. ಆದರೆ, ತಮ್ಮ ಗುಂಪಿಗೆ ಶಿವಸೇನೆ (ಬಾಳಾಸಾಹೇಬ್) ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದರು.
  • 3. ತಮ್ಮ ಬಣಕ್ಕೆ ಮನ್ನಣೆ ನೀಡಬೇಕು, ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಿ ನಮ್ಮ ಅಸ್ತಿತ್ವ, ಸಂಖ್ಯಾಬಲ ಸಾಬೀತುಪಡಿಸುವುದಾಗಿ ಕೇಸರಕರ್ ತಿಳಿಸಿದ್ದಾರೆ. ನಮಗೆ ಸಂಖ್ಯಾಬಲವಿದೆ. ನಾವು ಸಿಎಂ ಉದ್ಧವ್ ಠಾಕ್ರೆ ಅವರನ್ನು ಗೌರವಿಸುತ್ತೇವೆ. ನಾವು ಅವರ ವಿರುದ್ಧ ಮಾತನಾಡುವುದಿಲ್ಲ. ಆದರೆ, ನಾವು ಅಸೆಂಬ್ಲಿ ಚುನಾವಣೆಯಲ್ಲಿ ಹೋರಾಡಿದ ಮಾರ್ಗವನ್ನೇ ಅನುಸರಿಸಬೇಕು ಎಂದಿದ್ದಾರೆ.
  • 4. ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಸ್ವಕೇಂದ್ರಿತ ರಾಜಕಾರಣಕ್ಕೆ ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪಕ್ಷ ಬಿಟ್ಟು ಹೋದವರು ನಮ್ಮ ಸಂಸ್ಥಾಪಕರ ಹೆಸರನ್ನು ಬಳಸುವಂತಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಎಚ್ಚರಿಸಿದ್ದಾರೆ. ಇತ್ತ, ಸಚಿವ ಆದಿತ್ಯ ಠಾಕ್ರೆ ಬಂಡಾಯ ಶಾಸಕರ ದ್ರೋಹವನ್ನು ಮರೆಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ನಾವು ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ.
  • 5. ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂದೆ ಗುಂಪಿನ 16 ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್ ನೀಡಿದ್ದಾರೆ. ಈ ನೋಟಿಸ್​ಗೆ ಎಲ್ಲ 16 ಶಾಸಕರು ಜೂನ್ 27ರ ಸೋಮವಾರದೊಳಗೆ ತಮ್ಮ ಲಿಖಿತ ಉತ್ತರ ಕೊಡಬೇಕೆಂದೂ ಉಪ ಸ್ಪೀಕರ್ ತಿಳಿಸಿದ್ದಾರೆ.
  • 6. ಇದರ ನಡುವೆ ನಮ್ಮ ಖರ್ಚು-ವೆಚ್ಚವನ್ನು (ಹೋಟೆಲ್ ವಾಸ್ತವ್ಯದ) ಯಾವುದೇ ಪಕ್ಷವು ನೀಡುತ್ತಿಲ್ಲ ಎಂದು ಬಂಡಾಯ ಶಾಸಕ ದೀಪಕ್ ಕೇಸರಕರ್ ಹೇಳಿದ್ದಾರೆ. ನಾವೇ ಇಲ್ಲಿಗೆ (ಗುವಾಹಟಿ ಹೋಟೆಲ್) ಬಂದು ಉಳಿದುಕೊಂಡಿದ್ದೇವೆ, ನಾವೇ ಇದರ ವೆಚ್ಚವನ್ನು ಭರಿಸುತ್ತೇವೆ. ಈ ಎಲ್ಲದರ ಹಿಂದೆ ಬಿಜೆಪಿ ಇಲ್ಲ ಎಂದಿದ್ದಾರೆ.
  • 7. ಏಕನಾಥ್ ಶಿಂದೆ ಪಾಳೆಯ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಉಪಸಭಾಪತಿ ತಿರಸ್ಕರಿಸಿದ್ದಾರೆ. ಇದನ್ನು ಶಿವಸೇನೆಯ ಲೆಟರ್‌ಹೆಡ್‌ನಿಂದ ಕಳುಹಿಸಲಾಗಿದೆ ಮತ್ತು ಪ್ರಸ್ತುತ ಶಿವಸೇನೆ ಶಾಸಕಾಂಗ ಪಕ್ಷದ ಮುಖ್ಯಸ್ಥ ಅಜಯ್ ಚೌಧರಿ ಆಗಿದ್ದು, ಇದನ್ನು ಅನಾಮಧೇಯ ಇಮೇಲ್ ಐಡಿಯಿಂದ ಕಳುಹಿಸಲಾಗಿದೆ. ಬಂಡಾಯದ ಹಿನ್ನೆಲೆಯಲ್ಲಿ ಮುಖ್ಯ ಸಚೇತಕ ಸ್ಥಾನದಿಂದ ಈಗಾಗಲೇ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕಲಾಗಿದೆ.
  • 8. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಅವರನ್ನು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಅವರು, ನಾವು ಕಾದು ನೋಡುವ ತಂತ್ರವನ್ನು ಅನುರಿಸುತ್ತಿದ್ದೇವೆ. ಆದರೆ, ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಬಂಡಾಯ ನಾಯಕ ಏಕನಾಥ್ ಶಿಂದೆ ಅವರೊಂದಿಗೆ ಇದ್ದಾರೆ. ಹೀಗಾಗಿ ಇನ್ಮುಂದೆ ಸರ್ಕಾರಕ್ಕೆ ಬಹುಮತ ಇರುವುದಿಲ್ಲ ಎಂದು ಹೇಳಿದ್ದಾರೆ.
  • 9. ರಾಜಕೀಯ ಬಿಕ್ಕಟ್ಟಿನ ನಡುವೆಯೇ ಶಿವಸೇನೆ ಕಾರ್ಯಕರ್ತರು ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಪುಣೆ ಪೊಲೀಸರು ಅಲರ್ಟ್ ಘೋಷಿಸಿದ್ದು, ನಗರದಲ್ಲಿನ ಶಿವಸೇನೆ ನಾಯಕರಿಗೆ ಸಂಬಂಧಿಸಿದ ಕಚೇರಿಗಳಿಗೆ ಭದ್ರತೆ ಒದಗಿಸುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚಿಸಿದ್ದಾರೆ.
  • 10. ಶಾಸಕರ ಕಚೇರಿ ಮೇಲೆ ದಾಳಿ ಸಂಬಂಧ ಏಕನಾಥ ಶಿಂದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಗುವಾಹಟಿಯ ಹೋಟೆಲ್‌ನಲ್ಲಿ ತಮ್ಮೊಂದಿಗೆ ಬೀಡುಬಿಟ್ಟಿರುವ 38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರಿತ ಹಿಂತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಶಾಸಕರ ನಿವಾಸಕ್ಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರೋಟೋಕಾಲ್ ಪ್ರಕಾರ ನೀಡಲಾಗಿದ್ದ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ. ಸೇಡು ತೀರಿಸಿಕೊಳ್ಳುವ ಕ್ರಿಯೆ ಎಂದು ಕಿಡಿಕಾರಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.