ETV Bharat / bharat

370ನೇ ವಿಧಿ ರದ್ಧತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

author img

By ETV Bharat Karnataka Team

Published : Sep 5, 2023, 6:00 PM IST

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್​ ಕಾಯ್ದಿರಿಸಿದೆ.

Supreme Court
ಸುಪ್ರೀಂ ಕೋರ್ಟ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಮಂಗಳವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎಸ್​.ಕೆ.ಕೌಲ್, ಸಂಜೀವ್ ಖನ್ನಾ, ಬಿ.ಆರ್​.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು 16 ದಿನಗಳ ಕಾಲ ಅರ್ಜಿಗಳನ್ನು ಆಲಿಸಿತು.

ಸುಪ್ರೀಂ ಕೋರ್ಟ್‌ ಆಗಸ್ಟ್ 2ರಂದು ಅರ್ಜಿದಾರರ ಕಡೆಯಿಂದ ವಾದವನ್ನು ಆಲಿಸಲು ಆರಂಭಿಸಿತ್ತು. ಕೇಂದ್ರ ಸರ್ಕಾರವನ್ನು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು. 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿದಾರರನ್ನು ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಗೋಪಾಲ್ ಸುಬ್ರಮಣಿಯಂ, ದುಶ್ಯಂತ್ ದವೆ, ಜಾಫರ್ ಶಾ, ಗೋಪಾಲ್ ಶಂಕರನಾರಾಯಣನ್ ಪ್ರತಿನಿಧಿಸಿ ವಾದ ಮಂಡಿಸಿದ್ದರು. ಮಂಗಳವಾರ ಅರ್ಜಿದಾರರ ಕಡೆಯ ವಕೀಲರು ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. ನಂತರ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತು.

ಇದನ್ನೂ ಓದಿ: ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ವಾದ ಮಂಡಿಸಿದ ಉಪನ್ಯಾಸಕ ಅಮಾನತು

ಸಜ್ಜದ್ ಲೋನ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್​ ಅನ್ನು ಪ್ರತಿನಿಧಿಸುವ ವಕೀಲ ಧವನ್, ಭಾರತವು ಐತಿಹಾಸಿಕವಾಗಿ, ಕಾನೂನಾತ್ಮಕವಾಗಿ ಮತ್ತು ಸಾಂವಿಧಾನಿಕವಾಗಿ ತನ್ನ ಭರವಸೆಯನ್ನು ಮುರಿಯದಂತೆ ನಿರ್ಬಂಧಿಸಲಾಗಿದೆ ಎಂದು ಪ್ರತಿಪಾದಿಸಿದರು. 1947ರಲ್ಲಿ ಒಕ್ಕೂಟದ ವಿಲೀನ ಪತ್ರಕ್ಕೆ ಸಹಿ ಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಆಂತರಿಕ ಸಾರ್ವಭೌಮತ್ವ ನೀಡಲು ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರ ಸಂವಿಧಾನಗಳಲ್ಲಿ ಏಕಕಾಲೀನ ಪ್ರತಿಬಿಂಬಗಳನ್ನು ಕಂಡುಕೊಳ್ಳುತ್ತದೆ. ಇತರ ರಾಜಪ್ರಭುತ್ವದ ರಾಜ್ಯಗಳಿಗಿಂತ ಭಿನ್ನವಾಗಿದ್ದ ಜಮ್ಮು ಮತ್ತು ಕಾಶ್ಮೀರ ಮೊದಲಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ನಂತರ ಅದು ಸಹಿ ಹಾಕಿತ್ತು ಎಂದು ಹೇಳಿದರು.

ಮತ್ತೊಬ್ಬ ಅರ್ಜಿದಾರ ಮೊಹಮ್ಮದ್ ಅಕ್ಬರ್ ಲೋನ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 370ನೇ ವಿಧಿಯನ್ನು ರದ್ದುಗೊಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಂದಿನ ಕ್ರಮವನ್ನು ಸಂವಿಧಾನ ಸಭೆಯು ನಿರ್ಧರಿಸುತ್ತದೆ ಎಂದು ಕೇಂದ್ರ ಮತ್ತು ರಾಜ್ಯಗಳ ನಡುವೆ ಈ ತಿಳಿವಳಿಕೆ ಇದೆ ಎಂದು ತಿಳಿಸಿದರು. ಜಮ್ಮು ಮತ್ತು ಕಾಶ್ಮೀರದ ಜನರು ಭಾರತದೊಂದಿಗೆ ಇದ್ದಾರೆ. ಆದರೆ, ಸಂವಿಧಾನದ 370ನೇ ವಿಧಿಯೊಂದಿಗೆ ವಿಶೇಷ ಸಂಬಂಧವಿದೆ ಎಂದು ಅವರು ತಮ್ಮ ವಾದದಲ್ಲಿ ಒತ್ತಿ ಹೇಳಿದರು.

ಇದನ್ನೂ ಓದಿ: 370ನೇ ವಿಧಿ ರದ್ದು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ: ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.