ETV Bharat / bharat

ಇಸ್ಲಾಮಿಕ್ ಆಕ್ರಮಣದಿಂದ ಭಾರತೀಯ ಸಮಾಜದಲ್ಲಿ ಮಹಿಳೆಯರ ವಿರುದ್ಧ ಸಾಮಾಜಿಕ ಅನಿಷ್ಟ ಪದ್ಧತಿಗಳು ಹುಟ್ಟಿಕೊಂಡಿವೆ: ಆರ್‌ಎಸ್‌ಎಸ್ ನಾಯಕ

author img

By ETV Bharat Karnataka Team

Published : Sep 4, 2023, 12:37 PM IST

ಮಧ್ಯಕಾಲೀನ ಅವಧಿಯಲ್ಲಿ ಆಕ್ರಮಣಕಾರರಿಂದ ರಕ್ಷಿಸಲು ಭಾರತದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹಾಕಲಾಯಿತು. ದಾಳಿಕೋರರು ಭಾರತದಿಂದ ಮಹಿಳೆಯರನ್ನು ಕರೆದೊಯ್ದು ವಿಶ್ವದಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಕಾರ್ಯಕಾರಿ ಕೃಷ್ಣ ಗೋಪಾಲ್ ಹೇಳಿದ್ದಾರೆ. ಸನಾತನ ಧರ್ಮದ ವಿರುದ್ಧ ತಮಿಳುನಾಡು ಸಚಿವ ಉದಯನಿಧಿ ಹೇಳಿಕೆ ಕುರಿತು ನಡೆಯುತ್ತಿರುವ ಗದ್ದಲದ ನಡುವೆಯೇ ಕೃಷ್ಣ ಗೋಪಾಲ್ ಅವರು ಈ ಹೇಳಿಕೆ ನೀಡಿದ್ದಾರೆ.

RSS leader
ಇಸ್ಲಾಮಿಕ್ ಆಕ್ರಮಣದಿಂದ ಭಾರತೀಯ ಸಮಾಜದಲ್ಲಿ ಮಹಿಳೆಯರ ವಿರುದ್ಧ ಸಾಮಾಜಿಕ ಅನಿಷ್ಟ ಪದ್ಧತಿಗಳು ಹುಟ್ಟಿವೆ: ಆರ್‌ಎಸ್‌ಎಸ್ ನಾಯಕ

ನವದೆಹಲಿ: ''ಇಸ್ಲಾಮಿಕ್ ಆಕ್ರಮಣದಿಂದಾಗಿ ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ, ಸತಿ ಪದ್ಧತಿ, ವಿಧವೆಯ ಮರು ವಿವಾಹದ ನಿಷೇಧದಂತಹ ಸಾಮಾಜಿಕ ಅನಿಷ್ಟಗಳು ಬೆಳೆದಿದ್ದರಿಂದ ಮಹಿಳೆಯರು ಅಪಾಯಕ್ಕೆ ಸಿಲುಕಿದ್ದರು. ಮಧ್ಯಕಾಲೀನ ಅವಧಿಯಲ್ಲಿ ಆಕ್ರಮಣಕಾರರಿಂದ ರಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹಾಕಲಾಗಿತ್ತು'' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಪದಾಧಿಕಾರಿ ಕೃಷ್ಣ ಗೋಪಾಲ್ ಹೇಳಿದ್ದಾರೆ.

ಮಧ್ಯಕಾಲೀನ ಅವಧಿ ದೊಡ್ಡ ಅವಮಾನದ ಯುಗ: ದೆಹಲಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ನಾರಿ ಶಕ್ತಿ ಸಂಗಮ” ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಮಧ್ಯಕಾಲೀನ ಅವಧಿಯು ಬಹಳ "ಕಷ್ಟಕರ" ಸಮಯ. ಇಡೀ ದೇಶವು ಅಧೀನತೆಯೊಂದಿಗೆ ಹೋರಾಡುತ್ತು. ದೇವಾಲಯಗಳನ್ನು ಕೆಡವಲಾಗಿತ್ತು. ದೊಡ್ಡ ವಿಶ್ವವಿದ್ಯಾಲಯಗಳನ್ನು ನಾಶಪಡಿಸಲಾಗಿತ್ತು. ಮತ್ತು ಮಹಿಳೆಯರು ಅಪಾಯಕ್ಕೆ ಒಳಗಾಗಿದ್ದರು. ಇಲ್ಲಿಂದ ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗಿತ್ತು. ಅಹ್ಮದ್ ಷಾ, ಮೊಹಮ್ಮದ್ (ಘೋರಿ), ಘಜ್ನಿ ಮಹಮ್ಮೊದ್ ಅವರೆಲ್ಲರೂ ಇಲ್ಲಿಂದ ಮಹಿಳೆಯರನ್ನು ಕರೆದೊಯ್ದು ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದ್ದರು. ಅದೊಂದು ದೊಡ್ಡ ಅವಮಾನದ ಯುಗ'' ಎಂದು ಗೋಪಾಲ್ ತಿಳಿಸಿದ್ದಾರೆ.

''ಮಹಿಳೆಯರು ಮತ್ತು ಹುಡುಗಿಯರನ್ನು ರಕ್ಷಿಸಲು, ಅವರ ಮೇಲೆ ನಮ್ಮ ಸಮಾಜ ಹಲವಾರು ನಿರ್ಬಂಧಗಳನ್ನು ವಿಧಿಸಿತು. ಇದರ ಪರಿಣಾಮವಾಗಿ, ಅವರು ಶಾಲೆಗಳಿಗೆ, ಗುರುಕುಲಗಳಿಗೆ ಹೋಗುವುದನ್ನು ನಿಲ್ಲಿಸಿದರು. ಅವಿದ್ಯಾವಂತರಾದರು" ಎಂದ ಅವರು, ''ಆಕ್ರಮಣಕಾರರಿಂದ ರಕ್ಷಿಸಲು ಜನರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗುತ್ತಿದ್ದರಿಂದ ಬಾಲ್ಯ ವಿವಾಹದ ಅಭ್ಯಾಸವು ಪ್ರಾರಂಭವಾಯಿತು'' ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.

"ನಮ್ಮ ದೇಶದಲ್ಲಿ ಸತಿ ಪದ್ಧತಿ ಇರಲಿಲ್ಲ. ಆದರೆ, ಜೌಹರ್ (ಸ್ವಯಂ ದಹನ) ನಡೆಯಲಾರಂಭಿಸಿತು, ಮಹಿಳೆಯರು ಸತಿಯಾಗಲು ಪ್ರಾರಂಭಿಸಿದರು. ವಿಧವೆಯರ ಮರುವಿವಾಹದ ಮೇಲೆ ನಿರ್ಬಂಧಗಳನ್ನು ಹೇರಲಾಯಿತು. ಯುದ್ಧಗಳಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ಕೊಲ್ಲಲ್ಪಟ್ಟರು. ಇಸ್ಲಾಮಿಕ್ ಆಕ್ರಮಣದ ಮೊದಲು, ಮಹಿಳೆಯರು "ಶಾಸ್ತ್ರ" (ವಿದ್ವಾಂಸ ಚರ್ಚೆಗಳು) ನಲ್ಲಿ ಭಾಗವಹಿಸುತ್ತಿದ್ದರು ಮತ್ತು ವೇದಗಳಿಗೆ ಪದ್ಯಗಳನ್ನು ಸಹ ನೀಡುತ್ತಿದ್ದರು'' ಎಂದು ಗೋಪಾಲ್ ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಬದಲಾಗಿದೆ ಎಂದ ಆರ್‌ಎಸ್‌ಎಸ್ ನಾಯಕ, ಇಂದು ಬೋರ್ಡ್ ಪರೀಕ್ಷೆಗಳಲ್ಲಿ ಹುಡುಗಿಯರು ಹುಡುಗರನ್ನು ಮೀರಿಸುತ್ತಾರೆ ಮತ್ತು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದಾಗ್ಯೂ, ಅವರು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗದಂತೆ ಮಹಿಳೆಯರಿಗೆ ಎಚ್ಚರಿಕೆ ನೀಡಿದರು. ತಮ್ಮ ಮಕ್ಕಳಿಗೆ ಭಾರತೀಯ ಮೌಲ್ಯಗಳನ್ನು ಕಲಿಸುವಂತೆ ಅವರು ಸಲಹೆ ನೀಡಿದರು.

"ನಮ್ಮ ದೇಶದ ಮಹಿಳೆಯರು ಪಾಶ್ಚಿಮಾತ್ಯ ಪ್ರಭಾವದ ವಿರುದ್ಧ ಜಾಗರೂಕರಾಗಿರಬೇಕು. ತಂತ್ರಜ್ಞಾನವನ್ನು ಬಳಸಿ, ವಿಮಾನಗಳನ್ನು ಹಾರಿಸಿ, ಇಸ್ರೋದಲ್ಲಿ ಕೆಲಸ ಮಾಡಿ, ವಿಜ್ಞಾನಿ, ವೈದ್ಯ ಅಥವಾ ಇಂಜಿನಿಯರ್ ಆಗಿ, ನಿಮಗೆ ಇಷ್ಟವಾದದ್ದನ್ನು ಮಾಡಿ. ಆದರೆ ಮಹಿಳೆಯಾಗಿ ಉಳಿಯಿರಿ" ಎಂದು ಗೋಪಾಲ್ ಅವರು ಕಿವಿಮಾತು ಹೇಳಿದರು. "ಮಹಿಳೆ ತನ್ನ ಕುಟುಂಬದ ಕೇಂದ್ರಬಿಂದು, ಅದನ್ನು ನೆನಪಿಡಿ. ಮಹಿಳೆಯು ತಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶ್ರಮಿಸಬೇಕು ಎಂದು ವಿವರಿಸಿದ್ದಾರೆ.

ಅಡುಗೆಮನೆಯನ್ನು ಸ್ವತಃ ನಿರ್ವಹಿಸುತ್ತಿದ್ದ ಇಂದಿರಾ ಗಾಂಧಿ- ಗೋಪಾಲ್: "ನೆಹರು ಅವರು (ಇಂದಿರಾ ಗಾಂಧಿಯವರ ತಂದೆ ಜವಾಹರಲಾಲ್ ನೆಹರು) ಪ್ರಧಾನಿಯಾಗಿದ್ದಾಗ ಇಂದಿರಾ ಅವರು (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಅವರ ಅಡುಗೆಮನೆಯನ್ನು ಸ್ವತಃ ನಿರ್ವಹಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ?" ಎಂದು ಪ್ರಶ್ನಿಸಿದ ಅವರು, "ನಮ್ಮ ದೇಶದಲ್ಲಿ, ಮಹಿಳೆಯರು ಗೌರವಾನ್ವಿತ ಸ್ಥಾನಗಳಲ್ಲಿದ್ದಾರೆ. ನಾವು ನಮ್ಮ ಹಿಂದಿನದನ್ನು ನೋಡಬೇಕು, ವರ್ತಮಾನವನ್ನು ನೋಡಬೇಕು, ಒಳ್ಳೆಯದನ್ನು ಉಳಿಸಿಕೊಳ್ಳಬೇಕು, ಸರಿಯಲ್ಲದ್ದನ್ನು ಸರಿಪಡಿಸಬೇಕು" ಎಂದು ಗೋಪಾಲ್ ಸಂದೇಶ ನೀಡಿದರು. (ಪಿಟಿಐ)

ಇದನ್ನೂ ಓದಿ: Building collapse: 3 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವು.. 12 ಮಂದಿ ರಕ್ಷಣೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.