ETV Bharat / bharat

ತಮಿಳುನಾಡು ಸರ್ಕಾರದ ಹೊಸ ಯೋಜನೆ: ಪ್ರತಿಮನೆಯೊಡತಿಗೆ ₹ 1000 ಸಹಾಯಧನ

author img

By ETV Bharat Karnataka Team

Published : Sep 14, 2023, 11:01 PM IST

ತಮಿಳುನಾಡು ಸರ್ಕಾರ ಪ್ರತಿ ಮನೆಯೊಡತಿಗೆ ತಲಾ ₹1000 ರೂ. ನೀಡುವ ಯೋಜನೆಯನ್ನು ನಾಳೆ (ಸೆ. 15 ರಂದು) ಜಾರಿಗೆ ತರಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್

ಚೆನ್ನೈ (ತಮಿಳುನಾಡು): ರಾಜ್ಯದ ಕಾಂಗ್ರೆಸ್​ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಂತೆಯೇ ತಮಿಳುನಾಡು ಸರ್ಕಾರ ಇದೀಗ ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ಪ್ರತಿ ತಿಂಗಳು ತಲಾ 1000 ರೂ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ಆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬೃಹತ್ ಯೋಜನೆಗೆ ನಾಳೆ ( ಸೆ.15 ರಿಂದ) ಚಾಲನೆ ನೀಡಲಿದೆ.

ಈ ಬಗ್ಗೆ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಮಹಿಳೆಯರ ಜೀವನದ ಗುಣಮಟ್ಟ ಹೆಚ್ಚಿಸಲು ಆರಂಭಿಸಿರುವ ಈ ಯೋಜನೆಯ “ಮಗಲಿರ್‌ ಉರಿಮೈ ತೊಗೈ” ಯೋಜನೆಯಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದನ್ನು ನಗದೀಕರಿಸಿಕೊಳ್ಳಲು ಅವರಿಗೆ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅರ್ಹ (ಫಲಾನುಭವಿಗಳಿಗೆ) ಮಹಿಳೆಯರಿಗೆ ಸೆಪ್ಟೆಂಬರ್ 15 ರಿಂದ ಅವರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಜಮಾ ಮಾಡುವಂತೆ ನಾವು ವ್ಯವಸ್ಥೆ ಮಾಡಿದ್ದೇವೆ. ಈ ಯೋಜನೆಗೆ ಒಟ್ಟು 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 1,06,50,000 ಮಂದಿ ಪ್ರಯೋಜನಕ್ಕಾಗಿ ಅಂತಿಮ ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ದಿವಂಗತ ಸಿ. ಎನ್ ಅಣ್ಣಾದೊರೈ ಅವರ ಜನ್ಮದಿನದಂದು ಪ್ರಾರಂಭಿಸಲಿರುವ ಯೋಜನೆಯನ್ನು ವರ್ಚುಯಲ್‌ ಮೂಲಕ ಪರಿಶೀಲಿಸಿದ ಮುಖ್ಯಮಂತ್ರಿ, ಅದರ ಅನುಷ್ಠಾನದ ಮೇಲ್ವಿಚಾರಣೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ವಹಿಸಲು ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ಅವರಿಗೆ ಸೂಚಿಸಿದರು. ಎಟಿಎಂ ಕಾರ್ಡ್‌ಗಳನ್ನು ಆರಂಭದಲ್ಲಿ ನಿರ್ದಿಷ್ಟ ಸಂಖ್ಯೆಗಳಿಗೆ ನೀಡಲಾಗುವುದು. ನಂತರದಲ್ಲಿ ಎಲ್ಲರಿಗೂ ನೀಡಬೇಕಾಗುತ್ತದೆ. ಆದರೆ ಯೋಜನೆಗೆ ಆಯ್ಕೆಯಾದ ಎಲ್ಲರಿಗೂ ಎಟಿಎಂ ಕಾರ್ಡ್‌ಗಳಿಗಾಗಿ ಕಾಯುವ ಬದಲು ತಕ್ಷಣ ನಗದು ಒದಗಿಸುವ ಯೋಜನೆಯನ್ನು ಕೂಡ ಆರಂಭಿಸಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದರು.

ತಮಿಳುನಾಡು ಸರ್ಕಾರ 2023-24ರ ಬಜೆಟ್‌ನಲ್ಲಿ ಈ ಯೋಜನೆಗೆ 7 ಸಾವಿರ ಕೋಟಿ ರೂ. ನಿಗದಿಪಡಿಸಿದೆ ಎಂದು ಹೇಳಿತ್ತು. ಆದರೂ ಈ ಯೋಜನೆಗೆ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ವಾರ್ಷಿಕ 12,000 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಫಲಾನುಭವಿಗಳಿಗೆ ಸೆಪ್ಟೆಂಬರ್ 15 ರಂದು ಎಸ್‌ಎಂಎಸ್ ಕಳುಹಿಸಲಾಗುವುದು. ಯೋಜನೆಯಲ್ಲಿ ಸಂಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿವರಗಳನ್ನು ಎಸ್‌ಎಂಎಸ್‌ ಹೊಂದಿರುತ್ತದೆ ಎಂಬುದು ತಿಳಿದುಬಂದಿದೆ.

ಕೆಲವು ಜಿಲ್ಲೆಗಳ ಜನರಿಗೆ ಆಶ್ಚರ್ಯಕರವಾಗಿ ಇಂದು ಅವರ ಬ್ಯಾಂಕ್ ಖಾತೆಗಳಿಗೆ ಒಂದು ಸಾವಿರ ರೂ. ಬಳಕೆದಾರರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲು ಕೆಲವರಿಗೆ ರೂ.1 ಮಾತ್ರ ಕಳುಹಿಸಲಾಗಿದೆ. ಆದರೆ ಸರ್ಕಾರದಿಂದ ಅಧಿಕೃತ ಸಂದೇಶದೊಂದಿಗೆ ಥೇಣಿ ಜಿಲ್ಲೆಯ ಅನೇಕ ಜನರ ಬ್ಯಾಂಕ್ ಖಾತೆಗೆ ಒಂದು ಸಾವಿರ ರೂ. ಜಮಾ ಮಾಡಲಾಗಿದೆ. ನಾಳೆ ಹಣ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಗೃಹಿಣಿಯರು ಇಂದು ಹಣ ಸಿಕ್ಕಿದ್ದರಿಂದ ಸಂತಸಗೊಂಡಿದ್ದಾರೆ.

ಇದನ್ನೂ ಓದಿ: 'ಹಸಿವು ಶಿಕ್ಷಣಕ್ಕೆ ತೊಡಕಾಗಬಾರದು': ಸರ್ಕಾರಿ ಶಾಲೆಗಳಲ್ಲಿಉಪಹಾರ ಯೋಜನೆಗೆ ಸಿಎಂ ಸ್ಟಾಲಿನ್​ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.