ETV Bharat / bharat

ರೋಹಿಣಿ ಕೋರ್ಟ್​ ಶೂಟೌಟ್​: ತಿಹಾರ್​ ಜೈಲಿನಲ್ಲಿ ಟಿಲ್ಲು ಗ್ಯಾಂಗ್​ ಸದಸ್ಯನ ಹತ್ಯೆ

author img

By

Published : May 2, 2023, 11:31 AM IST

ರೋಹಿಣಿ ಕೋರ್ಟ್​ ಶೂಟೌಟ್​ ಪ್ರಕರಣದ ಆರೋಪಿ ಟಿಲ್ಲು ಗ್ಯಾಂಗ್​ನ ತಾಜ್‌ಪುರಿಯ ಎಂಬಾತನನ್ನು ತಿಹಾರ್​ ಜೈಲಿನಲ್ಲಿ ಹತ್ಯೆ ಮಾಡಲಾಗಿದೆ.

rohini-court-shootout-accused
ರೋಹಿಣಿ ಕೋರ್ಟ್​ ಶೂಟೌಟ್

ನವದೆಹಲಿ: ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ನಡೆದ ಶೂಟೌಟ್‌ ಪ್ರಕರಣದ ಆರೋಪಿ, ದರೋಡೆಕೋರ ಟಿಲ್ಲು ಗ್ಯಾಂಗ್​ನ ತಾಜ್‌ಪುರಿಯನನ್ನು ತಿಹಾರ್ ಜೈಲಿನಲ್ಲಿ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಗ್ಯಾಂಗ್​ನ ಸದಸ್ಯರು ಇಂದು ಬೆಳಗ್ಗೆ ಹತ್ಯೆ ಮಾಡಿದ್ದಾರೆ.

ಬೆಳಿಗ್ಗೆ 7 ಗಂಟೆ ಸುಮಾರಿಗೆ ತಿಹಾರ್ ಜೈಲಿನಲ್ಲಿ ನಡೆದ ಕಾದಾಟದಲ್ಲಿ ತಾಜ್​ಪುರಿಯನನ್ನು ಕೊಲೆ ಮಾಡಲಾಗಿದೆ. ಇನ್ನೊಬ್ಬ ರೌಡಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.

ಜೈಲು ನಂಬರ್ 8ರಲ್ಲಿದ್ದ ಯೋಗೇಶ್ ತುಂಡಾ, ದೀಪಕ್​ ಆಲಿಯಾಸ್​ ಟೀಟರ್​ ಎಂಬಿಬ್ಬರು ಖೈದಿಗಳು 9ನೇ ಕೊಠಡಿಯಲ್ಲಿದ್ದ ಟಿಲ್ಲು ತಾಜ್​ಪುರಿಯನನ್ನು ಕೊಲೆ ಮಾಡಿದ್ದಾರೆ. ಕಬ್ಬಿಣದ ಗ್ರಿಲ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಟಿಲ್ಲುನನ್ನು ಡಿಡಿಯು ಆಸ್ಪತ್ರೆಗೆ ಕರೆತರಲಾಯಿತು.

ವೈದ್ಯಕೀಯ ತಪಾಸಣೆ ಬಳಿಕ ಟಿಲ್ಲು ಸಾವನ್ನಪ್ಪಿದ್ದನ್ನು ವೈದ್ಯರು ದೃಢಪಡಿಸಿದರು. ಇನ್ನೊಬ್ಬ ಕೈದಿ ರೋಹಿತ್​ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಡಿಸಿಪಿ ಅಕ್ಷತ್ ಕೌಶಲ್ ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಏನಿದು ರೋಹಿಣಿ ಶೂಟೌಟ್​?: ದೆಹಲಿಯಲ್ಲಿರುವ ರೋಹಿಣಿ ನ್ಯಾಯಾಲಯದೊಳಗೆ 2021 ರಲ್ಲಿ ಗ್ಯಾಂಗ್​ಸ್ಟರ್​ಗಳ ಮಧ್ಯೆ ಗುಂಡಿನ ಕಾಳಗ ನಡೆದಿತ್ತು. ಕೋರ್ಟ್​ನೊಳಗೆ ನಡೆದ ಗುಂಡಿನ ದಾಳಿಯಲ್ಲಿ ಕುಖ್ಯಾತ ರೌಡಿ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿತ್ತು. ಟಿಲ್ಲು ಗ್ಯಾಂಗ್​ ಸದಸ್ಯರು ಈ ದಾಳಿ ನಡೆಸಿದ್ದರು. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದ.

ರೌಡಿಶೀಟರ್​ ಆಗಿದ್ದ ಜಿತೇಂದ್ರ ಗೋಗಿಯನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆಗಾಗಿ ರೋಹಿಣಿ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಕೀಲರ ವೇಷದಲ್ಲಿ ಬಂದ ಇಬ್ಬರು ಟಿಲ್ಲು ಗ್ಯಾಂಗ್​ ಸದಸ್ಯರು ದಾಳಿ ನಡೆಸಿದ್ದರು. ಘಟನೆಯಲ್ಲಿ ಜಿತೇಂದ್ರ ಗೋಗಿ, ಮತ್ತೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ದಾಳಿಕೋರರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಜಿತೇಂದ್ರ ಗೋಗಿ ಸೇರಿದಂತೆ 4 ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದರು.

ಹತ್ಯೆಯಾದ ಜಿತೇಂದ್ರ ಗೋಗಿ ದೆಹಲಿಯ ಭೂಗತ ಪಾತಕಿಯಾಗಿದ್ದು, ಈತನ ವಿರುದ್ಧ ಎಂಸಿಒಸಿಎ ಕಾಯ್ದೆಯಡಿ 16 ಸುಲಿಗೆ, ದರೋಡೆ, ಕಾರುಕಳ್ಳತನ, ಕೊಲೆ ಮತ್ತು ಕೊಲೆ ಯತ್ನದ 19 ಪ್ರಕರಣಗಳನ್ನು ಎದುರಿಸುತ್ತಿದ್ದ. ಶಾಲೆ ಬಿಟ್ಟ ನಂತರ ಗೋಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಚುನಾವಣಾ ಸಿಬ್ಬಂದಿಯಿದ್ದ ಬಸ್​ ಪಲ್ಟಿ: 15 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.