ETV Bharat / bharat

ಫೈಬರ್ ನೆಟ್ ಪ್ರಕರಣ: ಬಹಿರಂಗ ಹೇಳಿಕೆ ನೀಡದಂತೆ ಚಂದ್ರಬಾಬು ನಾಯ್ಡು, ಎಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

author img

By ETV Bharat Karnataka Team

Published : Dec 12, 2023, 8:42 PM IST

ಸುಪ್ರೀಂಕೋರ್ಟ್ ಫೈಬರ್ ನೆಟ್ ಪ್ರಕರಣ ಕುರಿತು ಸಾರ್ವಜನಿಕ ಹೇಳಿಕೆ ನೀಡುವುದನ್ನು ತಪ್ಪಿಸಿ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

Etv Bharatrefrain-from-making-public-statements-sc-to-naidu-and-ap-govt-in-fibernet-case
ಫೈಬರ್ ನೆಟ್ ಪ್ರಕರಣ: ಬಹಿರಂಗ ಹೇಳಿಕೆ ನೀಡಿದಂತೆ ಚಂದ್ರಬಾಬು ನಾಯ್ಡುಗೆ ಸುಪ್ರೀಂ ಸೂಚನೆ

ನವದೆಹಲಿ: ಫೈಬರ್ ನೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ. ಫೈಬರ್ ನೆಟ್ ಪ್ರಕರಣ ಸಂಬಂಧ ಚಂದ್ರಬಾಬು ನಾಯ್ಡು ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.

ಆಂಧ್ರಪ್ರದೇಶ ಸರ್ಕಾರದ ಪರ ಹಿರಿಯ ವಕೀಲ ರಂಜಿತ್ ಕುಮಾರ್ ಅವರು ನ್ಯಾಯಪೀಠದ ಮುಂದೆ ವಾದ ಮಂಡಿಸಿ, ಸ್ಕಿಲ್​ ಡೆವಲಪ್​ಮೆಂಟ್​ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ, ಚಂದ್ರಬಾಬು ನಾಯ್ಡು ಅವರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ವಾದ ಆಲಿಸಿದ ನ್ಯಾಯಪೀಠ , ಈ ಪ್ರಕರಣದ ಸಂಬಂಧ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದಂತೆ ತಮ್ಮ ಕಕ್ಷಿದಾರರಿಗೆ ತಿಳಿಸುವಂತೆ ಚಂದ್ರಬಾಬು ನಾಯ್ಡು ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಅವರಿಗೆ ಸೂಚನೆ ನೀಡಿತು.

ಬಳಿಕ ನಾಯ್ಡು ಪರ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, ಆಂದ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೆಹಲಿ ಮತ್ತು ಹೈದರಾಬಾದ್​ನಲ್ಲಿ ಈ ಪ್ರಕರಣ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಎರಡು ವಾದವನ್ನು ಆಲಿಸಿದ ನ್ಯಾಯಪೀಠ ಫೈಬರ್ ನೆಟ್ ಪ್ರಕರಣದ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತು.

ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​ನಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸಿಕ್ಕಿತ್ತು ಜಾಮೀನು: ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಅನಾರೋಗ್ಯದಿಂದಾಗಿ ಜೈಲಿನಿಂದ ಹೊರಬಂದು ಚಿಕಿತ್ಸೆ ಪಡೆಯುತ್ತಿದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್​ ನ.20ರಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಮಲ್ಲಿಕಾರ್ಜುನ್ ರಾವ್ ಅವರು, ಬಾಬು ಅವರ ಮನವಿ ಪುರಸ್ಕರಿಸಿದ್ದರು. ಜಾಮೀನು ಸಿಕ್ಕಿದ್ದರಿಂದ ಅವರು ಮತ್ತೆ ಜೈಲಿಗೆ ಹೋಗುವುದು ತಪ್ಪಿತ್ತು.

ಪ್ರಕರಣದ ವಿಚಾರಣೆ ಕುರಿತಂತೆ ಅವರು ಎಸಿಬಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಇದೇ ವೇಳೆ ಕೋರ್ಟ್​ ಹೇಳಿತ್ತು. ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​ನಲ್ಲಿ ಆರೋಪಿಯಾಗಿರುವ ಚಂದ್ರಬಾಬು ಅವರನ್ನು ಸೆಪ್ಟೆಂಬರ್​ 9ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು.

ಇದನ್ನೂ ಓದಿ: ಕೌಶಲಾಭಿವೃದ್ಧಿ ಹಗರಣ: ಚಂದ್ರಬಾಬುಗೆ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಆಂಧ್ರ ಸರ್ಕಾರದ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.