ETV Bharat / bharat

ರಾಜಸ್ಥಾನ ಕಾಂಗ್ರೆಸ್​ ಕ್ರಿಕೆಟ್ ತಂಡದಂತಿದೆ; ಪರಸ್ಪರ ರನ್ ಔಟ್​ನಲ್ಲೇ 5 ವರ್ಷ ಕಳೆದ್ರು: ಮೋದಿ

author img

By PTI

Published : Nov 19, 2023, 4:24 PM IST

Updated : Nov 19, 2023, 4:37 PM IST

PM Modi on Rajasthan Congress: ಕ್ರಿಕೆಟ್​ ಪಂದ್ಯದಲ್ಲಿ ಬ್ಯಾಟರ್​ಗಳು ತಮ್ಮ ತಂಡಕ್ಕಾಗಿ ರನ್​ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ರಾಜಸ್ಥಾನ ಕಾಂಗ್ರೆಸ್​ನಲ್ಲಿ ಒಬ್ಬರು ಮತ್ತೊಬ್ಬರಿಗೆ ರನ್​ ಔಟ್​ ಮಾಡುವುದರಲ್ಲಿ ತೊಡಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

PM Modi
Etv Bharat

ಜೈಪುರ (ರಾಜಸ್ಥಾನ): ದೇಶದಲ್ಲಿ ಕ್ರಿಕೆಟ್​ ವಿಶ್ವಕಪ್​ ಜ್ವರ ಜೋರಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಜಸ್ಥಾನ ಕಾಂಗ್ರೆಸ್​ ಘಟಕವು ಕ್ರಿಕೆಟ್ ತಂಡದಂತಿದ್ದು, ಅವರ ಬ್ಯಾಟರ್​​ಗಳು ಐದು ವರ್ಷಗಳ ಕಾಲ ಪರಸ್ಪರ ರನ್​ ಔಟ್​ ಮಾಡಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುರು ಜಿಲ್ಲೆಯ ತಾರಾನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಂದ್ರ ರಾಥೋಡ್ ಪರವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮುಂಬರುವ ರಾಜಸ್ಥಾನ ಚುನಾವಣೆಯಲ್ಲಿ ರಾಜ್ಯದ ವೇಗದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಮತ ನೀಡುವಂತೆ ಜನರಿಗೆ ಕರೆ ನೀಡಿದರು.

ಇದೇ ವೇಳೆ, ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟರ್​​ ಬಂದು ತನ್ನ ತಂಡಕ್ಕಾಗಿ ರನ್​ ಗಳಿಸುತ್ತಾನೆ. ಆದರೆ, ಕಾಂಗ್ರೆಸ್‌ನೊಳಗೆ ತುಂಬಾ ಆಂತರಿಕ ಕಚ್ಚಾಟವಿದೆ. ಕಾಂಗ್ರೆಸ್​ ನಾಯಕರು ರನ್​ ಗಳಿಸುವ ಬದಲು ಐದು ವರ್ಷಗಳ ಕಾಲ ಪರಸ್ಪರ ರನ್​ ಔಟ್ ಮಾಡುವುದರಲ್ಲೇ ಪ್ರಯತ್ನಿಸಿದರು ಎನ್ನುವ ಮೂಲಕ ಪಿಎಂ ಮೋದಿ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಅಧಿಕಾರ ಕಿತ್ತಾಟವನ್ನು ಉಲ್ಲೇಖಿಸಿದರು.

  • VIDEO | "Five years of Congress government in Rajasthan were spent in running out each other. Those who are left are getting hit wickets by giving wrong statements on women and other issues, and the rest are taking bribes and doing match-fixing," says PM Modi at a public rally in… pic.twitter.com/clenkXp9wf

    — Press Trust of India (@PTI_News) November 19, 2023 " class="align-text-top noRightClick twitterSection" data=" ">

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಎದುರಿಸಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಮೋದಿ ಈ ರೀತಿ ಹೇಳಿಕೆ ನೀಡಿದ್ದು, ಗಮನಾರ್ಹವಾಗಿದೆ. ಅಲ್ಲದೇ, ಕಾಂಗ್ರೆಸ್ ಮತ್ತು ಅಭಿವೃದ್ಧಿ ಎಂಬುದು ಪರಸ್ಪರ ಶತ್ರುಗಳು, ಇವು ಶತ್ರುಗಳಾಗಿ ಉಳಿಯುತ್ತವೆ ಎಂದು ಟೀಕಿಸಿದರು.

ಮುಂದುವರೆದು ಮಾತನಾಡಿದ ಅವರು, ಒಳ್ಳೆಯ ಉದ್ದೇಶಗಳು ಮತ್ತು ಕಾಂಗ್ರೆಸ್ ನಡುವಿನ ಸಂಬಂಧವು ಬೆಳಕು ಮತ್ತು ಕತ್ತಲೆಯ ನಡುವಿನ ಸಂಬಂಧದಂತಿದೆ. ಕುಡಿಯುವ ನೀರಿಗಾಗಿ ಹಣವನ್ನು ಕೊಳ್ಳೆ ಹೊಡೆಯುವ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದರು. ಈ ಮೂಲಕ ರಾಜಸ್ಥಾನದಲ್ಲಿ ಕೇಳಿ ಬಂದಿರುವ ಜಲ ಜೀವನ್ ಮಿಷನ್ ಹಗರಣವನ್ನು ಪ್ರಧಾನಿ ಪ್ರಸ್ತಾಪಿಸಿದರು.

ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಅದು ಎಲ್ಲ ಭ್ರಷ್ಟರನ್ನು ಹೊರ ಹಾಕುತ್ತದೆ. ರಾಜ್ಯವು ತ್ವರಿತ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ದಾಖಲೆಗಳು ಮತ್ತು ಹೊಸ ಸಾಧನೆಗಳನ್ನು ಮಾಡುತ್ತಿದೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಭಾರತ ಅದ್ಭುತಗಳನ್ನು ಮಾಡುತ್ತಿದೆ. 2047ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಮೋದಿ ಹೇಳಿದರು.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಿದೆ. ಸದ್ಯ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್​ ಅಧಿಕಾರದಲ್ಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ: ಕಾಂಗ್ರೆಸ್​ ನಾಯಕರಿಂದ ಗೌರವ ನಮನ- ವಿಡಿಯೋ

Last Updated : Nov 19, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.