ETV Bharat / bharat

ಕಾಶ್ಮೀರಿ ಪಂಡಿತರ ದುಃಸ್ಥಿತಿ ಬಗ್ಗೆ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

author img

By

Published : Feb 4, 2023, 4:23 PM IST

ಕಾಶ್ಮೀರಿ ಪಂಡಿತರು ಮತ್ತು ಇತರರನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿರುವ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. ಇದು ಕಣಿವೆಯಲ್ಲಿ ಭಯ ಮತ್ತು ಕತ್ತಲೆಯ ವಾತಾವರಣವನ್ನು ಸೃಷ್ಟಿಸಿದೆ ಎಂದು ಕಿಡಿಕಾರಿದ್ದಾರೆ.

Rahul Gandhi
ರಾಹುಲ್ ಗಾಂಧಿ

ನವದೆಹಲಿ: ಭದ್ರತೆಯ ಭರವಸೆಯಿಲ್ಲದ ಕಾರಣಕ್ಕೆ ಕಾಶ್ಮೀರ ಕಣಿವೆಗೆ ಮರಳಲು ಇಷ್ಟಪಡದ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಸಂಕಷ್ಟದ ಬಗ್ಗೆ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು. ಕೇಂದ್ರಾಡಳಿತ ಆಡಳಿತವು ಕಷ್ಟದಲ್ಲಿರುವವರ ಬಗ್ಗೆ ಗಮನಹರಿಸದೇ ಇರುವುದ ಸರಿಯಾದ ಕ್ರಮವಲ್ಲ ಎಂದು ಅವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದರು.

ಇತ್ತೀಚೆಗೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಮತ್ತು ಜಮ್ಮು- ಕಾಶ್ಮೀರ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವ ವಿಷಯದ ಬಗ್ಗೆ ಗಾಂಧಿ ಅವರು ಧ್ವನಿಯತ್ತಿದ್ದಾರೆ. ಕಣಿವೆ ಪ್ರದೇಶದಲ್ಲಿ ಭಯ ಮತ್ತು ಕತ್ತಲೆಯ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದರು. ಇಡೀ ಭಾರತವನ್ನು ಪ್ರೀತಿ ಮತ್ತು ಏಕತೆಯ ಆಧಾರದ ಮೇಲೆ ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯಾತ್ರೆ ನಡೆಸಲಾಗಿದೆ. ಜಮ್ಮು ಲೆಗ್‌ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ತಾವು ಭೇಟಿ ಮಾಡಿದ ಬಳಿಕ ಇಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್​ ಗಾಂಧಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಸೌಲಭ್ಯ ನೀಡಿ: "ಸರ್ಕಾರಿ ಅಧಿಕಾರಿಗಳು ತಮ್ಮನ್ನು ಕಾಶ್ಮೀರ ಕಣಿವೆಯಲ್ಲಿ ಕೆಲಸಕ್ಕೆ ಹಿಂತಿರುಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಶ್ಮೀರಿ ಪಂಡಿತರು ಹೇಳಿದರು. ಈ ವೇಳೆ, ಅವರ ಸುರಕ್ಷತೆ ಮತ್ತು ಭದ್ರತೆಯ ಯಾವುದೇ ಖಾತರಿಯಿಲ್ಲದೇ ಅವರನ್ನು ಕಣಿವೆಗೆ ಹಿಂತಿರುಗುವಂತೆ ಒತ್ತಾಯಿಸುವುದು ಸರಿಯಲ್ಲ ಎಂದರು. ಪರಿಸ್ಥಿತಿ ಸುಧಾರಿಸುವವರೆಗೆ, ಸರ್ಕಾರವು ಈ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಭದ್ರತೆ, ಇತರ ಆಡಳಿತ ಹಾಗೂ ಸಾರ್ವಜನಿಕ ಸೌಲಭ್ಯಗಳು ಒದಗಿಸಿಕೊಡಬೇಕು ಎಂದು ಕಾಂಗ್ರೆಸ್​ನ ಮಾಜಿ ಮುಖ್ಯಸ್ಥರು ಹಿಂದಿಯಲ್ಲಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

"ಕಾಶ್ಮೀರಿ ಪಂಡಿತರ ಸುರಕ್ಷತೆ ಹಾಗೂ ಅವರ ಕುಟುಂಬದ ಕಾಳಜಿವಹಿಸಬೇಕು. ಅವರು ಸರ್ಕಾರದಿಂದ ಸಹಾನುಭೂತಿ ಹಾಗೂ ಪ್ರೀತಿಯನ್ನು ನಿರೀಕ್ಷಿಸುವ ಸಮಯದಲ್ಲೇ, ಲೆಫ್ಟಿನೆಂಟ್ ಗವರ್ನರ್ ಅವರಿಗೆ ''ಭಿಕ್ಷುಕರು'' ಎಂಬ ಪದಗಳನ್ನು ಬಳಸಿರುವುದು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ಪ್ರಧಾನಿ ನೀವು ಇಲ್ಲಿನ ಆಡಳಿತ ಮಾಡದಿರಬಹುದು. ಆದರೆ, ಈ ಸಂವೇದನಾರಹಿತ ಶೈಲಿಯ ಕಾರ್ಯಚಟುವಟಿಕೆ ಅರಿತುಕೊಳ್ಳಿ ಎಂದು ರಾಹುಲ್ ಪ್ರಧಾನಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಧಾನ ಮಂತ್ರಿಯ ಪ್ಯಾಕೇಜ್: "ನಾನು ಕಾಶ್ಮೀರಿ ಪಂಡಿತ್ ಸಹೋದರ, ಸಹೋದರಿಯರ ಬೇಡಿಕೆಗಳನ್ನು ನಿಮಗೆ ತಿಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿತ್ತಿದ್ದೇನೆ. ನಿಮಗೆ ಈ ಮಾಹಿತಿ ದೊರೆತ ತಕ್ಷಣ ನೀವು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಗುರುವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತ್ ನಿಯೋಗವು ಸಾಂಬಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿತ್ತು. ಭಯೋತ್ಪಾದಕರ "ಉದ್ದೇಶಿತ ಹತ್ಯೆಗಳು" ಮತ್ತು ಪ್ರಧಾನ ಮಂತ್ರಿಯ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿಗಳ ಪ್ರತಿಭಟನೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಉದ್ದೇಶಿತ ಹತ್ಯೆಯ ಪ್ರಕರಣ: 2008ರಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿಗಳ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಆಯ್ಕೆಯಾಗಿರುವ ಸುಮಾರು 4,000 ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ಯಾಕೇಜ್​ ಎರಡು ಪ್ರಮುಖ ಅಂಶಗಳನ್ನು ಹೊಂದಿದೆ. ಸಮುದಾಯದ ಯುವಕರಿಗೆ 6,000 ಉದ್ಯೋಗಗಳು ಮತ್ತು ನೇಮಕಗೊಂಡ ನೌಕರರಿಗೆ ವಸತಿ ಸೌಲಭ್ಯ ಒದಗಿಸುವುದು. ಈ ಉದ್ಯೋಗಿಗಳಲ್ಲಿ ಒಬ್ಬರಾದ ರಾಹುಲ್ ಭಟ್ ಅವರನ್ನು ಕಳೆದ ವರ್ಷ ಮೇ 12 ರಂದು ಬುದ್ಗಾಮ್ ಜಿಲ್ಲೆಯ ಅವರ ಕಚೇರಿಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ನಂತರ ಅನೇಕ ಉದ್ಯೋಗಿಗಳು ಜಮ್ಮುವಿಗೆ ಓಡಿ ಹೋದರು. ಇದನ್ನು ಉದ್ದೇಶಿತ ಹತ್ಯೆಯ ಪ್ರಕರಣ ಎಂದು ವಿವರಿಸಲಾಗಿದೆ.

ಇದನ್ನೂ ಓದಿ: ಬಿಜೆಡಿ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕೇಸು ದಾಖಲಿಸಲು ಹೈಕೋರ್ಟ್‌ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.