ETV Bharat / bharat

Pak Woman in India : ಪಬ್​​ಜಿ ಆಡುತ್ತ ಬೆಳೆದ ಸಲುಗೆ, ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ.. ಬಂಧನಕ್ಕಾಗಿ ಪೊಲೀಸರಿಂದ ಹುಡುಕಾಟ

author img

By

Published : Jul 3, 2023, 6:38 PM IST

ಸುಮಾರು ಒಂದೂವರೆ ತಿಂಗಳಿನಿಂದ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪರಾರಿಯಾಗಿರುವ ಆಕೆಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

pakistani-woman
ಪಬ್​​ಜಿ ಸಹಾಯದಿಂದ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ

ನವದೆಹಲಿ/ಗ್ರೇಟರ್ ನೋಯ್ಡಾ: ಆನ್​ಲೈನ್​ ಪಬ್​​ಜಿ​ ಗೇಮಿಂಗ್​ ವೇದಿಕೆಯಿಂದ ಪಾಕಿಸ್ತಾನಿ ಮಹಿಳೆ ಭಾರತದ ಯುವಕನ ಪರಿಚಯ ಮಾಡಿಕೊಂಡು, ಇಲ್ಲಿಗೆ ಬಂದು ವಾಸಿಸಿ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪ್ರಸ್ತುತ ಆಕೆ ಮತ್ತು ಆಕೆಯ ಭಾರತ ಸ್ನೇಹಿತ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗ್ರೇಟರ್ ನೋಯ್ಡಾದ ರಬೂಪುರದ ಯುವಕನೊಂದಿಗೆ ಪಾಕಿಸ್ತಾನಿ ಮಹಿಳೆ ವಾಸಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ರಬೂಪುರ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಿದ್ದಾರೆ. ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಗ್ರೇಟರ್ ನೋಯ್ಡಾಗೆ ಬಂದಿದ್ದಳು. ರಬುಪುರ ನಿವಾಸಿ ಸಚಿನ್ ಜೊತೆ ಪತ್ನಿಯಾಗಿ ಇಲ್ಲಿ ವಾಸಿಸುತ್ತಿದ್ದಳು. ಆಕೆಯ ಬಗ್ಗೆ ಅನುಮಾನ ಬಂದು ಭದ್ರತಾ ಸಂಸ್ಥೆಗಳು ವಿಚಾರಣೆ ನಡೆಸಿದಾಗ ಪಾಕಿಸ್ತಾನ ಮೂಲ ಎಂದು ತಿಳಿದುಬಂದಿದೆ.

ರಬುಪುರದಲ್ಲಿ ಪಾಕಿಸ್ತಾನಿ ಮಹಿಳೆ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸ್ ತಂಡವನ್ನು ರಚಿಸಿ, ಗುಪ್ತಚರ, ಎಲೆಕ್ಟ್ರಾನಿಕ್ ಕಣ್ಗಾವಲು, ಬೀಟ್ ಪೊಲೀಸಿಂಗ್ ಸಹಾಯದಿಂದ ಪಾಕಿಸ್ತಾನಿ ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ಆಕೆಯ ಹೆಸರು ಸೀಮಾ ಗುಲಾಮ್ ಹೈದರ್ ಎಂಬ ಪ್ರಾಥಮಿಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ವಿವರವಾದ ಮಾಹಿತಿ ನೀಡಲಾಗುವುದು ಎಂದು ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸಚಿನ್ ಎಂಬ ಯುವಕ ಪಾಕಿಸ್ತಾನಿ ಮಹಿಳೆಯೊಂದಿಗೆ ಬಾಡಿಗೆಗೆ ಕೊಠಡಿ ತೆಗೆದುಕೊಂಡು ವಾಸಿಸುತ್ತಿದ್ದ. ಇಬ್ಬರೂ ಪಬ್​ಜಿ (PUBG) ಮೊಬೈಲ್ ಗೇಮ್​ನಿಂದ ಪರಿಚಯ ಆಗಿದ್ದರು. ನಂತರ ಆನ್​ಲೈನ್​ನಲ್ಲಿ ಸ್ನೇಹ ನಿಕಟವಾಗಿ ಬೆಳೆದ ನಂತರ ಆಕೆಯನ್ನು ಸಚಿನ್​ ನೇಪಾಳದಲ್ಲಿ ಮೊದಲು ಭೇಟಿಯಾಗಿದ್ದಾನೆ. ಇದಾದ ಬಳಿಕ ವಿಮಾನದ ಮೂಲಕ ನೇಪಾಳಕ್ಕೆ ಬಂದ ಮಹಿಳೆ ನಂತರ ಬಸ್ಸಿನಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಉತ್ತರ ಪ್ರದೇಶಕ್ಕೆ ಬಂದಿದ್ದಾಳೆ.

ಮೇ 13 ರಂದು ಮಹಿಳೆ ಸಚಿನ್ ಮನೆಗೆ ಬಂದಳು. ಇಬ್ಬರು ಬಾಡಿಗೆಗೆ ಕೊಠಡಿ ತೆಗೆದುಕೊಂಡು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಮಾಹಿತಿ ಪ್ರಕಾರ, ಪಾಕಿಸ್ತಾನಿ ಮಹಿಳೆ ಸೀಮಾ ಸಚಿನ್ ಅವರನ್ನು ಮದುವೆಯಾಗಲು ಯೋಜಿಸಿದ್ದರು. ಇದರೊಂದಿಗೆ, ಅವರು ಭಾರತದ ಪೌರತ್ವವನ್ನು ತೆಗೆದುಕೊಳ್ಳಲು ಬಯಸಿದ್ದರು. ಆದರೆ ಇದಕ್ಕೂ ಮೊದಲು ಪೊಲೀಸರಿಗೆ ವಿಷಯ ತಿಳಿದಿದೆ. ಈಗ ಮಹಿಳೆ ತನ್ನ ಪ್ರಿಯಕರ ಮತ್ತು ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ.

ಈದ್ ಹಬ್ಬ ಆಚರಿಸಿದ ಮಹಿಳೆ: ಸೀಮಾ ಹಿಂದೂ ಸಂಪ್ರದಾಯದಂತೆ ಸೀರೆ ಉಡುತ್ತಿದ್ದಳು. ಇದರಿಂದ ಅಕ್ಕಪಕ್ಕದ ಯಾರಿಗೂ ಆಕೆಯ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ಜೂನ್ 29 ರಂದು ತನ್ನ ಮಕ್ಕಳು ಮತ್ತು ಸಚಿನ್ ಜೊತೆ ಈದ್ ಹಬ್ಬವನ್ನು ರಹಸ್ಯವಾಗಿ ಆಚರಿಸಿದ್ದಳಂತೆ.

ಬೇಹುಗಾರಿಕೆಯ ಅನುಮಾನ: ಮಾಹಿತಿ ಪ್ರಕಾರ, ಪಾಕಿಸ್ತಾನಿ ಮಹಿಳೆ ಸೀಮಾ ಅವರ ಪೂರ್ಣ ಹೆಸರು ಸೀಮಾ ಗುಲಾಮ್ ಹೈದರ್ ಮತ್ತು ಅವರು ಪಾಕಿಸ್ತಾನದ ಕರಾಚಿ ನಿವಾಸಿ. ಮಹಿಳೆಯ ಪತಿ ದುಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಗೆ ಫರ್ಹಾನ್ ಅಲಿ ಎಂಬ ಮಗ ಮತ್ತು ಫರ್ವಾ, ಫರಿಹಾ ಮತ್ತು ಫರಾಹ್ ಎಂಬ ಹೆಣ್ಣು ಮಕ್ಕಳಿದ್ದಾರೆ. ಮಹಿಳೆ ಅವರೊಂದಿಗೆ ಗ್ರೇಟರ್ ನೋಯ್ಡಾಗೆ ಬಂದಿದ್ದರು. ಮಹಿಳೆಯ ಸಹೋದರ ಪಾಕಿಸ್ತಾನಿ ಸೇನೆಯಲ್ಲಿದ್ದು, ಇದರಿಂದ ಮಹಿಳೆ ಭಾರತದ ಭದ್ರತೆ ವಿಷಯದಲ್ಲಿ ಗೂಢಚಾರಿಕೆ ಮಾಡಲು ಸಂಚು ರೂಪಿಸಿದ್ದಳು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: TMC ಕಾರ್ಯಕರ್ತನ ಹತ್ಯೆ, ಕಾಂಗ್ರೆಸ್‌ ಮುಖಂಡನಿಗೆ ಗುಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.