ETV Bharat / bharat

ಅವಿಶ್ವಾಸ ನಿಲುವಳಿ: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ, ಮಣಿಪುರ ವಿಚಾರವಾಗಿ ವಿಪಕ್ಷಗಳ 'ಸಂಘರ್ಷ'

author img

By

Published : Aug 10, 2023, 6:52 AM IST

ಕಾಂಗ್ರೆಸ್​ ಮಂಡಿಸಿರುವ ಅವಿಶ್ವಾಸ ನಿಲುವಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ನೀಡಲಿದ್ದಾರೆ. ಮೂರು ದಿನಗಳಿಂದ ನಡೆಯುತ್ತಿರುವ ಚರ್ಚೆಯಲ್ಲಿ ಆಡಳಿತ - ವಿಪಕ್ಷಗಳು ವಾಗ್ಯುದ್ಧ ನಡೆಸಿವೆ. ಇಂದು ಅವಿಶ್ವಾಸಕ್ಕೆ ತೆರೆ ಬೀಳಲಿದೆ.

ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ
ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಉತ್ತರ

ನವದೆಹಲಿ: ಪರಸ್ಪರ ಆರೋಪ - ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿರುವ ವಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ನೀಡಲಿದ್ದಾರೆ. ಅಲ್ಲದೇ, ಇಂದೇ ಧ್ವನಿಮತ ಎಣಿಕೆ ನಡೆಯಲಿದೆ. ಪೂರ್ಣ ಬಹುಮತ ಇರುವ ಕಾರಣ ಸರ್ಕಾರ ಸೇಫ್​ ಆಗಲಿದ್ದು, ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದು ಖಚಿತ.

ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ 2 ದಿನಗಳ ಚರ್ಚೆಯಲ್ಲಿ ಗೃಹ ಸಚಿವ ಅಮಿತ್​ ಶಾ, ಕಾಂಗ್ರೆಸ್ ನಾಯಕ​ ರಾಹುಲ್​ ಗಾಂಧಿ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರ ಮಧ್ಯೆ ತುರುಸಿನ ವಾಗ್ಯುದ್ಧ ನಡೆದಿತ್ತು. ಇಂದಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಅವರೇ ಅಖಾಡಕ್ಕಿಳಿಯಲಿದ್ದು, ಅವರ ಉತ್ತರಕ್ಕಾಗಿ ವಿಪಕ್ಷಗಳು ಸೇರಿದಂತೆ ದೇಶವೇ ನಿರೀಕ್ಷೆಯಲ್ಲಿದೆ.

ಪ್ರಧಾನಿ ಮೋದಿ ಅವರು ಆಗಸ್ಟ್ 10 ರಂದು ಅವಿಶ್ವಾಸದ ವಿರುದ್ಧ ಸಂಸತ್ತಿಗೆ ಉತ್ತರ ನೀಡಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಮಾಹಿತಿ ನೀಡಿದರು. ನಾಳೆ ಪ್ರಧಾನಿ ಸದನದಲ್ಲಿ ಹಾಜರಾಗಿ ಅವಿಶ್ವಾಸ ನಿರ್ಣಯದ ವಿರುದ್ಧ ಮಾತನಾಡಲಿದ್ದಾರೆ ಎಂದು ಕೇಂದ್ರ ಸಚಿವರು ಲೋಕಸಭೆಗೆ ಬುಧವಾರ ತಿಳಿಸಿದರು.

ಸರ್ಕಾರ ಸೇಫ್​, ಅವಿಶ್ವಾಸಕ್ಕೆ ಸೋಲು ಖಚಿತ: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರದ ಬಳಿಕ ಅವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕಲಾಗುತ್ತದೆ. ಧ್ವನಿಮತದ ಮೂಲಕ ನಡೆಯುವ ಪ್ರಕ್ರಿಯೆಯಲ್ಲಿ ಸರ್ಕಾರ ಉಳಿದುಕೊಳ್ಳಲಿದೆ. ಮೋದಿ ಸರ್ಕಾರಕ್ಕೆ ಪೂರ್ಣ ಬಹುಮತ ಇರುವ ಕಾರಣ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಲಿದೆ. ಮಣಿಪುರ ವಿಚಾರವಾಗಿ ಪ್ರಧಾನಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಈ ನಿರ್ಣಯ ಮಂಡಿಸಲಾಗಿದೆ ಎಂದು ವಿಪಕ್ಷಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಬಿಸಿಯೇರಿದ ಮಳೆಗಾಲ ಅಧಿವೇಶನ: ಮಳೆಗಾಲದ ಅಧಿವೇಶನವು ಅವಿಶ್ವಾಸ ನಿಲುವಳಿ ಮಂಡನೆಯಿಂದ ಸಂಸತ್ತಿನಲ್ಲಿ ತಾಪ ಹೆಚ್ಚಿಸಿದೆ. ಆಡಳಿತ ವಿಪಕ್ಷಗಳ ಮಧ್ಯೆ ಆರೋಪ - ಪ್ರತ್ಯಾರೋಪ, ಟೀಕೆಗಳಿಗೆ ವೇದಿಕೆಯಾಗಿದೆ. ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಮೋದಿಯೇ ಮೊದಲ ಟಾರ್ಗೆಟ್​ ಆಗಿದ್ದು, ವಿಪಕ್ಷಗಳು ಇನ್ನಿಲ್ಲದಂತೆ ಮೋದಿ ಅವರನ್ನು ಟೀಕೆಗೆ ಗುರಿಪಡಿಸಿವೆ. ಇತ್ತ ಆಡಳಿತ ಪಕ್ಷ ಕೂಡ ಪ್ರಧಾನಿ ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿವೆ.

ಮಣಿಪುರವೇ ನಿಲುವಳಿಯ ಮೂಲಾಧಾರ : ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆಗೆ ಮಣಿಪುರ ವಿಷಯವೊಂದೇ ಕಾರಣ ಎಂಬುದು ಸ್ಪಷ್ಟವಾಗಿದೆ. ಜನಾಂಗೀಯ ಸಂಘರ್ಷಕ್ಕೀಡಾದ ರಾಜ್ಯದಲ್ಲಿನ ಸಾವು - ನೋವುಗಳೇ ಚರ್ಚಾ ವಿಷಯವಾಗಿದೆ. 2ನೇ ದಿನ ಚರ್ಚೆಯಲ್ಲಿ ಕೇರಳದ ವಯನಾಡ್​ ಸಂಸದ ರಾಹುಲ್​ ಗಾಂಧಿ, ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಸರ್ಕಾರ ತಿರುಗೇಟು ನೀಡಿದೆ.

ಪ್ರಧಾನಿ ಮೋದಿ ಅವರನ್ನು ರಾವಣನಿಗೆ ಹೋಲಿಸಿ ಟೀಕಿಸಿದ ರಾಹುಲ್​ ಗಾಂಧಿ, ಮಣಿಪುರವನ್ನು ಪ್ರಧಾನಿ ನಿರ್ಲಕ್ಷಿಸಿದ್ದಾರೆ. ಆ ರಾಜ್ಯ ಹಿಂದುಸ್ಥಾನದಲ್ಲಿ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಅಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. ಇದಕ್ಕೆ ಗೃಹ ಸಚಿವ ಅಮಿತ್​ ಶಾ ಅವರು ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸರ್ವಪ್ರಯತ್ನ ಮಾಡಲಾಗಿದೆ. ಆದರೆ, ಎರಡು ಸಮುದಾಯಗಳ ನಡುವಿನ ದ್ವೇಷ ತಣ್ಣಗಾಗಿಲ್ಲ. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ತಹಬದಿಗೆ ಬರುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಪಕ್ಷಗಳನ್ನು ಜರಿದಿದ್ದರು.

ಸಂಸತ್ತಿನ ಬಲಾಬಲ : ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 331 ಸಂಸದರನ್ನು ಹೊಂದಿದೆ. ಇದರಲ್ಲಿ ಬಿಜೆಪಿ 303 ಎಂಪಿಗಳಿದ್ದಾರೆ. ವಿರೋಧ ಪಕ್ಷದ I.N.D.I.A ಬಣ 144, ಇತರ 70 ಸಂಸದರಿದ್ದಾರೆ. 2018 ರ ಬಳಿಕ ಪ್ರಧಾನಿ ಮೋದಿ ಅವರ ಸರ್ಕಾರದ ವಿರುದ್ಧ 2 ನೇ ಬಾರಿಗೆ ಅವಿಶ್ವಾಸ ನಿಲುವಳಿ ಮಂಡನೆ ಮಾಡಲಾಗಿದೆ.

ಇದನ್ನೂ ಓದಿ: Amit Shah: ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ ಮಾಡಿದರೂ ವಿಫಲ: ರಾಹುಲ್​ಗೆ ಕುಟುಕಿದ ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.