ETV Bharat / bharat

ಹಿಮಾಚಲಪ್ರದೇಶದಲ್ಲಿ ಕಲ್ಲು ತೂರಾಟದ ಜಾತ್ರೆ: ರಕ್ತ ಸುರಿದಲ್ಲಿ ಆಟ ಸ್ಥಗಿತ, ದೇವಿಗೆ ರಕ್ತತರ್ಪಣ!

author img

By ETV Bharat Karnataka Team

Published : Nov 13, 2023, 10:25 PM IST

Updated : Nov 13, 2023, 10:32 PM IST

ಹಿಮಾಚಲಪ್ರದೇಶದಲ್ಲಿ ಕಲ್ಲು ತೂರಾಟವೆಂಬ ವಿಶೇಷ ಜಾತ್ರೆ ನಡೆಯುತ್ತದೆ. ಇಲ್ಲಿ ಎರಡು ಗುಂಪುಗಳ ಮಧ್ಯೆ ಕಲ್ಲುಗಳ ಬಡಿದಾಟ ನಡೆಯುತ್ತದೆ. ಗಾಯಗೊಂಡ ಬಳಿಕ ಆಟ ನಿಲ್ಲುತ್ತದೆ.

ಕಲ್ಲು ತೂರಾಟದ ಜಾತ್ರೆ
ಕಲ್ಲು ತೂರಾಟದ ಜಾತ್ರೆ

ಶಿಮ್ಲಾ (ಹಿಮಾಚಲ ಪ್ರದೇಶ) : ಕೆಲವೊಂದು ಸಂಪ್ರದಾಯ, ಆಚರಣೆಗಳು ದಿಗಿಲು ಹುಟ್ಟಿಸುತ್ತವೆ. ದೇವರ ಆರಾಧನೆಗಾಗಿ ಜನರು ಬಡಿದಾಡಿಕೊಳ್ಳುತ್ತಾರೆ. ಅಂಥದ್ದೊಂದು ಆಚರಣೆ ಹಿಮಾಚಲಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಇದೆ. ದೀಪಾವಳಿಯ ಹಬ್ಬದ ಮರುದಿನ ಎರಡು ಗುಂಪುಗಳು ಕಲ್ಲುಗಳಿಂದ ಹೊಡೆದಾಡುತ್ತಾರೆ. ಯಾರಿಗಾದರೂ ಕಲ್ಲು ತಾಗಿ ರಕ್ತ ಬಂದಲ್ಲಿ ಆಟ ನಿಲ್ಲಿಸುತ್ತಾರೆ. ಅದೇ ರಕ್ತವನ್ನು ಕಾಳಿದೇವಿಗೆ ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.

ಹೌದು ವಿಚಿತ್ರ ಎನ್ನಿಸಿದರೂ ಇದು ಸತ್ಯ. ಶಿಮ್ಲಾದಿಂದ 30 ಕಿಮೀ ದೂರ ಇರುವ ಹಾಲೋಗ್ ಎಂಬಲ್ಲಿ ಈ ಆಚರಣೆ ಇದೆ. ಜನರು ಪರಸ್ಪರ ಕಲ್ಲುಗಳನ್ನು ತೂರಾಡುತ್ತಾರೆ. ಇದಕ್ಕೆ ಕಲ್ಲುಗಳ ಜಾತ್ರೆ ಎಂದು ಹೆಸರು. ನವೆಂಬರ್ 13 ರಂದು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟದ ಜಾತ್ರೆ ನಡೆದಿದೆ. 40 ನಿಮಿಷಗಳ ಕಾಲ ಆಟ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ರಕ್ತ ಸುರಿದ ಬಳಿಕ ನಿಲ್ಲಿಸಲಾಗಿದೆ.

ರಕ್ತಸ್ರಾವವಾದರೆ ಆಟ ಸ್ಥಗಿತ: ಈ ಕಲ್ಲು ತೂರಾಟದ ಜಾತ್ರೆಯ ಬಗ್ಗೆ ಲೇಖಕರೊಬ್ಬರು ವಿವರಿಸುವಂತೆ, ಕಲ್ಲು ತೂರಾಟದ ಆಟದಲ್ಲಿ ಯಾವುದೇ ಗುಂಪಿನಲ್ಲಿ ಒಬ್ಬರು ಗಾಯಗೊಂಡು ರಕ್ತಸ್ರಾವ ಉಂಟಾದರೆ, ಆಟವನ್ನು ನಿಲ್ಲಿಸಲಾಗುತ್ತದೆ. ಮೂವರು ಮಹಿಳೆಯರು ಆಟ ನಿಲ್ಲಿಸುವಂತೆ ಬಟ್ಟೆಯನ್ನು ಬೀಸುತ್ತಾ ಸೂಚನೆ ನೀಡುತ್ತಾರೆ. ಈ ಸಂಪ್ರದಾಯಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ. ಆದರೆ, ರಾಜರ ಕಾಲದಲ್ಲಿ ಇದು ಆರಂಭವಾಗಿದೆ.

ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಮುಂಚೆ ನರಬಲಿ ಪದ್ಧತಿ ಇತ್ತು. ರಾಣಿಯೊಬ್ಬರು ಇದನ್ನು ನಿಷೇಧಿಸಿದರು. ಬದಲಿಗೆ ಎಮ್ಮೆಯ ಕಿವಿ ಕತ್ತರಿಸಿ ಭದ್ರಕಾಳಿ ದೇವಿಗೆ ಸಾಂಕೇತಿಕವಾಗಿ ಬಲಿ ನೀಡಲಾಯಿತು. ಇದು ಫಲಿಸದಿದ್ದಾಗ, ಈ ಕಲ್ಲು ತೂರಾಟದ ಜಾತ್ರೆ ಆರಂಭವಾಯಿತು ಎಂದು ಹೇಳಲಾಗಿದೆ. ಅಂದಿನಿಂದ ಇದು ಮುಂದಿವರಿದುಕೊಂಡು ಬಂದಿದೆ. ಕಲ್ಲು ತೂರಾಟದಲ್ಲಿ ಗಾಯಗೊಂಡ ವ್ಯಕ್ತಿಯ ರಕ್ತವನ್ನು ಭದ್ರಕಾಳಿಗೆ ಅರ್ಪಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕಲ್ಲು ತೂರಾಟದಲ್ಲಿ ರಾಜಮನೆತನಕ್ಕೆ ಮಾತ್ರ ಅವಕಾಶ: ಈ ವಿಶೇಷ ಸಂಪ್ರದಾಯದ ಆಚರಣೆಯಲ್ಲಿ ರಾಜಮನೆತನದ ಕುಟುಂಬಗಳು ಮಾತ್ರ ಪಾಲ್ಗೊಳ್ಳುತ್ತಾರೆ. ಬೇರೆ ಯಾರಿಗೂ ಇದರಲ್ಲಿ ಅವಕಾಶ ಇರುವುದಿಲ್ಲ. ರಾಜಮನೆತನದ ಪ್ರತಿನಿಧಿಗಳು ನರಸಿಂಹ, ಮಾತಾ ಸತಿ ಮತ್ತು ಭದ್ರಕಾಳಿ ಪೂಜಿಸಿದ ನಂತರ ಈ ಆಟವನ್ನು ಪ್ರಾರಂಭಿಸುತ್ತಾರೆ. ರಾಜಮನೆತನದ ಜನರು ಮೊದಲ ಕಲ್ಲನ್ನು ಡೋಲಿನ ಸದ್ದಿನೊಂದಿಗೆ ಎಸೆಯುವ ಮೂಲಕ ಕಲ್ಲು ಜಾತ್ರೆ ಆರಂಭವಾಗುತ್ತದೆ. ನಿಗದಿತ ಸ್ಥಳದಲ್ಲಿ ಕುಳಿತು ಜನರು ಕಲ್ಲು ಎಸೆಯುವ ಆಟವನ್ನು ವೀಕ್ಷಿಸುತ್ತಾರೆ. ಎರಡು ಗುಂಪುಗಳ ಪೈಕಿ ಒಂದು ರಾಜಮನೆತನದವರಿದ್ದರೆ, ಇನ್ನೊಂದು ಬದಿಯಲ್ಲಿ ಜಾಮೊಗಿ ಗುಂಪಿನವರು ಇರುತ್ತಾರೆ.

ಬಳ್ಳಾರಿಯಲ್ಲೂ ಇದೇ ವಿಚಿತ್ರ ಆಚರಣೆ: ಆಂಧ್ರಪ್ರದೇಶ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಬಡಿಗೆಗಳಿಂದ ಹೊಡೆದಾಡುವ ಹಬ್ಬದ ಆಚರಣೆ ಇದೆ. ಆಂಧ್ರ ಪ್ರದೇಶಕ್ಕೆ ಸೇರುವ ದೇವರುಗಟ್ಟು ಗ್ರಾಮದಲ್ಲಿ ಈ ಆಚಚರಣೆ ಇದ್ದು, ಮಾಳ ಮಲ್ಲೇಶ್ವರ ಜಾತ್ರೆ ಎಂದು ಇದನ್ನು ಕರೆಯಲಾಗುತ್ತದೆ. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಇಲ್ಲಿ ದೇವರ ವಿಗ್ರಹದ ಪೂಜೆಗಾಗಿ ಜನರು ಬಡಿಗೆಗಳಿಂದ ಬಡಿದಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ದೇವರ ಮೂರ್ತಿಗಾಗಿ ಬಡಿಗೆಯಿಂದ ಬಡಿದಾಟ.. ಗಡಿ ಗ್ರಾಮದಲ್ಲೊಂದು ವಿಚಿತ್ರ ಆಚರಣೆ

Last Updated : Nov 13, 2023, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.