ETV Bharat / bharat

ಕಾಶ್ಮೀರಿ ಪಂಡಿತ್​ ನೌಕರರ ವರ್ಗಾವಣೆಗೆ ಗುಪ್ಕರ್ ಒಕ್ಕೂಟ, ಬಿಜೆಪಿ ವಿರೋಧ

author img

By

Published : May 15, 2022, 5:53 PM IST

ಸರ್ಕಾರಿ ನೌಕರ ರಾಹುಲ್​​ ಭಟ್ ಅವರನ್ನು ಉಗ್ರರು ಕೊಲೆ ಮಾಡಿರುವುದು, ಕಾಶ್ಮೀರಿ ಪಂಡಿತರ ಆತಂಕಕ್ಕೆ ಕಾರಣವಾಗಿದೆ. ನಮಗೆ ಇಲ್ಲಿ ಸುರಕ್ಷತೆ ಇಲ್ಲ ಎಂದು ನೌಕರರು ಕಳವಳ ವ್ಯಕ್ತಪಡಿಸಿದ್ದಾರೆ.

oppose transfer of kashmiri-pandits-employees
ಕಾಶ್ಮೀರಿ ಪಂಡಿತ್​ ನೌಕರರ ವರ್ಗಾವಣೆ

ಶ್ರೀನಗರ (ಜಮ್ಮು-ಕಾಶ್ಮೀರ ): ಜಮ್ಮು-ಕಾಶ್ಮೀರದಲ್ಲಿ ಮತ್ತೆ ಪಂಡಿತರ ಸುರಕ್ಷತೆ ಬಗ್ಗೆ ಚರ್ಚೆ ಶುರುವಾಗಿದೆ. ಬುದ್ಗಾಮ್‌ನಲ್ಲಿ ಕಾಶ್ಮೀರಿ ಪಂಡಿತ್ ನೌಕರರೊಬ್ಬರು ಹತ್ಯೆಯಾದ ಬೆನ್ನಲ್ಲೇ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ) ಮತ್ತು ಬಿಜೆಪಿ ಮುಖಂಡರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ರಾಜಭವನಕ್ಕೆ ತೆರಳಿದ ಪಿಎಜಿಡಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ನೇತೃತ್ವದ ನಿಯೋಗವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿತು. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ವಕ್ತಾರ ಯೂಸುಫ್ ತರಿಗಾಮಿ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮುಜಾಫರ್ ಶಾ ಮತ್ತು ಸಂಸದ ಹಸನೈನ್ ಮಸೂದಿ ಈ ನಿಯೋಗದಲ್ಲಿ ಇದ್ದರು.

ಗವರ್ನರ್ ಭೇಟಿ ನಂತರ ಯೂಸುಫ್ ತರಿಗಾಮಿ ಮಾತನಾಡಿ, ಕಾಶ್ಮೀರಿ ಪಂಡಿತ್ ನೌಕರರು ಕಣಿವೆಯನ್ನು ಬಿಟ್ಟು ಹೋಗಬಾರದು. ಇದು ಕಾಶ್ಮೀರಿ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರ ನೆಲೆಯಾಗಿದೆ ಎಂದರು. ಅಲ್ಲದೇ, ಈ ರಾಷ್ಟ್ರವು ನಮ್ಮೆಲ್ಲರದ್ದಾಗಿದ್ದು, ಯಾರೂ ಕೂಡ ಮನೆ ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು.

ಕಾಶ್ಮೀರಿ ಪಂಡಿತ್​ ನೌಕರರ ವರ್ಗಾವಣೆ

ಕಾಶ್ಮೀರಿ ಮುಸ್ಲಿಮರು ಎಲ್ಲಿಗೆ ಹೋಗಬೇಕು?: ಕಾಶ್ಮೀರಿ ಪಂಡಿತ್ ನೌಕರ ರಾಹುಲ್​​ ಭಟ್ ಹತ್ಯೆಯ ಕಾರಣಕ್ಕೆ ಪಂಡಿತರು ಕಾಶ್ಮೀರವನ್ನು ತೊರೆಯಲು ಬಯಸಿದರೆ, ಕೊಲೆಯಾದ ಕಾಶ್ಮೀರಿ ಮುಸ್ಲಿಮರ ಕುಟುಂಬಗಳು ಏನು ಮಾಡಬೇಕು.?. ರಾಹುಲ್​ನಂತೆಯೇ ಪೊಲೀಸ್​ ಸಿಬ್ಬಂದಿ ರಿಯಾಜ್ ಸಹ ಹತ್ಯೆಗೀಡಾಗಿದ್ದರೆ, ರಿಯಾಜ್ ಕುಟುಂಬ ಮತ್ತು ಸಂಬಂಧಿಕರು ಎಲ್ಲಿಗೆ ಹೋಗಬೇಕು?. ಕಾಶ್ಮೀರಿ ಪಂಡಿತರು ನಿಮ್ಮ ಮನೆಯನ್ನು ಬಿಟ್ಟು ಹೋಗಬೇಕಾಗಿಲ್ಲ, ಇದು ನಿಮ್ಮ ಮನೆಯೂ ಹೌದು, ನಮ್ಮ ಮನೆಯೂ ಹೌದು.. ಪರಸ್ಪರ ರಕ್ಷಿಸಿಕೊಳ್ಳಲು ಪ್ರಯತ್ನಿಸೋಣ ಎಂದು ಯೂಸುಫ್ ತರಿಗಾಮಿ ಕರೆ ನೀಡಿದರು.

ಪಾಕಿಸ್ತಾನದ ದುಷ್ಟ ಯೋಜನೆ: ಏತನ್ಮಧ್ಯೆ, ಬಿಜೆಪಿ ನಾಯಕರ ನಿಯೋಗ ಕೂಡ ಇದೇ ವಿಷಯದ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿತು. ನಿಯೋಗದ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ರವೀಂದರ್ ರೈನಾ ಮಾತನಾಡಿ, ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರ ಹತ್ಯೆಯ ವಿಷಯದ ಬಗ್ಗೆ ಗವರ್ನರ್ ಜೊತೆಗೆ ಚರ್ಚಿಸಿದ್ದೇವೆ. ಕಾಶ್ಮೀರಕ್ಕೆ ಹಾನಿ ಮಾಡುವ ಪಾಕಿಸ್ತಾನದ ದುಷ್ಟ ಯೋಜನೆಗಳಾಗಿವೆ. ಈ ಹತ್ಯೆಗಳು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ರೈನಾ ಹೇಳಿದರು.

ವಿಶೇಷ ಯೋಜನೆಯಡಿ ಕಾಶ್ಮೀರಿ ಪಂಡಿತ್ ನೌಕರರು ಮತ್ತು ಇತರ ಉದ್ಯೋಗಿಗಳ ಸಮಸ್ಯೆಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಸುರಕ್ಷಿತ ಪ್ರದೇಶದಲ್ಲಿ ನೌಕರರನ್ನು ನಿಯೋಜಿಸಬೇಕು. ಅಲ್ಲದೇ, ನೌಕರರೊಂದಿಗೆ ಸಮನ್ವಯ ಸಾಧಿಸಲು ರಾಜಭವನದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

350ಕ್ಕೂ ಹೆಚ್ಚು ನೌಕರರ ಸಾಮೂಹಿಕ ರಾಜೀನಾಮೆ: ಉಗ್ರರು ಸರ್ಕಾರಿ ನೌಕರ ರಾಹುಲ್​​ ಭಟ್ ಅವರನ್ನು ಕೊಲೆ ಮಾಡಿರುವುದನ್ನು ಖಂಡಿಸಿ 350ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ್ ನೌಕರರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ. ನಮಗೆ ಇಲ್ಲಿ ಸುರಕ್ಷತೆ ಇಲ್ಲ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ಮುಖಂಡರು ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕಾಶ್ಮೀರ ತೊರೆಯದಂತೆ ಹಾಗೂ ವರ್ಗಾವಣೆಗೊಳ್ಳದಂತೆ ನೌಕರರಲ್ಲಿ ಮನವಿಯನ್ನೂ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.