ETV Bharat / bharat

2022-23ರಲ್ಲಿ 7.43 ಲಕ್ಷ ನರೇಗಾ 'ನಕಲಿ ಜಾಬ್ ಕಾರ್ಡ್'ಗಳು ಡಿಲೀಟ್​: ಯುಪಿಯಲ್ಲಿ ಅತಿ ಹೆಚ್ಚು

author img

By PTI

Published : Dec 10, 2023, 9:02 AM IST

Updated : Dec 10, 2023, 9:14 AM IST

MGNREGA fake job cards: 2022-23ರಲ್ಲಿ 7.43 ಲಕ್ಷ ನಕಲಿ ಜಾಬ್ ಕಾರ್ಡ್​ಗಳನ್ನು ಅಳಿಸಿ ಹಾಕಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮಾಹಿತಿ ನೀಡಿದ್ದಾರೆ.

fake job cards
ನಕಲಿ ಜಾಬ್ ಕಾರ್ಡ್

ನವದೆಹಲಿ: 2022-23ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಿ ಹಾಕಲಾಗಿದೆ. ಇದರಲ್ಲಿ 2.96 ಲಕ್ಷಕ್ಕೂ ಹೆಚ್ಚು ಕಾರ್ಡ್​ಗಳನ್ನು ಉತ್ತರ ಪ್ರದೇಶದಲ್ಲಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ನಕಲಿ ಜಾಬ್ ಕಾರ್ಡ್‌ಗಳ ದತ್ತಾಂಶವನ್ನು ಲಿಖಿತ ರೂಪದಲ್ಲಿ ಹಂಚಿಕೊಂಡಿರುವ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, 2022-23ರಲ್ಲಿ 7,43,457 ಮತ್ತು 2021-22ರಲ್ಲಿ 3,06,944 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ನಕಲಿ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಉತ್ತರ ಪ್ರದೇಶದಲ್ಲಿ 2021-23ರಲ್ಲಿ 67,937 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದ್ದು, 2022-23ರಲ್ಲಿ 2,96,464ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

2022-23ರಲ್ಲಿ 1,14,333 ಮತ್ತು 2021-22ರಲ್ಲಿ 50,817 ಜಾಬ್ ಕಾರ್ಡ್‌ಗಳನ್ನು ಅಳಿಸುವುದರೊಂದಿಗೆ ಒಡಿಶಾ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 27,859 ಮತ್ತು 2021-22ರಲ್ಲಿ 95,209 ನಕಲಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಬಿಹಾರದದಲ್ಲಿ 2021-22ರಲ್ಲಿ 80,203 ಮತ್ತು 2022-23ರಲ್ಲಿ 27,062 ಅನ್ನು ರದ್ದುಗೊಳಿಸಲಾಗಿದೆ. ಜಾರ್ಖಂಡ್‌ನಲ್ಲಿ 2022-23ರಲ್ಲಿ 70,673 ಮತ್ತು ಹಿಂದಿನ ವರ್ಷ 23,528 ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ.

ಆಂಧ್ರಪ್ರದೇಶದಲ್ಲಿ 2021-22ರಲ್ಲಿ ಅಳಿಸಲಾದ ನಕಲಿ ಜಾಬ್ ಕಾರ್ಡ್‌ಗಳ ಸಂಖ್ಯೆ 1,833 ಆಗಿದ್ದರೆ, ಕಳೆದ ಹಣಕಾಸು ವರ್ಷದಲ್ಲಿ ಇದರ ಸಂಖ್ಯೆ 46,662 ಅಂದರೆ ಬಹುಪಟ್ಟು ಹೆಚ್ಚಾಗಿದೆ. ರಾಜಸ್ಥಾನದಲ್ಲಿ 2022-23ರಲ್ಲಿ 45,646 ಮತ್ತು 2021-22ರಲ್ಲಿ 14,782 ನಕಲಿ ಜಾಬ್ ಕಾರ್ಡ್‌ಗಳನ್ನು ತೆಗೆದು ಹಾಕಲಾಗಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ಎರಡು ವರ್ಷಗಳಿಂದ ಎಂಜಿಎನ್‌ಆರ್‌ಇಜಿಎ (MGNREGA) ಪಾವತಿಗಳು ಬಾಕಿ ಉಳಿದಿರುವ ಪಶ್ಚಿಮ ಬಂಗಾಳದಲ್ಲಿ 2022-23ರಲ್ಲಿ 5,263 ಜಾಬ್ ಕಾರ್ಡ್‌ಗಳನ್ನು ನಕಲಿ ಎಂದು ಮತ್ತು 2021-22ರಲ್ಲಿ 388 ಜಾಬ್ ಕಾರ್ಡ್‌ಗಳನ್ನು ನಕಲಿ ಅಂತ ಅಳಿಸಲಾಗಿದೆ.

ಜಾಬ್ ಕಾರ್ಡ್‌ಗಳನ್ನು ಅಳಿಸುವುದು ಮತ್ತು ನವೀಕರಿಸುವುದು ನಿರಂತರ ಪ್ರಕ್ರಿಯೆ. ಕಾಯ್ದೆಯ ಸೆಕ್ಷನ್ 25ರ ಪ್ರಕಾರ, ನಿಬಂಧನೆಗಳನ್ನು ಉಲ್ಲಂಘಿಸಿದರೆ 1,000 ರೂ.ವರೆಗೆ ದಂಡ ವಿಧಿಸಬಹುದು. ಅಲ್ಲದೆ, ನಕಲಿ ಜಾಬ್ ಕಾರ್ಡ್ ವಿತರಣೆಯನ್ನು ತಡೆಯಲು ಫಲಾನುಭವಿಗಳ ಡೇಟಾಬೇಸ್​ನ ನಕಲು ಮಾಡಲು ಆಧಾರ್ ಸೀಡಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವೆ ಜ್ಯೋತಿ ಹೇಳಿದ್ದಾರೆ.

ಈ ಮಧ್ಯೆ, 2022-23ರಲ್ಲಿ 6,47,8345 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಜ್ಯೋತಿ ಲೋಕಸಭೆಗೆ ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು. 2021-22ರಲ್ಲಿ 1,20,63,967 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ. ಆದರೆ, 2020-21ರಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಈ ವೇಳೆ 1,91,05,369 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬರ ಪರಿಸ್ಥಿತಿ : ನರೇಗಾ ಮಾನವ ದಿನಗಳು 150ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ

ಉದ್ಯೋಗ ಕಾರ್ಡ್​ಗಳನ್ನು ವಿವಿಧ ಕಾರಣಗಳಿಗಾಗಿ ಅಳಿಸಲಾಗುತ್ತದೆ. ಇವುಗಳು ನಕಲಿ ಎಂದು ತಿಳಿದಾಗ/ಫಲಾನುಭವಿಯು ಪಂಚಾಯತ್ ಪ್ರದೇಶದಿಂದ ಹೊರಬಂದಾಗ/ಮರಣ ಹೊಂದಿದಾಗ ಜಾಬ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತದೆ. ಮುಂಗಾರು ಅಧಿವೇಶನದ ವೇಳೆ ಲೋಕಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ನೀಡಿದ ಉತ್ತರದಂತೆ, 2022-23ರಲ್ಲಿ 5.18 ಕೋಟಿ ಉದ್ಯೋಗಿಗಳನ್ನು ಒಳಗೊಂಡ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಇದು 2021-22ಕ್ಕೆ ಹೋಲಿಸಿದರೆ ಶೇಕಡಾ 247.06ರಷ್ಟು ಹೆಚ್ಚು.

Last Updated :Dec 10, 2023, 9:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.