ETV Bharat / bharat

ಮೃತಪಟ್ಟ ರೈತರ ದಾಖಲೆ ಇಲ್ಲದ ವಿಚಾರ: ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ

author img

By

Published : Dec 2, 2021, 1:58 PM IST

ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ದಾಖಲೆಗಳು ಇಲ್ಲ, ಹಾಗಾಗಿ, ಪರಿಹಾರ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಯ ವಿರುದ್ಧ ವಿಪಕ್ಷಗಳು ರಾಜ್ಯಸಭೆಯಲ್ಲಿಂದು ಪ್ರತಿಭಟನೆ ನಡೆಸಿವೆ.

Opposition MPs raise slogans on the issue of farmers' deaths, rising inflation in Rajya Sabha
ಮೃತಪಟ್ಟ ರೈತರ ದಾಖಲೆ ಇಲ್ಲದ ವಿಚಾರ; ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ರೈತರು ನಡೆಸಿದ ಪ್ರತಿಭಟನೆ ವೇಳೆ ಮೃತಪಟ್ಟಿದ್ದ ರೈತರ ದಾಖಲೆ ಇಲ್ಲ ಎಂದಿದ್ದ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಸಭೆಯಲ್ಲಿಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿವೆ.

12 ಗಂಟೆಗೆ ಕಲಾಪ ಪುನಾರಂಭಗೊಂಡಾಗ ಸದನದ ಬಾವಿಗಿಳಿದ ವಿಪಕ್ಷದ ಕೆಲ ಸದಸ್ಯರು ಘೋಷಣೆಗಳನ್ನು ಕೂಗಿ, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಹರಿವಂಶ್‌ ನಾರಾಯಣ ಸಿಂಗ್‌ ತಮ್ಮ ಸ್ಥಾನಗಳಿಗೆ ಹೋಗುವಂತೆ ಸದಸ್ಯರಿಗೆ ಎಷ್ಟೇ ಮನವಿ ಮಾಡಿದರೂ ಪ್ರತಿಭಟನಾ ನಿರತರು ಅಲ್ಲಿಂದ ಕದಲಲಿಲ್ಲ. ಗದ್ದಲದ ನಡುವೆಯೇ ಕೆಲಕಾಲ ಪ್ರಶ್ನೋತ್ತರ ಕಲಾಪ ಮುಂದುವರಿಯಿತು. ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪದೇ ಪದೆ ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆ ಮುಂದೂಡಲಾಯಿತು.

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಸಾವಿನ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿನ್ನೆ ಲೋಕಸಭೆಗೆ ತಿಳಿಸಿದ್ದರು. ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆಯೇ ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದ ಅವರು, ಕೃಷಿ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಹಾಗಾಗಿ, ಪರಿಹಾರದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿ ಮೃತಪಟ್ಟ ರೈತರ ದಾಖಲೆ ಇಲ್ಲ, ಪರಿಹಾರವೂ ಇಲ್ಲ: ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.