ETV Bharat / bharat

ಆನ್​​ಲೈನ್​ ಗೇಮ್ ಬ್ಯಾನ್: ನಿಯಮ ಮೀರಿ ಆಡಿದ್ರೆ ದಂಡದ ಜೊತೆ ಜೈಲು ಖಾಯಂ..!

author img

By

Published : Nov 21, 2020, 8:21 AM IST

ಆನ್​​ಲೈನ್​​ ಗೇಮಿಂಗ್ ಆ್ಯಪ್​ಗಳಲ್ಲಿ ಹಣ ಹೂಡಿ ಅದರಿಂದ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ತಮಿಳುನಾಡು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೆ ಸರ್ಕಾರದ ನಿಯಮ ಉಲ್ಲಂಘಿಸಿ ಆನ್​​ಲೈನ್ ಗೇಮಿಂಗ್​ನಲ್ಲಿ ತೊಡಗುವವರಿಗೆ ದಂಡ ಹಾಗೂ ಶಿಕ್ಷೆ ವಿಧಿಸುವ ಅವಕಾಶ ಸಹ ಇದೆ.

online-gaming-banned-for-involving-in-betting
ಆನ್​​ಲೈನ್​ ಗೇಮಿಂಗ್​​​ ನಿಷೇಧ

ಚೆನ್ನೈ: ಆನ್​​ಲೈನ್ ಗೇಮ್​​​ಗಳಿಂದ ಜನತೆ ಬೆಟ್ಟಿಂಗ್ ದಾಸರಾಗುತ್ತಿದ್ದಾರೆ ಎಂಬ ಕೂಗು ಕೇಳಿಬಂದ ಹಿನ್ನೆಲೆ ತಮಿಳುನಾಡು ಸರ್ಕಾರ ಆನ್​ಲೈನ್ ಗೇಮಿಂಗ್​​ಗೆ ಬ್ರೇಕ್ ಹಾಕಿದೆ. ಈ ಮೂಲಕ ಆನ್​ಲೈನ್ ಗೇಮ್​​​ಗಳಿಗೆ ನಿರ್ಬಂಧ ಹೇರಿದೆ.

ತಮಿಳುನಾಡಲ್ಲಿ ಆನ್​ಲೈನ್ ಗೇಮರ್​ಗಳ ಆತ್ಮಹತ್ಯಾ ಪ್ರಕರಣ ಹೆಚ್ಚಾಗಿದ್ದರಿಂದ ಮತ್ತು ಬೆಟ್ಟಿಂಗ್ ದಂಧೆ ಬಗ್ಗೆ ಸರ್ಕಾರ ಗಂಭೀರ ಚರ್ಚೆ ನಡೆಸಿತ್ತು. ಇದೀಗ ಆನ್​​ಲೈನ್ ಗೇಮ್ ನಿಷೇಧಿಸುವ ಸುಗ್ರೀವಾಜ್ಞೆ ಜಾರಿ ಮಾಡಿದೆ.

ರಾಜ್ಯ ಸರ್ಕಾರದ ಪ್ರಸ್ತಾವನೆಯ ಆಧಾರದ ಮೇಲೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಈ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಕಂಪ್ಯೂಟರ್, ಯಾವುದೇ ಸಂವಹನ ಸಾಧನ ಅಥವಾ ಸಂಪನ್ಮೂಲವನ್ನು ಬಳಸಿಕೊಂಡು ಸೈಬರ್‌ ಮೂಲಕ ಬೆಟ್ಟಿಂಗ್ ಆಡುವುದನ್ನು ನಿಷೇಧಿಸಿದೆ. ಅಲ್ಲದೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ ಎಂದು ರಾಜ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು ಸಿಎಂ ಪಳನಿ ಸ್ವಾಮಿ ಈ ಆನ್​​​​ಲೈನ್ ಗೇಮ್​ಗಳ ನಿಷೇಧ ಕುರಿತು ಸುಳಿವು ನೀಡಿದ್ದರು. ಆನ್​​ಲೈನ್ ಗೇಮ್​​ಗಳ ಕುರಿತು ದೂರುಗಳು ಹೆಚ್ಚಾಗಿದ್ದು, ಅಲ್ಲದೆ ಇದರಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಅಧಿಕವಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳುವ ಕುರಿತು ತಿಳಿಸಿದ್ದರು.

ಇನ್ನು ಕೊಯಂಬತ್ತೂರಿನಲ್ಲಿ ಮೂವರು ಆನ್​ಲೈನ್​ ಗೇಮ್​ನಿಂದ ಲಕ್ಷಾಂತರ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣದಾಸೆಗೆ ಬೀಳುವ ಜನತೆ ಅದರಲ್ಲೂ ಯುವಕರು ಆನ್​ಲೈನ್​​​ ಗೇಮಿಂಗ್​​​ನಲ್ಲಿ ಬೆಟ್ಟಿಂಗ್​​ಗಾಗಿ ಹಣ ಹೂಡಿ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಇದರಿಂದ ಮನನೊಂದು, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಈ ಹಿನ್ನೆಲೆ ಸರ್ಕಾರ ಆನ್​ಲೈನ್ ಗೇಮಿಂಗ್ ನಿಷೇಧಿಸುವ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಪ್ರಕಟಣೆ ತಿಳಿಸಿದೆ.

ಇನ್ನು ಸರ್ಕಾರದ ನಿಷೇಧಾಜ್ಞೆಯನ್ನೂ ಮೀರಿ ಗೇಮಿಂಗ್​​​ನಲ್ಲಿ ತೊಡಗಿದರೆ ಅಂತಹವರಿಗೆ 5 ಸಾವಿರ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ಮತ್ತು ಸೈಬರ್ ಸೆಂಟರ್​​ನಲ್ಲಿ ಅನುವು ಮಾಡಿಕೊಟ್ಟರೆ ಮಾಲಿಕರಿಗೆ 10 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.