ETV Bharat / bharat

2000 ರೂಪಾಯಿ ನೋಟುಗಳ ವಿನಿಮಯಕ್ಕೆ ಯಾವುದೇ ಐಡಿ ಕಾರ್ಡ್‌, ಅರ್ಜಿ ತುಂಬುವ ಅಗತ್ಯವಿಲ್ಲ: ಎಸ್​ಬಿಐ

author img

By

Published : May 21, 2023, 5:29 PM IST

2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಐಡಿ ಕಾರ್ಡ್‌ ಅಥವಾ ಯಾವುದೇ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ ಎಂದು ಎಸ್​ಬಿಐ ತಿಳಿಸಿದೆ.

2000 ರೂಪಾಯಿ ನೋಟುಗಳ ವಿನಿಮಯಕ್ಕೆ ಯಾವುದೇ ಐಡಿ ಕಾರ್ಡ್‌, ಅರ್ಜಿ ತುಂಬವ ಅಗತ್ಯವಿಲ್ಲ: ಎಸ್​ಬಿಐ
No forms, ID cards needed for exchange of Rs 2000 banknotes: SBI

ನವದೆಹಲಿ: ಇತ್ತೀಚೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಿಂಪಡೆದಿದೆ. ಸೆಪ್ಟೆಂಬರ್​ 30ರ ವರೆಗೆ ಈ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಆದರೆ, ಬ್ಯಾಂಕ್​ಗಳಲ್ಲಿ ಈ ನೋಟುಗಳ ಬದಲಾವಣೆಗೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಸಣ್ಣ - ಪುಟ್ಟ ಗೊಂದಲಗಳು ಮುಂದುವರೆದಿವೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ತನ್ನ ಗ್ರಾಹಕರಿಗಾಗಿ 2000 ರೂಪಾಯಿ ನೋಟುಗಳ ಬದಲಾವಣೆ ಕುರಿತಾಗಿ ಕೆಲ ಮಾಹಿತಿಯನ್ನು ಹಂಚಿಕೊಂಡಿದೆ.

ಎಸ್​ಬಿಐ ಗ್ರಾಹಕರು ತಮ್ಮ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಐಡಿ ಕಾರ್ಡ್‌ಗಳನ್ನು ಸಲ್ಲಿಸುವ ಅಥವಾ ಯಾವುದೇ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದಾಗ್ಯೂ, ಒಂದು ಬಾರಿಗೆ ಗರಿಷ್ಠ ಹತ್ತು ನೋಟುಗಳನ್ನು ಬದಲಾಯಿಸಲು ಅನುಮತಿಸಲಾಗುವುದು ಎಂದು ತಿಳಿಸಿದೆ. ಈ ಮಾಹಿತಿಯನ್ನು ಎಸ್‌ಬಿಐ ತನ್ನ ಎಲ್ಲ ವಲಯಗಳೊಂದಿಗೆ ಹಂಚಿಕೊಂಡಿದೆ. ಅಲ್ಲದೇ, ಗ್ರಾಹಕರ ಗುರುತಿನ ಪುರಾವೆಯ ವಿವರಗಳಿಗಾಗಿ ಮೀಸಲಾದ ಕಾಲಮ್‌ಗಳನ್ನು ಹೊಂದಿರುವ ಅನುಬಂಧ III (Annexure III)ರಲ್ಲಿ ಮನವಿ ಅರ್ಜಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿ ಮತ್ತು ಯಾವುದೇ ಅನಾನುಕೂಲತೆಯಾಗದಂತೆ ನೋಡಿಕೊಳ್ಳುವಂತೆ ಎಂದು ಎಸ್​ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: 2,000 ರುಪಾಯಿ ನೋಟು ಬಂದ್: ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?

ಶುಕ್ರವಾರ 2000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆರ್​ಬಿಐ ನಿರ್ಧರಿಸಿದೆ. ಆದರೆ, ಈ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ತಿಳಿಸಿದೆ. ಜೊತೆಗೆ ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ. ಆದರೆ, ನಾಗರಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ನೋಟುಗಳನ್ನು ಠೇವಣಿ ಮಾಡಲು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶ ಇರುತ್ತದೆ ಎಂದು ಆರ್​ಬಿಐ ತಿಳಿಸಿದೆ. ಮೇ 23ರಿಂದ ಯಾವುದೇ ಬ್ಯಾಂಕ್‌ಗಳಲ್ಲಿ 2000 ರೂ. ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಲು ಆರಂಭವಾಗಲಿದೆ.

ಈ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು 2016ರ ನವೆಂಬರ್​ನಲ್ಲಿ ಪರಿಚಯಿಸಲಾಗಿತ್ತು. ಆ ಸಮಯದಲ್ಲಿ ಚಲಾವಣೆಯಲ್ಲಿದ್ದ 500 ರೂ. ಮತ್ತು 1000 ರೂ. ನೋಟುಗಳ ಹಿಂತೆಗೆದುಕೊಂಡ ನಂತರ ಆರ್ಥಿಕತೆಯ ಅಗತ್ಯವನ್ನು ತ್ವರಿತವಾಗಿ ಪೂರೈಸಲು 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. 2018-19ರಲ್ಲಿ ಈ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಶೇ.89ರಷ್ಟು 2000 ರೂಪಾಯಿ ಮುಖಬೆಲೆಯ ನೋಟುಗಳನ್ನು 2017ರ ಮಾರ್ಚ್ ಚಲಾವಣೆಗೆ ಬಿಡಲಾಗಿತ್ತು. ಆದರೆ, ನಂತರದಲ್ಲಿ ಇವುಗಳಲ್ಲಿ ಕಡಿಮೆಯಾಗಿತ್ತು. 2018ರ ಮಾರ್ಚ್ 31ರ ವೇಳೆಗೆ ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 37.3ರಷ್ಟಿತ್ತು. ಅಂದರೆ ಇದರ ಗರಿಷ್ಠ 6.73 ಲಕ್ಷ ಕೋಟಿಗಳಾಗಿತ್ತು. 2023ರ ಮಾರ್ಚ್ 31ಕ್ಕೆ ಚಲಾವಣೆಯಲ್ಲಿರುವ ಈ ನೋಟುಗಳ ಒಟ್ಟು ಮೌಲ್ಯವು 3.62 ಲಕ್ಷ ಕೋಟಿಗೆ ಇಳಿದಿದೆ. ಅಂದರೆ, ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 10.8ರಷ್ಟು ಮಾತ್ರವಾಗಿದೆ.

ಇದನ್ನೂ ಓದಿ: Explained: 2,000 ರೂ. ಮುಖಬೆಲೆಯ ನೋಟು ಹಿಂಪಡೆದ ಆರ್​ಬಿಐ ನಿರ್ಧಾರದ ಹಿಂದಿನ ಲೆಕ್ಕಾಚಾರಗಳಿವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.