ETV Bharat / bharat

ಪ್ರಧಾನಿ ಹುದ್ದೆಗೆ ಹಿಂದಿ ಭಾಷಿಕರ ಮೆಚ್ಚಿನ ಆಯ್ಕೆ ನಿತೀಶ್ ಕುಮಾರ್​; ಬಿಹಾರ ಸಚಿವ ಶ್ರವಣ್ ಕುಮಾರ್ ಹೇಳಿಕೆ

author img

By ETV Bharat Karnataka Team

Published : Aug 27, 2023, 2:04 PM IST

ದೇಶದ ಹಿಂದಿ ಭಾಷಿಕ ರಾಜ್ಯಗಳ ಜನತೆ ನಿತೀಶ್ ಕುಮಾರ್ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ನೋಡುತ್ತಿದ್ದಾರೆ ಎಂದು ಬಿಹಾರ ಸಚಿವ ಮತ್ತು ಜೆಡಿಯು ಮುಖಂಡ ಶ್ರವಣ್ ಕುಮಾರ್ ಹೇಳಿದ್ದಾರೆ.

Hindi heartland looks at Nitish as a worthy candidate
Hindi heartland looks at Nitish as a worthy candidate

ಪಾಟ್ನಾ: ಪ್ರತಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿದೆಯೇ ಎಂಬ ಊಹಾಪೋಹಗಳ ಮಧ್ಯೆ, ಬಿಹಾರ ಸಚಿವ ಮತ್ತು ಜೆಡಿಯು ಮುಖಂಡ ಶ್ರವಣ್ ಕುಮಾರ್ ಈ ಬಗ್ಗೆ ಮಾತನಾಡಿರುವುದು ಗಮನ ಸೆಳೆದಿದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಆಕಾಂಕ್ಷೆ ಹೊಂದಿಲ್ಲ ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು ಗೆಲ್ಲಿಸುವುದೇ ಅವರ ಪ್ರಾಥಮಿಕ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ನಿತೀಶ್ ಕುಮಾರ್ ಸ್ವತಃ ಪ್ರಧಾನಿಯಾಗುವ ಆಕಾಂಕ್ಷೆ ಹೊಂದಿಲ್ಲ. 2024 ರ ಲೋಕಸಭಾ ಚುನಾವಣೆಯ ನಂತರ ಇಂಡಿಯಾ ಮೈತ್ರಿಕೂಟದ ಸರ್ಕಾರ ರಚಿಸುವುದು ಅವರ ಗುರಿಯಾಗಿದೆ ಎಂದು ಜೆಡಿಯು ನಾಯಕ ಶ್ರವಣ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಆದಾಗ್ಯೂ, ಹಿಂದಿ ಭಾಷಿಕ ರಾಜ್ಯಗಳ ಜನರು ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಅರ್ಹ ಅಭ್ಯರ್ಥಿ ಎಂದು ಭಾವಿಸಿದ್ದಾರೆ ಎಂದು ಅವರು ಹೇಳಿದರು.

ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢದ ಜನರು ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೆ ಅರ್ಹ ಅಭ್ಯರ್ಥಿ ಎಂದು ಈಗಾಗಲೇ ಚರ್ಚಿಸುತ್ತಿದ್ದಾರೆ. ನಿತೀಶ್ ಕುಮಾರ್ ಫುಲ್ಪುರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಇಂಡಿಯಾ ಬಣದ ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದ್ದು, ಅಲ್ಲಿ ಮೈತ್ರಿಕೂಟದ ನೀತಿಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗುವುದು ಎಂದು ಬಿಹಾರ ಸಚಿವ ಶ್ರವಣ್ ಕುಮಾರ್ ಹೇಳಿದರು.

ಏತನ್ಮಧ್ಯೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಶನಿವಾರ ಮಾತನಾಡಿ, ಇಂಡಿಯಾ ಬಣದ ಮೂರನೇ ಸಭೆಯಲ್ಲಿ ಸುಮಾರು 26 ರಿಂದ 27 ಪಕ್ಷಗಳು ಭಾಗವಹಿಸಲಿವೆ ಎಂದು ಹೇಳಿದರು. ಆಗಸ್ಟ್ 31 ರ ಸಂಜೆ ಮುಂಬೈನಲ್ಲಿ ಅನೌಪಚಾರಿಕ ಸಭೆ ಮತ್ತು ಸೆಪ್ಟೆಂಬರ್ 1 ರಂದು ಔಪಚಾರಿಕ ಸಭೆ ನಡೆಯಲಿದೆ. ಇಲ್ಲಿಯವರೆಗೆ, ಎರಡು ಸಭೆಗಳನ್ನು ಆಯೋಜಿಸಲಾಗಿದೆ ಮತ್ತು ಮೂರನೇ ಸಭೆಯಲ್ಲಿ ಮುಂದಿನ ಕಾರ್ಯಸೂಚಿಯನ್ನು ಚರ್ಚಿಸಲಾಗುವುದು. ನಾವು ಸಾಮಾನ್ಯ ಲೋಗೋ ಒಂದನ್ನು ತಯಾರಿಸಲು ಸಿದ್ಧತೆ ನಡೆಸಿದ್ದೇವೆ ಮತ್ತು ಅದನ್ನು ಆಗಸ್ಟ್ 31 ರಂದು ಅನಾವರಣಗೊಳಿಸುವ ಸಾಧ್ಯತೆಯಿದೆ ಎಂದು ಅಶೋಕ್ ಚವಾಣ್ ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬಣ ಗೆಲುವು ಸಾಧಿಸಿದ ನಂತರ ಪ್ರಧಾನಿ ಹುದ್ದೆಗೆ ಹೆಸರುಗಳನ್ನು ನಿರ್ಧರಿಸಲಾಗುವುದು ಎಂದು ಈ ಮುನ್ನ ಕಾಂಗ್ರೆಸ್ ಮುಖಂಡ ಪಿ.ಎಲ್. ಪುನಿಯಾ ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ಎರಡು ಡಜನ್​ಗೂ ಹೆಚ್ಚು ವಿರೋಧ ಪಕ್ಷಗಳು "ಇಂಡಿಯಾ" ಎಂಬ ಮೈತ್ರಿಕೂಟವನ್ನು ರಚಿಸಲು ಕೈಜೋಡಿಸಿವೆ. (ಎಎನ್​ಐ)

ಇದನ್ನೂ ಓದಿ : 'ಬಂಗಾಳದಲ್ಲಿರುವುದು ಪಾಕಿಸ್ತಾನ ಪರ ಸರ್ಕಾರ, ಐಎಸ್​ಐ ಏಜೆಂಟರಿಗೆ ಆಶ್ರಯ': ಬಿಜೆಪಿ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.