ETV Bharat / bharat

105 ಗಂಟೆಯಲ್ಲಿ 75 ಕಿ.ಮೀ ರಸ್ತೆ ನಿರ್ಮಿಸಿ ದಾಖಲೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗಡ್ಕರಿ ಶಹಬ್ಬಾಸ್​ಗಿರಿ

author img

By

Published : Jun 8, 2022, 4:49 PM IST

Updated : Jun 8, 2022, 5:27 PM IST

ಅತ್ಯಂತ ಕಡಿಮೆ ಅವಧಿಯಲ್ಲಿ ಗರಿಷ್ಠ ಉದ್ದದ ರಸ್ತೆ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನೆಸ್ ದಾಖಲೆ ಮಾಡಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

NHAI sets new Guinness World Record
NHAI sets new Guinness World Record

ನವದೆಹಲಿ: ಕೇವಲ 105 ಗಂಟೆಗಳ ಅವಧಿಯಲ್ಲಿ ದಾಖಲೆಯ 75 ಕಿಲೋ ಮೀಟರ್​​ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಾಧಿಕಾರದ ಸಿಬ್ಬಂದಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವದಾಖಲೆ ನಿರ್ಮಾಣಗೊಳ್ಳಲು ಸಹಾಯ ಮಾಡಿರುವ NHAI, ಎಂಜಿನಿಯರ್‌ಗಳು​​, ಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ್ದಾರೆ.


ಭಾರತ ಸ್ವತಂತ್ರವಾಗಿ 75 ವರ್ಷಗಳ ಸ್ಮರಣಾರ್ಥ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 'ಆಜಾದಿ ಕಾ ಅಮೃತ್ ಮಹೋತ್ಸವ' ಘೋಷಣೆಯ ಭಾಗವಾಗಿ ನಡೆದ ಈ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ವಿಶ್ವ ದಾಖಲೆ ಬರೆದಿದೆ ಎಂದು ಸಚಿವರು ಹೇಳಿದ್ದಾರೆ.

ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದಲೇ ಮಹಾರಾಷ್ಟ್ರದ ಅಮರಾವತಿ-ಅಕೋಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸ ನಡೆಯುತ್ತಿತ್ತು. ಕೇವಲ 110 ಗಂಟೆಗಳಲ್ಲಿ 75 ಕಿಲೋಮೀಟರ್ ರಸ್ತೆ ನಿರ್ಮಿಸಿ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆಯಲು ಅಧಿಕಾರಿಗಳು ಸರ್ವ ಪ್ರಯತ್ನ ನಡೆಸಿದ್ದರು. ಶುಕ್ರವಾರ (ಜೂನ್ 3) ಬೆಳಗ್ಗೆ 7 ಗಂಟೆಗೆ ಕಾಮಗಾರಿ ಶುರುವಾಗಿದ್ದು, ಜೂನ್ 7ರ ಸಂಜೆಯೊಳಗೆ ಕೆಲಸ ಪೂರ್ಣಗೊಳಿಸುವ ಗುರಿ ಇತ್ತು. ಅಂತಿಮವಾಗಿ 75 ಕಿಲೋ ಮೀಟರ್​​ ದೂರದ ರಸ್ತೆಯನ್ನು 105 ಗಂಟೆ 33 ನಿಮಿಷಗಳಲ್ಲಿ ಡಾಂಬರೀಕರಣ ಮಾಡಲಾಗಿದೆ.

ಇದನ್ನೂ ಓದಿ: ಕೇವಲ 110 ಗಂಟೆ.. 75 ಕಿ.ಮೀ ರಸ್ತೆ ನಿರ್ಮಾಣ: ವಿಶ್ವದಾಖಲೆಯ ಗುರಿ

ಅಮರಾವತಿ-ಅಕೋಲಾ ರಸ್ತೆ ಕಳೆದ 10 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿತ್ತು. ಈ ಹಿಂದೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಮೂರು ಕಂಪನಿಗಳಿಗೆ ವಹಿಸಲಾಗಿದೆ. ಆದರೆ, ಗುತ್ತಿಗೆದಾರರು ಕಾಮಗಾರಿ ಮುಗಿಸಲು ವಿಳಂಬಧೋರಣೆ ಅನುಸರಿಸುತ್ತಿದ್ದರು. ಇದರಿಂದಾಗಿ ಜನರು ಅಮರಾವತಿಯಿಂದ ಅಕೋಲಾಗೆ ಹೋಗಲು ದರ್ಯಾಪುರ ರಸ್ತೆಯನ್ನು ಬಳಸಬೇಕಿತ್ತು. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟದ್ದು ಎಂದೇ ಹೆಸರಾಗಿರುವ ಈ ರಸ್ತೆಯಲ್ಲಿ ಇದೀಗ ದಾಖಲೆ ನಿರ್ಮಿಸಲಾಗಿದೆ.

ಪ್ರಾಜೆಕ್ಟ್ ಮ್ಯಾನೇಜರ್, ಹೈವೇ ಇಂಜಿನಿಯರ್, ಕ್ವಾಲಿಟಿ ಇಂಜಿನಿಯರ್, ಸರ್ವೇಯರ್, ಸೇಫ್ಟಿ ಇಂಜಿನಿಯರ್ ಸೇರಿದಂತೆ ಒಟ್ಟು 800 ನೌಕರರು ದಾಖಲೆಯ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.

Last Updated : Jun 8, 2022, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.