ETV Bharat / bharat

ಬಿಜೆಪಿ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷಗಳು ಒಂದಾಗಬೇಕು: ಮೋದಿ ಭೇಟಿ ಬಳಿಕ ಪವಾರ್​ ಹೇಳಿಕೆ

author img

By

Published : Apr 6, 2022, 7:35 PM IST

ಬಿಜೆಪಿ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು. ಕೇಸರಿ ಪಕ್ಷಕ್ಕೆ ಕೌಂಟರ್​ ಕೊಡಲೆಂದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​, ಶಿವಸೇನೆ ಮತ್ತು ಎನ್​ಸಿಪಿ ಒಟ್ಟಾಗಿದ್ದೇವೆ ಎಂದು ಶರದ್​ ಪವಾರ್​ ಹೇಳಿದ್ದಾರೆ.

NCP chief Sharad Pawar
NCP chief Sharad Pawar

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಶಿವಸೇನೆಯ ಮುಖಂಡ ಸಂಜಯ್​ ರಾವುತ್​ ವಿರುದ್ಧ ಜಾರಿ ನಿರ್ದೇಶನಾಲಯವು ಕ್ರಮ ಕೈಗೊಂಡಿದೆಯೇ? ಎಂದು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಪ್ರಶ್ನಿಸಿದ್ದಾರೆ. ಸಂಸತ್ತಿನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶರದ್​ ಪವಾರ್​ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿತ್ತು.

ಪ್ರಧಾನಿ ಭೇಟಿಯಾದ ನಂತರ ಮಾತನಾಡಿದ ಎನ್​ಸಿಪಿ ವರಿಷ್ಠ ಪವಾರ್, ಶಿವಸೇನೆ ಸಂಸದ ಸಂಜಯ್​ ರಾವುತ್​ ಅವರಿಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ ವಿಷಯದ ಬಗ್ಗೆ ಪ್ರಧಾನಿ ಗಮನ ಸೆಳೆದಿದ್ದೇನೆ ಎಂದು ಹೇಳಿದರು. ರಾವುತ್​ ವಿರುದ್ಧ ಇಂತಹ ಕ್ರಮ ಕೈಗೊಳ್ಳಲು ಯಾವುದೇ ಕಾರಣವಿಲ್ಲ. ಆದರೆ, ಕೇಂದ್ರದ ಏಜೆನ್ಸಿಯೇ ಈ ಕ್ರಮ ತೆಗೆದುಕೊಂಡಿರುವ ಕಾರಣ ಇದರ ಹೊಣೆಯನ್ನೂ ಕೇಂದ್ರ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಕಿಡಿಕಾರಿದ ಅವರು, ಬಿಜೆಪಿ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಒಂದಾಗಬೇಕು. ಕೇಸರಿ ಪಕ್ಷಕ್ಕೆ ಕೌಂಟರ್​ ಕೊಡಲೆಂದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​, ಶಿವಸೇನೆ ಮತ್ತು ಎನ್​ಸಿಪಿ ಒಟ್ಟಾಗಿದ್ದೇವೆ. ಅಲ್ಲದೇ, ಬಿಜೆಪಿ ಜೊತೆಗೆ ಎನ್​ಸಿಪಿ ಏನು ಮಾಡಬೇಕಾಗಿಲ್ಲ ಎಂದು ತಿಳಿಸಿದರು.

ಯುಪಿಎ ಜಬಾವ್ದಾರಿ ಇಲ್ಲ: ಬಿಜೆಪಿ ವಿರುದ್ಧ ಹೋರಾಟಕ್ಕೆ ಯುಪಿಎ ಜಬಾವ್ದಾರಿ ವಹಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ, ಇದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಇದನ್ನು ನಾನು ಅನೇಕ ಬಾರಿ ಹೇಳಿದ್ದೇನೆ ಎಂದು ಶರದ್​ ಪವಾರ್​ ಸ್ಪಷ್ಟಪಡಿಸಿದರು. ಆದರೆ, ಮುಂದಿನ ನಡೆ ಬಗ್ಗೆ ಬಿಜೆಪಿಯೇತರ ಪಕ್ಷಗಳು ಒಂದಾಗಿ ಚರ್ಚೆ ಮಾಡಬೇಕು. ಎಲ್ಲ ಪಕ್ಷಗಳು ಒಂದೇ ವೇದಿಕೆಗೆ ಬಂದು ವಿಶೇಷವಾಗಿ ತೈಲ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಇತರ ವಿಷಯಗಳ ಬಗ್ಗೆ ಧ್ವನಿ ಎತ್ತಬೇಕೆಂದು ಸಲಹೆ ನೀಡಿದರು.

ಇದೇ ವೇಳೆ, ಬಿಜೆಪಿ ವಿರುದ್ಧ ಹೋರಾಟ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ತಮಗೆ ಪತ್ರ ಬರೆದಿರುವ ವಿಷಯವನ್ನು ತಿಳಿಸಿದರು. ಇತ್ತ, ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾವಿಕಾಸಗಾಡಿ ಮೈತ್ರಿಕೂಟದಲ್ಲಿ ಆಂತರಿಕ ಸಂಘರ್ಷ ಉಂಟಾಗಿದೆ ಎಂಬುವುದನ್ನು ತಳ್ಳಿ ಹಾಕಿದರು.

ಇದನ್ನೂ ಓದಿ: ಹಣೆಗೆ ತಿಲಕವಿಟ್ಟ ಹಿಂದೂ ಬಾಲಕಿಯರಿಗೆ ಥಳಿತ: ಜಮ್ಮು-ಕಾಶ್ಮೀರದಲ್ಲಿ ಶಿಕ್ಷಕ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.