ಮುಂಬೈ(ಮಹಾರಾಷ್ಟ್ರ): ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ರಾಣಾ ದಂಪತಿಗೆ ಇದೀಗ ಮುಂಬೈ ಸೆಷನ್ಸ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 'ನಿಮ್ಮ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಯಾಕೆ ಹೊರಡಿಸಬಾರದು? ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದಂತೆ ರಾಣಾ ದಂಪತಿ ತಮ್ಮ ಹೇಳಿಕೆಗಳ ಮೂಲಕ ಷರತ್ತು ಉಲ್ಲಂಘನೆ ಮಾಡಿದ್ದು, ಈವರೆಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಜೊತೆಗೆ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸೆಷನ್ಸ್ ಕೋರ್ಟ್ ಈ ರೀತಿಯಾಗಿ ನೋಟಿಸ್ ಜಾರಿಗೊಳಿಸಿದೆ. ಶಾಸಕ ರವಿ ರಾಣಾ ಹಾಗೂ ಸಂಸದೆ ನವನೀತ್ ಕೌರ್ಗೆ ಕೋರ್ಟ್ ನೀಡಿರುವ ಷರತ್ತು ಬದ್ಧ ಜಾಮೀನು ನಿಯಮ ಉಲ್ಲಂಘಣೆ ಮಾಡಿದ್ದಾರೆಂಬುದು ಮುಂಬೈ ಪೊಲೀಸರ ವಾದವಾಗಿದೆ.
ಇದನ್ನೂ ಓದಿ: ಮಸೀದಿಗೆ ದಲಿತ ಸಂಘಟನೆ ಕಾವಲು : 20ಕ್ಕೂ ಅಧಿಕ ಶ್ರೀರಾಮ ಸೇನೆ ಕಾರ್ಯಕರ್ತರು ಪೊಲೀಸ್ ವಶಕ್ಕೆ
ದೆಹಲಿಯತ್ತ ರಾಣಾ ದಂಪತಿ : ಮುಂಬೈನಲ್ಲಿ ತಮಗೆ ಆಗಿರುವ ಅನ್ಯಾಯದ ಬಗ್ಗೆ ದೂರು ನೀಡಲು ರಾಣಾ ದಂಪತಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಲ್ಲ ಮಾಹಿತಿ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸೇರಿದಂತೆ ಅನೇಕ ನಾಯಕರನ್ನ ಭೇಟಿ ಮಾಡಿ ತಮಗೆ ಆಗಿರುವ ತೊಂದರೆ ಬಗ್ಗೆ ದೂರು ನೀಡಲಿದ್ದೇನೆ ಎಂದು ನವನೀತ್ ಕೌರ್ ಹೇಳಿಕೊಂಡಿದ್ದಾರೆ.
ಜೈಲಿನಲ್ಲಿದ್ದ ವೇಳೆ ಅಲ್ಲಿನ ಪೊಲೀಸ್ ಅಧಿಕಾರಿಗಳು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆಂಬುದರ ಕುರಿತು ಈಗಾಗಲೇ ನವನೀತ್ ಕೌರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಸಹ ಬರೆದಿದ್ದಾರೆ. ಇದೇ ವಿಷಯನ್ನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರ ಮುಂದೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದಾರೆ.
ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23ರಂದು ಬಂಧನಕ್ಕೊಳಗಾಗಿದ್ದ ರಾಣಾ ದಂಪತಿ, ಮೇ 4ರಂದು ಮುಂಬೈನ ವಿಶೇಷ ಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಈ ವೇಳೆ ಕೆಲವೊಂದು ಷರತ್ತು ವಿಧಿಸಿ, ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.