ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿವಿಐಪಿ ಕೊಠಡಿಗೆ ಪ್ರವೇಶಿಸಲು ಯತ್ನಿಸಿದ್ದ ಯುವಕನ ಬಂಧನ

author img

By

Published : Jan 21, 2023, 3:52 PM IST

mumbai-police-arrested-rameshwar-mishra-who-breached-pm-modis-vvip-security

ಪ್ರಧಾನಿ ಮೋದಿ ಜ.12ರಂದು ಹುಬ್ಬಳ್ಳಿಯಲ್ಲಿ ರೋಡ್​ ಶೋ ನಡೆಸುತ್ತಿದ್ದಾಗ ಬಾಲಕನೊಬ್ಬ ಓಡಿ ಬಂದು ಹೂವಿನ ಹಾರ ಹಾಕಲು ಯತ್ನಿಸಿದ ಘಟನೆ ನಡೆದಿತ್ತು. ಇಂತಹದ್ದೆ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ಜರುಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಗುರುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಅಕ್ರಮವಾಗಿ ವಿವಿಐಪಿ ಕೊಠಡಿಗೆ ಪ್ರವೇಶಿಸಲು ಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಮೇಶ್ವರ ಮಿಶ್ರಾ ಎಂದು ಗುರುತಿಸಲಾಗಿದೆ. ಆರೋಪಿಯು ತಾನೊಬ್ಬ ರಾಷ್ಟ್ರೀಯ ಭದ್ರತಾ ದಳ (ಎನ್​ಎಸ್​ಜಿ)ದ ಕಮಾಂಡೋ ಎಂದು ನಕಲಿ ಗುರುತಿನ ಚೀಟಿ ತೋರಿಸಿ ಒಳ ಪ್ರವೇಶಿಸಲು ಯತ್ನಿಸುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೋದಿ ಭಾಷಣದ ವೇಳೆ ಡ್ರೋನ್ ಹಾರಾಟ: ಮೂವರು ಯುವಕರು ವಶಕ್ಕೆ

ನವಿ ಮುಂಬೈ ನಿವಾಸಿಯಾಗಿರುವ ಆರೋಪಿ ರಾಮೇಶ್ವರ, ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾನೆ. 2019ರವರೆಗೆ ಎನ್​ಎಸ್​ಜಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಪ್ರಧಾನಿ ಮೋದಿ ಸಭೆಗಾಗಿ ಮೀಸಲಿಟ್ಟಿದ್ದ ವಿವಿಐಪಿ ಕೊಠಡಿಗೆ ಪ್ರವೇಶಿಸಲು ಮುಂದಾಗಿದ್ದ ಎನ್ನಲಾಗಿದೆ. ಆದರೆ, ಯಾವ ಉದ್ದೇಶಕ್ಕಾಗಿ ವಿವಿಐಪಿ ಕೊಠಡಿಗೆ ನುಗ್ಗಲು ಆರೋಪಿ ಯತ್ನಿಸಿದ್ದ ಎಂಬ ಬಗ್ಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ.

ಅಂದು ನಡೆದಿದ್ದೇನು?: ಇದೇ ಗುರುವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಎಂಆರ್‌ಡಿ ಮೈದಾನದಲ್ಲಿ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಈ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಬೈ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಅಪರಾಧ ವಿಭಾಗದ ಘಟಕ 2ರ ಹಿರಿಯ ಪೊಲೀಸ್​ ಅಧಿಕಾರಿ ಜಯೇಶ್ ಕುಲಕರ್ಣಿ, ಸಹಾಯಕ ಪೊಲೀಸ್​ ಆಯುಕ್ತ ಚಂದ್ರಕಾಂತ ಜಾಧವ್, ಪೊಲೀಸ್ ಇನ್ಸ್‌ಪೆಕ್ಟರ್ ಬಾಳಾಸಾಹೇಬ್ ರಾವುತ್, ಸಬ್​ ಇನ್ಸ್‌ಪೆಕ್ಟರ್ ಪಾಂಡುರಂಗ ಶಿಂಧೆ, ಅವಿನಾಶ ವಾಲ್ವಿ ವಿವಿಐಪಿ ಕೊಠಡಿಯ ಭದ್ರತಾ ನಿರ್ವಹಣೆಯ ಹೊಣೆ ಹೊತ್ತಿದ್ದರು.

ಇದನ್ನೂ ಓದಿ: ಅಮಿತ್ ಶಾ ಮುಂಬೈ ಭೇಟಿ ವೇಳೆ ಭದ್ರತಾ ಲೋಪ; ಪೊಲೀಸರಿಂದ ಓರ್ವನ ಬಂಧನ

ವಿವಿಐಪಿ ಕೊಠಡಿಗೆ ಆಗಮಿಸುವ ಸಂಸದರು, ಸಚಿವರು, ಶಾಸಕರನ್ನು ತಪಾಸಣೆ ನಡೆಸಿ ಪೊಲೀಸರು ಬಿಡುತ್ತಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಪಿ ರಾಮೇಶ್ವರ ಮಿಶ್ರಾ ವಿವಿಐಪಿ ಕೊಠಡಿ ಬಳಿ ಬಂದಿದ್ದಾನೆ. ಈ ವೇಳೆ ತನ್ನ ಕುತ್ತಿಗೆಗೆ ಪ್ರಧಾನಿ ಕಾರ್ಯಾಲಯದ ಭದ್ರತಾ ಸಿಬ್ಬಂದಿಯ ಗುರುತಿನ ಚೀಟಿಯ ಟ್ಯಾಗ್​ ಧರಿಸಿ ಬಂದಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಗುರುತಿನ ಚೀಟಿಯನ್ನು ತೋರಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ರಾಮೇಶ್ವರ ಮಿಶ್ರಾ ಗುರುತಿನ ಚೀಟಿ ತೋರಿಸದೆ, ತಾನು ಪಠಾಣ್‌ಕೋಟ್‌ನಲ್ಲಿರುವ ಸೇನೆಯ ಬೆಟಾಲಿಯನ್ ದಿ ಗಾರ್ಡ್​​ ಹೀರೋ ಎಂದು ಹೇಳಿಕೊಂಡಿದ್ದಾನೆ. ಆದರೆ, ಪ್ರಧಾನಿ ಕಾರ್ಯಾಲಯದ ಭದ್ರತಾ ಸಿಬ್ಬಂದಿಯ ಗುರುತಿನ ಚೀಟಿಯ ಟ್ಯಾಗ್ ಕೊರಳಿಗೆ ಹಾಕಿಕೊಂಡಿದ್ದರಿಂದ ಪೊಲೀಸರು, ಅದರ ಗುರುತಿನ ಚೀಟಿ ತೋರಿಸುವಂತೆ ತಾಕೀತು ಮಾಡಿದ್ದಾರೆ. ಆದರೂ, ಗುರುತಿನ ಚೀಟಿ ತೋರಿಸದೆ ಹೆಚ್ಚಿನ ಮಾಹಿತಿಯನ್ನೂ ನೀಡಲು ಆರೋಪಿ ನಿರಾಕರಿಸಿದ್ದಾನೆ.

ಮಿಶ್ರಾನನ್ನು ಬಂಧಿಸಿ ಕರೆದೊಯ್ದ ಪೊಲೀಸರು: ತನ್ನ ಗುರುತಿನ ಚೀಟಿಯನ್ನು ತೋರಿಸದೇ ಇರುವುದರಿಂದ ಪೊಲೀಸರು ರಾಮೇಶ್ವರ ಮಿಶ್ರಾನನ್ನು ಬಂಧಿಸಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ವಿಚಾರಣೆ ನಡೆಸಿದಾಗ ಎನ್‌ಎಸ್‌ಜಿಯಲ್ಲಿ 2016ರಿಂದ 2019ರವರೆಗೆ ಕೆಲಸ ಮಾಡಿರುವುದಾಗಿ ತಿಳಿಸಿ ಗುರುತಿನ ಚೀಟಿಯನ್ನೂ ತೋರಿಸಿದ್ದಾನೆ. ಗುರುತಿನ ಚೀಟಿಯ ಅವಧಿ 2019ರವರೆಗೆ ಮಾತ್ರ ಇತ್ತು. ಆದರೆ, ಅದನ್ನು ತಿದ್ದುವ ಮೂಲಕ ರಾಮೇಶ್ವರ ಮಿಶ್ರಾ 2025ರವರೆಗೆ ಅದರ ಅವಧಿಯನ್ನು ವಿಸ್ತರಿಸಿಕೊಂಡಿದ್ದ ಎಂಬುವುದು ಬಯಲಾಗಿದೆ. ಆದ್ದರಿಂದ ಅಕ್ರಮ ಪ್ರವೇಶ ಮತ್ತು ವಂಚನೆ ಆರೋಪದಡಿ ಕೇಸ್​ ದಾಖಲಿಸಿ, ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ರೋಡ್​ ಶೋ ವೇಳೆ ಭದ್ರತಾ ಲೋಪ: ಮೋದಿಗೆ ಹಾರ ಹಾಕಲು ಬಂದ ಬಾಲಕ! ವಿಡಿಯೋ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.