ETV Bharat / bharat

ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಪಕ್ಕದ ಮನೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಶಂಕೆ

author img

By

Published : Jul 28, 2023, 7:51 PM IST

ನಾಪತ್ತೆಯಾಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿಯ ಮೃತದೇಹವು ಪಕ್ಕದ ಮನೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ ನಡೆದಿದೆ.

Missing minor girl found buried in neighbour's basement in Bihars Begusarai
ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಪಕ್ಕದ ಮನೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರವೆಸಗಿ ಕೊಲೆ ಶಂಕೆ

ಬೇಗುಸರಾಯ್ (ಬಿಹಾರ): ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಹತ್ತು ವರ್ಷದ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾಗಿದ್ದು, ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಸಂತ್ರಸ್ತೆಯ ಮೃತದೇಹವನ್ನು ಮನೆಯ ನೆಲಮಾಳಿಗೆಯಲ್ಲಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಇಲ್ಲಿನ ಬಚ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕಿ ಕಳೆದ ಜುಲೈ 24ರಿಂದ ಕಾಣೆಯಾಗಿದ್ದಳು. ಬಾಲಕಿಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಬಾಲಕಿ ನಾಪತ್ತೆ ಬಗ್ಗೆ ಪೊಲೀಸ್​ ಠಾಣೆಗೆ ಕುಟುಂಬ ಸದಸ್ಯರು ದೂರು ನೀಡಿದ್ದರು. ಈ ದೂರಿನ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಗುರುವಾರ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ದೃಷ್ಕೃತ್ಯ ಬಯಲಾಗಿದೆ. ಸಂತ್ರಸ್ತೆಯ ನೆರೆಯ ಮನೆಯಲ್ಲೇ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಂತ್ರಸ್ತ ಬಾಲಕಿ ನಾಲ್ಕನೇ ತರಗತಿ ಓದುತ್ತಿದ್ದಳು. ಜುಲೈ 24ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಗೋರಂಟಿ ಎಲೆಗಳು ತರಲೆಂದು ಪಕ್ಕದ ಮನೆಯಿಂದ ಹೊರಗಡೆ ಬಂದಿದ್ದಳು. ಆದರೆ, ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಪಕ್ಕದ ಮನೆಯವರ ಮೇಲೆ ಅನುಮಾನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಕಿ ನಾಪತ್ತೆ ಬಗ್ಗೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು ಎಂದು ಬೇಗುಸರಾಯ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಐಪಿಎಸ್ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.

ಈ ತನಿಖೆಯ ಭಾಗವಾಗಿ ಶಂಕಿತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಗುರುವಾರ ಇಡೀ ವಿಚಾರಣೆಗೆ ಒಳಪಡಿಸಿದ್ದರು. ಈ ಶಂಕಿತರು ಆರಂಭದಲ್ಲಿ ತಮಗೆ ಏನು ಗೊತ್ತಿಲ್ಲ ಎಂದು ಬಚಾವ್​ ಆಗಲು ಪ್ರಯತ್ನಿಸುತ್ತಿದ್ದರು. ಆದರೆ, ವಿಚಾರಣೆ ತೀವ್ರಗೊಳಿಸಿದಾಗ ಬಾಲಕಿಯನ್ನು ಮನೆಯ ನೆಲಮಾಳಿಗೆಯಲ್ಲಿ ಹೂತಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಇದರಿಂದ ಶ್ವಾನ ದಳದಿಂದ ಪರಿಶೀಲನೆ ನಡೆಸಿದಾಗ ರಾತ್ರಿ ಸಂತ್ರಸ್ತೆಯ ಮೃತದೇಹ ದೊರೆತಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ಪ್ಲ್ಯಾಸ್ಟಿಕ್​ ಚೀಲದಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲಕಿಯ ಶವವನ್ನು ಸುತ್ತಲಾಗಿತ್ತು. ಸದ್ಯಕ್ಕೆ ಬಾಲಕಿಯನ್ನು ಕೊಲೆ ಮಾಡಿರುವುದು ಹಾಗೂ ನಂತರ ಸಾಕ್ಷ್ಯನಾಶಕ್ಕೆ ಯತ್ನಿಸಿರುವುದು ಖಚಿತವಾಗಿದೆ. ಆದರೆ, ಲೈಂಗಿಕ ದೌರ್ಜನ್ಯ ಮತ್ತು ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಅದರ ವರದಿ ಬಂದ ಬಳಿಕ ಸತ್ಯಾಂಶ ಹೊರಬರಲಿದೆ. ಜೊತೆಗೆ ಬಂಧಿತ ಆರು ಆರೋಪಿಗಳನ್ನು ವಿಚಾರಣೆ ಮುಂದುವರೆಸಲಾಗಿದೆ. ಫಾಸ್ಟ್​ ಕೋರ್ಟ್​ಗೆ ಈ ಪ್ರಕರಣದ ವಿಚಾರಣೆ ನೀಡಲಾಗುವುದು ಎಂದು ಯೋಗೇಂದ್ರ ಕುಮಾರ್ ವಿವರಿಸಿದ್ದಾರೆ.

ಮತ್ತೊಂದೆಡೆ, ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದ ನಂತರ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: 3 ದಿನಗಳ ಬಳಿಕ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.